ವಿಜ್ಞಾನ ಗಂಗೆಯ ಬಿಂದುಸಾರ

11:06 PM

ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ನೆನಪಿಗಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೂರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದೆ. ಕನ್ನಡದ ಅನೇಕ ಪ್ರಸಿದ್ಧ ಲೇಖಕರ ಕೃತಿಗಳ ಜೊತೆಗೆ ಈ ಐವತ್ತು ವರ್ಷಗಳಲ್ಲಿ ಪ್ರಕಟವಾದ ಕವಿತೆಗಳು, ಸಣ್ಣಕತೆಗಳು, ವಿಜ್ಞಾನ ಸಾಹಿತ್ಯ ಮುಂತಾದ ಅನೇಕ ಪ್ರಕಾರಗಳ ಪ್ರಾತಿನಿಧಿಕ ಸಂಕಲನಗಳನ್ನೂ ಪ್ರಕಟಿಸಿರುವುದು ಈ 'ಸುವರ್ಣ ಸಾಹಿತ್ಯ ಗ್ರಂಥಮಾಲೆ'ಯ ವಿಶೇಷ. ಕನ್ನಡ ಪುಸ್ತಕ ಅಂದಾಕ್ಷಣ ಸಿಕ್ಕಾಪಟ್ಟೆ ದುಬಾರಿ ಎಂಬ ಭಾವನೆ ಮೂಡುವ ಈ ದಿನಗಳಲ್ಲಿ ಇಡೀ ನೂರು ಪುಸ್ತಕಗಳ ಸರಣಿಯನ್ನು ಕೇವಲ ಮೂರು ಸಾವಿರ ರೂಪಾಯಿಗಳಿಗೆ ಲಭ್ಯವಾಗಿಸಿರುವುದು ಅತ್ಯಂತ ಶ್ಲಾಘನೀಯ ಸಂಗತಿ (ಹೌದು ಸ್ವಾಮೀ, ಒಂದು ಪುಸ್ತಕಕ್ಕೆ ಮೂವತ್ತೇ ರೂಪಾಯಿ!).

ಈ ಸರಣಿಯ ಭಾಗವಾಗಿ ಹೊರಬಂದಿರುವ ವಿಜ್ಞಾನ ಬರಹಗಳ ಸಂಕಲನ 'ವಿಜ್ಞಾನ ಗಂಗೆಯ ಬಿಂದುಸಾರ'. ಈ ಸಂಕಲನದ ಸಂಪಾದಕರು ಶ್ರೀ ನಾಗೇಶ ಹೆಗಡೆ. ಅವರೇ ಹೇಳಿರುವಂತೆ ಇದು [ಕಳೆದ ಐವತ್ತು ವರ್ಷಗಳ] ಸುದೀರ್ಘ ಅವಧಿಯ ಕನ್ನಡ ವಿಜ್ಞಾನ ಸಾಹಿತ್ಯವನ್ನು ಪ್ರಾತಿನಿಧಿಕವಾಗಿ ಸಂಕಲಿಸುವ ಪುಟ್ಟ ಯತ್ನ. ಪ್ರಸಿದ್ಧ ಲೇಖಕರಾದ ಡಾ. ಬಿ. ಜಿ. ಎಲ್. ಸ್ವಾಮಿ, ಪಾ. ವೆಂ. ಆಚಾರ್ಯ, ಡಾ. ಎಚ್. ನರಸಿಂಹಯ್ಯ, ಡಾ. ಕೃಷ್ಣಾನಂದ ಕಾಮತ್, ಜಿ. ಟಿ. ನಾರಾಯಣರಾವ್, ಡಾ. ಸಿ. ಆರ್. ಚಂದ್ರಶೇಖರ್, ಡಾ. ಎಚ್. ಆರ್. ಕೃಷ್ಣಮೂರ್ತಿ, ಪ್ರೊ. ಜೆ. ಆರ್. ಲಕ್ಷ್ಮಣರಾವ್, ಪ್ರೊ. ಎಂ. ಆರ್. ನಾಗರಾಜು, ಅಡ್ಯನಡ್ಕ ಕೃಷ್ಣಭಟ್, ಟಿ. ಆರ್. ಅನಂತರಾಮು, ಡಾ. ಬಿ. ಎಸ್. ಶೈಲಜಾ, ಹಾಲ್ದೊಡ್ಡೇರಿ ಸುಧೀಂದ್ರ ಮುಂತಾದ ಹಿರಿಯ ಬರಹಗಾರರ ಇಪ್ಪತ್ತಾರು ಲೇಖನಗಳು ಈ ಸಂಕಲನದಲ್ಲಿವೆ.

ನನ್ನ ದೃಷ್ಟಿಯಲ್ಲಿ ಕನ್ನಡದ ಅತ್ಯುತ್ತಮ ವಿಜ್ಞಾನ ಲೇಖಕರು ಡಾ. ಬಿ. ಜಿ. ಎಲ್. ಸ್ವಾಮಿ. ಅವರ ಲೇಖನ ಪ್ರಕಟವಾಗಿರುವ ಈ ಪುಸ್ತಕದಲ್ಲಿ ನನ್ನದೂ ಒಂದು ಬರಹವನ್ನು ಸೇರಿಸಿರುವುದು ಅದೆಷ್ಟು ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ಇದನ್ನು ನನಗೆ ಈವರೆಗೂ ದೊರೆತಿರುವ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆ ಎಂದು ಭಾವಿಸಿ ಸಂತೋಷಪಡುತ್ತಿದ್ದೇನೆ. ಎರಡು ದಿನ ಮುಂಚಿತವಾಗಿಯೇ ದೊರೆತಿರುವ ಈ ಉಡುಗೊರೆಗೆ, ಹಾಗೂ ನನ್ನ ಸಂತೋಷಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸಲು ಮಾತುಗಳೇ ಹೊರಡುತ್ತಿಲ್ಲ.
ವಿಜ್ಞಾನ ಗಂಗೆಯ ಬಿಂದುಸಾರ, ೨೨೪ ಪುಟಗಳು, ಬೆಲೆ ಇಪ್ಪತ್ತೈದು ರೂಪಾಯಿಗಳು
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು

You Might Also Like

5 Responses

Popular Posts

Like us on Facebook