ತಲೆ ಮೇಲೆ ಕುಂಬಳಕಾಯಿ!

3:45 PM


ಕೆಲವರ್ಷಗಳ ಹಿಂದೆ ಕರ್ನಾಟಕದಲ್ಲಿ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾದಾಗ ಎಷ್ಟೆಲ್ಲ ಗಲಾಟೆಯಾಗಿತ್ತು ನೆನಪಿದೆಯಾ? ಪರವಿರೋಧದ ಚರ್ಚೆ, ಪ್ರತಿಭಟನೆಯ ಸುದ್ದಿ, ವ್ಯಂಗ್ಯಚಿತ್ರಗಳು - ಹೀಗೆ ಎಷ್ಟೊಂದು ದಿನ ಮಾಧ್ಯಮಗಳಲ್ಲಿ ಹೆಲ್ಮೆಟ್ಟೇ ತುಂಬಿಕೊಂಡಿತ್ತು.

ಇಂಥದ್ದೇ ಪರಿಸ್ಥಿತಿ ಈಗ ಸೃಷ್ಟಿಯಾಗಿರುವುದು ನೈಜೀರಿಯಾದಲ್ಲಿ. ಆದರೆ ಅಲ್ಲಿನ ಜನ ಮಾತ್ರ ಹೆಲ್ಮೆಟ್ ಕಡ್ಡಾಯ ಆದೇಶ ಹಾಗೂ ಹೆಲ್ಮೆಟ್‌ಗಳ ದುಬಾರಿ ಬೆಲೆಯ ವಿರುದ್ಧ ಕೂಗಾಡಿ ಕಿರುಚಾಡಿ ಸುಸ್ತುಮಾಡಿಕೊಳ್ಳುವ ಬದಲು ವಿನೂತನ ತಂತ್ರವನ್ನು ಕಂಡುಕೊಂಡಿದ್ದಾರೆ ಅಂತ ಬಿಬಿಸಿ ವರದಿಮಾಡಿದೆ.

ಸರ್ಕಾರಕ್ಕೆ ಶಿರಸ್ತ್ರಾಣ ಬೇಕು ತಾನೆ, ಮಾಡ್ತೀನಿ ತಡಿ ಅಂದುಕೊಂಡ ಯಾವನೋ ಪುಣ್ಯಾತ್ಮ ಒಣಗಿಸಿದ ಸೋರೆಬುರುಡೆಯನ್ನು ಹೆಲ್ಮೆಟ್ಟಿನ ಹಾಗೆ ಕಾಣುವಂತೆ ಕತ್ತರಿಸಿ ತಲೆಮೇಲಿಟ್ಟುಕೊಂಡು ರಸ್ತೆಗಿಳಿದಿದ್ದಾನೆ. ಅದನ್ನು ನೋಡಿ ಸಿಕ್ಕಾಪಟ್ಟೆ ಇಂಪ್ರೆಸ್ ಆದ ನೂರಾರು ಜನ ಇದೀಗ ಅದೇ ಐಡಿಯಾ ಉಪಯೋಗಿಸಲು ಶುರುಮಾಡಿದ್ದಾರಂತೆ. ಸೋರೆಬುರುಡೆ ಹೆಲ್ಮೆಟ್ಟಿನಂತೆ ಕಾಣಿಸಲು ಅದಕ್ಕೆ ಬಣ್ಣಬಳಿದು ಅದರ ಮೇಲೆ ಬ್ರಾಂಡ್ ನೇಮ್ ಬರೆದುಕೊಂಡವರೂ ಇದ್ದಾರಂತೆ!

ಇಂಥ ಬುರುಡೆದಾಸರನ್ನು ತಡೆಯಲು ಈಗ ಸರ್ಕಾರ ಪರದಾಡುತ್ತಿದೆ. ಎಚ್ಚರಿಸಿದ್ದಾಯ್ತು, ದಂಡ ಹಾಕಿದ್ದಾಯ್ತು, ಅರೆಸ್ಟ್ ಮಾಡಿದ್ದಾಯ್ತು, ಬೈಕುಗಳನ್ನು ಮುಟ್ಟುಗೋಲು ಹಾಕಿಕೊಂಡದ್ದೂ ಆಯ್ತು - ಜನ ಮಾತ್ರ ಯಾವುದಕ್ಕೂ ಬಗ್ಗುತ್ತಿಲ್ಲವಂತೆ.

ಜನರ ತಲೆಗೆ ಹೆಲ್ಮೆಟ್ ಹಾಕಲು ಹೊರಟ ಸರ್ಕಾರಕ್ಕೆ ಈಗ ತಲೆಚಚ್ಚಿಕೊಳ್ಳುವ ಕಾಲ!

You Might Also Like

0 Responses

Popular Posts

Like us on Facebook