ಮಾತಾಡುವ ಚಿತ್ರಗಳು - ೧೪: ಬನವಾಸಿ ದೇಶದಲ್ಲಿ ಒಂದು ದಿನ

9:09 AM

ಮಾತಾಡುವ ಚಿತ್ರಗಳ ಈ ಕಂತಿನ ಜೊತೆಗೆ ಪುಟ್ಟದೊಂದು ಪ್ರವಾಸ ಕಥನವೂ ಇದೆ!


ಸಂಸ್ಕೃತಿ ಸಂಪನ್ನ ಮನುಷ್ಯನಾಗಿ ಹುಟ್ಟಿದರೆ ಬನವಾಸಿ ದೇಶದಲ್ಲೇ  ಹುಟ್ಟಬೇಕು; ಒಂದು ವೇಳೆ ಆಗದಿದ್ದರೆ ಅಲ್ಲಿ ಕೊನೆಯ ಪಕ್ಷ ಕೋಗಿಲೆಯಾಗಿಯಾದರೂ ಮರಿ ದುಂಬಿಯಾಗಿಯಾದರೂ ಹುಟ್ಟಬೇಕು ಎಂದಿದ್ದ ಪಂಪ ಮಹಾಕವಿ.

ಆತ ಹೀಗೆ ಹೇಳುವಂತೆ ಮಾಡಿದ ಬನವಾಸಿಯನ್ನು ಒಮ್ಮೆಯಾದರೂ ನೋಡಲೇಬೇಕು ಅಂದುಕೊಂಡು ಬಹಳ ವರ್ಷಗಳೇ ಆಗಿದ್ದರೂ ಅಲ್ಲಿಗೆ ಹೋಗಿಬರಲು ಅದೇಕೋ ಕಾಲವೇ ಕೂಡಿಬಂದಿರಲಿಲ್ಲ.

ಅಂತೂ ಇಂತೂ ಕಳೆದ ವಾರಾಂತ್ಯದಲ್ಲಿ ಬನವಾಸಿಗೆ ಹೋಗಿಬರೋಣ ಎಂದು ಹೊರಟಿದ್ದಾಯಿತು. ಅಲ್ಲಿನ ವಿಶ್ವೋದಯ ಗ್ರಾಮೀಣ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ನಡೆಸುವ ವನವಾಸಿಕ ಟೂರಿಸ್ಟ್ ಹೋಮ್ ಸಂಪರ್ಕಿಸಿ ರೂಮುಗಳನ್ನೂ ಕಾದಿರಿಸಿಕೊಂಡೆವು. ಅಡ್ವಾನ್ಸ್ ಏನೂ ಬೇಡ ಬಿಡಿ ಎಂದ ಅಲ್ಲಿನ ವ್ಯವಸ್ಥಾಪಕ ಶ್ರೀ ಬ್ರಹ್ಮಕುಮಾರ್, ನಮ್ಮೊಡನೆ ಸಂಪರ್ಕದಲ್ಲಿದ್ದು ಪ್ರವಾಸದ ತಯಾರಿಗೆ ಸಾಕಷ್ಟು ನೆರವು ನೀಡಿದರು.

ಶನಿವಾರ ಬೆಳಗಿನ ಜಾವ ಒಂದು ಗಂಟೆ ವೇಳೆಗೆ ಬೆಂಗಳೂರಿಂದ ಹೊರಟು ಚಿತ್ರದುರ್ಗ-ಹಾವೇರಿ ಮಾರ್ಗವಾಗಿ ಬನವಾಸಿ ತಲುಪಿದಾಗ ಏಳು ಗಂಟೆ. ತಣ್ಣನೆ ವಾತಾವರಣ, ಎಲ್ಲೆಲ್ಲೂ ಹಸಿರು. ಇತ್ತೀಚೆಗಷ್ಟೆ ಸುರಿದ ಧಾರಾಕಾರ ಮಳೆಯಿಂದ ಕೆರೆಗಳೆಲ್ಲ ಭರ್ತಿಯಾಗಿದ್ದವು; ವರದಾ ನದಿಯಲ್ಲೂ ತುಂಬ ನೀರಿತ್ತು.

ಸ್ನಾನ -ತಿಂಡಿ ಮುಗಿಸಿ ನಾವು ಹೋದದ್ದು ಮಧುಕೇಶ್ವರ ದೇವಸ್ಥಾನಕ್ಕೆ. ಕನ್ನಡನಾಡಿನ ಮೊದಲ ರಾಜಧಾನಿಯ ಆರಾಧ್ಯ ದೈವ ಮಧುಕೇಶ್ವರ. ಈ ದೇವಸ್ಥಾನದ ನಿರ್ಮಾಣವಾದದ್ದು ಕದಂಬರ ಕಾಲದಲ್ಲಿ. ಸುಂದರ ಕೆತ್ತನೆಗಳಿರುವ ಈ ದೇವಸ್ಥಾನದಲ್ಲಿ ಅನೇಕ ವಿಶೇಷ ಆಕರ್ಷಣೆಗಳೂ ಇವೆ - ಒಂದು ಕಣ್ಣಿನಿಂದ ಈಶ್ವರನನ್ನು ಇನ್ನೊಂದು ಕಣ್ಣಿನಿಂದ ಪಾರ್ವತಿಯನ್ನು ನೋಡುವ ಬಸವಣ್ಣ, ಕಲ್ಲಿನ ಮಂಚ, ಅರ್ಧ ಗಣೇಶ ಹೀಗೆ.

ಬನವಾಸಿಯ ಸುತ್ತಮುತ್ತ ಪೈನಾಪಲ್ ಬೆಳೆಯುತ್ತಾರೆ. ಅದನ್ನು ಸಂಸ್ಕರಿಸುವ ಕಾರ್ಖಾನೆಗಳೂ ಇವೆ. ಪೈನಾಪಲ್ ಹೇಗೆ ಬೆಳೆಯುತ್ತಾರೆ ಎಂದೇ ಗೊತ್ತಿರದಿದ್ದ ನಮಗೆ ಪೈನಾಪಲ್ ತೋಟ ನೋಡಿದ್ದು ಖುಷಿಕೊಟ್ಟ ಸಂಗತಿ. ಪೈನಾಪಲ್ ಹೋಳುಗಳು, ಜ್ಯೂಸು ಇತ್ಯಾದಿಗಳನ್ನು ಸಿದ್ಧಪಡಿಸುವ ಕಾರ್ಖಾನೆಗೂ ಹೋಗಿಬಂದೆವು.

ಗುಡ್ನಾಪುರದ ಕೆರೆ ನಮ್ಮ ಮುಂದಿನ ಗುರಿ. ಇಲ್ಲಿ ಸೂರ್ಯಾಸ್ತ ಬಹಳ ಚೆನ್ನಾಗಿ ಕಾಣುತ್ತಂತೆ; ನಮಗೆ ಅದನ್ನು ನೋಡುವ ಅವಕಾಶ ಸಿಗಲಿಲ್ಲ. ಅಲ್ಲೇ ಸಮೀಪದಲ್ಲಿದ್ದ ಐತಿಹಾಸಿಕ ರಾಣಿಮಹಲ್‍ಗೂ ಹೋಗಿದ್ವಿ; ಆದರೆ ಅದರ ಮೇಲ್ವಿಚಾರಕ ಗೇಟಿಗೆ ಬೀಗಹಾಕಿಕೊಂಡು ಬೀಡಿಸೇದಲು ಹೋಗಿದ್ದ ಕಾರಣ ಹೋದ ದಾರಿಗೆ ಸುಂಕವಿಲ್ಲ ಅಂತ ವಾಪಸ್ ಬಂದದ್ದಾಯಿತು.

ಮಧ್ಯಾಹ್ನದ ಊಟ ಇನ್ನೊಂದು ವಿಶೇಷ. ಖಾನಾವಳಿಯ ಆತ್ಮೀಯ ಉಪಚಾರದಲ್ಲಿ ಎಲ್ಲರೂ ಎರಡೆರಡು ರೊಟ್ಟಿ ಜಾಸ್ತಿಯೇ ತಿಂದ್ವಿ!

ಸಂಜೆ ನಮ್ಮ ಪ್ರಯಾಣ ಸಾಗಿದ್ದು ಗುಡವಿ ಪಕ್ಷಿಧಾಮದ ಕಡೆ. ಇಲ್ಲಿನ ನಿರ್ವಹಣೆಗೆ ಅರಣ್ಯ ಇಲಾಖೆ ಸಾಕಷ್ಟು ಮುತುವರ್ಜಿ ವಹಿಸಿದಂತೆ ಕಾಣುತ್ತದೆ. ಬಹುಶಃ ಇದು ವಲಸೆ ಋತುವಿನ ಅಂತ್ಯವಿರಬೇಕು; ಜಾಸ್ತಿ ಹಕ್ಕಿಗಳ ದರ್ಶನವಾಗಲಿಲ್ಲ. ರಾತ್ರಿ ಅಲ್ಲಿಂದ ಬಂದಮೇಲೆ ಬನವಾಸಿ ಮಳೆಯ ಅನುಭವವೂ ಆಯ್ತು.

ಮರುದಿನ ಬೆಳಗ್ಗೆ ನಮ್ಮ ಟೂರಿಸ್ಟ್ ಹೋಮ್ ಸಮೀಪವೇ ಇದ್ದ ಪಂಪವನದತ್ತ ಹೊರಟೆವು. ಮುಂಜಾವಿನ ಮಂಜಿನಲ್ಲಿ ವಾಕಿಂಗು ಸಖತ್ತಾಗಿತ್ತು. ಇತರ ಹಕ್ಕಿಗಳ ಕಲರವದ ನಡುವೆ ಅಲ್ಲೆಲ್ಲಿಂದಲೋ ನವಿಲಿನ ಕೂಗೂ ಕೇಳಿಬಂತು.

ಪಂಪವನದಿಂದ ಮರಳಿ ಯಾಣ-ಸಹಸ್ರಲಿಂಗ ಮಾರ್ಗವಾಗಿ ಬೆಂಗಳೂರಿನತ್ತ ಹೊರಟಾಗ ನನ್ನ ಮನವೂ ಬನವಾಸಿ ದೇಶವನ್ನೇ ನೆನೆಯುತ್ತಿತ್ತು!

ವನವಾಸಿಕ ಟೂರಿಸ್ಟ್ ಹೋಮ್‌ನದ್ದು ಸರಳ ಸುಂದರ ವಿನ್ಯಾಸ. ಸಿಬ್ಬಂದಿ ಸ್ನೇಹಪರರು. ಊಟ ತಿಂಡಿ ಅಲ್ಲಿಗೇ ತರಿಸಿಕೊಡುವ ವ್ಯವಸ್ಥೆ ಇದೆ. ಬನವಾಸಿ ಚಿತ್ರಗಳ ಪೋಸ್ಟ್‌ಕಾರ್ಡುಗಳೂ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿಕೊಡಿ.

You Might Also Like

2 Responses

Popular Posts

Like us on Facebook