ಉದಯವಾಣಿ ಅಂಕಣ: ಸಮಾಜ ಜಾಲಗಳ ಲೋಕದಲ್ಲಿ

9:14 AM

ಜುಲೈ ೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. ಮೈಸ್ಪೇಸ್-ಫೇಸ್‌ಬುಕ್-ಗೂಗಲ್ ಪ್ಲಸ್ ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಬರೆದದ್ದು. ಪತ್ರಿಕೆಯವರೇಕೋ ಗೂಗಲ್ ಪ್ಲಸ್ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಆ ಶೀರ್ಷಿಕೆ  ಲೇಖನಕ್ಕೆ ಅಷ್ಟಾಗಿ ಹೊಂದುವುದಿಲ್ಲ ಎನ್ನುವುದು ನನ್ನ ಅನಿಸಿಕೆ.

ಅಂತರಜಾಲ ಲೋಕದ ಸುದ್ದಿಮನೆಗೆ ಕಳೆದ ಕೆಲದಿನಗಳಿಂದ ಬಿಡುವೇ ಇಲ್ಲ; ಒಂದರ ಮೇಲೊಂದರಂತೆ ಹೊಸಹೊಸ ಸುದ್ದಿಗಳು ಬರುತ್ತಲೇ ಇವೆ.

ಇಂತಹ ಸುದ್ದಿಗಳಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡಿದ್ದು ಪ್ರಾಯಶಃ ಗೂಗಲ್ ಪ್ಲಸ್ ಅನಾವರಣದ ವಿಷಯ. ಅದೇ ಸಮಯದಲ್ಲಿ ಕಾಣಿಸಿಕೊಂಡ, ಆದರೆ ಅಷ್ಟಾಗಿ ಪ್ರಚಾರಪಡೆಯದ, ಇನ್ನೊಂದು ಸುದ್ದಿ ಮೈಸ್ಪೇಸ್ ಡಾಟ್ ಕಾಮ್ ಮಾರಾಟದ ಕುರಿತದ್ದು. ಈವರೆಗೆ ಅತ್ಯಂತ ಕ್ಷಿಪ್ರಗತಿಯ ಬೆಳೆವಣಿಗೆ ಕಂಡಿರುವ ಫೇಸ್‌ಬುಕ್ ಜನಪ್ರಿಯತೆ ನಿಧಾನಕ್ಕೆ ಕಡಿಮೆಯಾಗುತ್ತಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದ ಅಧ್ಯಯನವೊಂದರ ಸುದ್ದಿಯೂ ಅಲ್ಲಲ್ಲಿ ಕಾಣಿಸಿಕೊಂಡಿದೆ.

ಇವೆಲ್ಲವೂ ಸೋಷಿಯಲ್ ನೆಟ್‌ವರ್ಕ್ ಅಥವಾ ಸಮಾಜ ಜಾಲಗಳಿಗೆ ಸಂಬಂಧಪಟ್ಟ ಸುದ್ದಿಗಳು ಎನ್ನುವುದು ವಿಶೇಷ.

***
ಇಮೇಲ್, ಚಾಟಿಂಗ್ ಮುಂತಾದ ಅನೇಕ ಮಾಧ್ಯಮಗಳ ಮೂಲಕ ವಿಶ್ವದ ಮೂಲೆಮೂಲೆಗಳಲ್ಲಿರುವವರ ನಡುವೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧ್ಯವಾಗಿಸಿದ್ದು ಅಂತರಜಾಲ ನಮಗೆ ಕೊಟ್ಟ ಅತ್ಯಂತ ದೊಡ್ಡ ಕೊಡುಗೆ. ಸೋಷಿಯಲ್ ನೆಟ್‌ವರ್ಕ್ ಅಥವಾ ಸಮಾಜ ಜಾಲಗಳ ಕಲ್ಪನೆ ಕೂಡ ಇದೇ ನಿಟ್ಟಿನಲ್ಲಿ ಇನ್ನೊಂದು ದೊಡ್ಡ ಸಾಧನೆ.

ಹಳೆಯ ಗೆಳೆಯರ ಜೊತೆ ಮತ್ತೆ ಸಂಪರ್ಕ ಪಡೆದುಕೊಳ್ಳಲು, ಹೊಸಹೊಸ ಜನರನ್ನು ಪರಿಚಯಿಸಿಕೊಂಡು ಅವರೊಡನೆ ಗೆಳೆತನ ಬೆಳೆಸಲು, ನಮ್ಮ ಚಟುವಟಿಕೆಗಳ ಬಗೆಗೆ ಮಿತ್ರರಿಗೆಲ್ಲ ಹೇಳಲು, ಛಾಯಾಚಿತ್ರ-ವೀಡಿಯೋಗಳನ್ನು ಹಂಚಿಕೊಳ್ಳಲು ಈ ಸಮಾಜ ಜಾಲಗಳು ಸಹಾಯಮಾಡುತ್ತವೆ.

ನಾವು ಆಗಿಂದಾಗ್ಗೆ ಕೇಳುವ ಫೇಸ್‌ಬುಕ್, ಟ್ವೀಟರ್, ಆರ್ಕುಟ್ ಇವೆಲ್ಲ ಸಮಾಜ ಜಾಲತಾಣಗಳೇ.
***
ಸಮಾಜ ಜಾಲಗಳ ಕಲ್ಪನೆ ಒಂದು ಸುದೀರ್ಘ ಅವಧಿಯಲ್ಲಿ ಬೆಳೆದದ್ದು; ಹೀಗಾಗಿ ಇದೇ ಮೊದಲ ಸಮಾಜ ಜಾಲತಾಣ ಎಂದು ನಾವು ಯಾವ ತಾಣದತ್ತಲೂ ಬೊಟ್ಟುಮಾಡಿ ತೋರಿಸುವುದು ಕಷ್ಟ. ವಿವಿಧ ತಾಣಗಳ ಮೂಲಕ ಲಭ್ಯವಾಗುತ್ತಿದ್ದ ಬುಲೆಟಿನ್ ಬೋರ್ಡ್‌ಗಳು, ಚಾಟಿಂಗ್, ಉಚಿತ ವೈಯಕ್ತಿಕ ಪುಟಗಳು ಮುಂತಾದ ಸೇವೆಗಳು ನಿಧಾನಕ್ಕೆ ಬೆಳೆಯುತ್ತ ಇಂದಿನ ಸಮಾಜ ಜಾಲಗಳಾಗಿ ರೂಪಗೊಂಡಿವೆ ಎನ್ನಬಹುದೇನೋ.

ನಮಗೆ ಈಗ ಪರಿಚಯವಿರುವ ರೂಪದ ಸಮಾಜ ಜಾಲತಾಣಗಳು ಕಾಣಿಸಿಕೊಳ್ಳಲು ಪ್ರಾರಂಭವಾದದ್ದು ಕಳೆದ ಶತಮಾನದ ಕೊನೆಯ ದಶಕದಲ್ಲಿ. ಸಿಕ್ಸ್‌ಡಿಗ್ರೀಸ್, ಫ್ರೆಂಡ್‌ಸ್ಟರ್, ಮೈಸ್ಪೇಸ್, ಲಿಂಕ್ಡ್‌ಇನ್, ಬೇಬೋ ಇವು ಮೊದಲಿಗೆ ಕಾಣಿಸಿಕೊಂಡ ಸಮಾಜ ಜಾಲತಾಣಗಳಲ್ಲಿ ಕೆಲವು.

ಮೈಸ್ಪೇಸ್ (www.myspace.com) ಅಂತೂ ಅತ್ಯಲ್ಪ ಅವಧಿಯಲ್ಲೇ ಅಭೂತಪೂರ್ವ ಜನಪ್ರಿಯತೆ ಗಳಿಸಿಕೊಂಡಿತು. ಒಂದು ಕಾಲದಲ್ಲಿ ಈ ತಾಣಕ್ಕೆ ಭೇಟಿನೀಡುತ್ತಿದ್ದವರ ಸಂಖ್ಯೆ ಗೂಗಲ್ ಡಾಟ್ ಕಾಮ್ ಸಂದರ್ಶಕರಿಗಿಂತ ಹೆಚ್ಚಿತ್ತಂತೆ!

ಮಾಧ್ಯಮ ದೊರೆ ರೂಪರ್ಟ್ ಮರ್ಡೋಕ್ ಸಾರಥ್ಯದ ನ್ಯೂಸ್‌ಕಾರ್ಪ್ ಸಂಸ್ಥೆ ೨೦೦೫ರಲ್ಲಿ ಐದುನೂರಾ ಎಂಬತ್ತು ಮಿಲಿಯನ್ ಡಾಲರುಗಳ ಭಾರೀ ಮೊತ್ತ ಪಾವತಿಸಿ ಮೈಸ್ಪೇಸ್ ಅನ್ನು ಕೊಂಡುಕೊಂಡಿತು. ೨೦೦೮ರಲ್ಲಿ ಎಒಎಲ್ ಸಂಸ್ಥೆ ಬೇಬೋ (www.bebo.com) ಅನ್ನು ಎಂಟುನೂರ ಐವತ್ತು ಮಿಲಿಯನ್ ಡಾಲರ್ ಪಾವತಿಸಿ ತನ್ನದಾಗಿಸಿಕೊಂಡಿತು. ಸಮಾಜ ಜಾಲಗಳು ವಿಶ್ವವ್ಯಾಪಿ ಜಾಲದಲ್ಲಿ ದೊಡ್ಡದೊಂದು ಕ್ರಾಂತಿಯನ್ನೇ ತರುವ ನಿರೀಕ್ಷೆ ಸಹಜವಾಗಿಯೇ ಎಲ್ಲರಲ್ಲೂ ಬೆಳೆಯಿತು.

ಕ್ರಾಂತಿಯೇನೋ ಸಂಭವಿಸಿತು, ನಿಜ. ಆದರೆ ಮೈಸ್ಪೇಸ್ ಆಗಲಿ ಬೇಬೋ ಆಗಲಿ ಯಾವುದೂ ತಮ್ಮ ಪ್ರಾರಂಭಿಕ ದಿನಗಳ ಜನಪ್ರಿಯತೆಯನ್ನು ಉಳಿಸಿಕೊಳ್ಳಲಿಲ್ಲ. ಕಳೆದ ವರ್ಷ ಎಒಎಲ್ ಸಂಸ್ಥೆ ಬೇಬೋ ತಾಣವನ್ನು ಹತ್ತು ಮಿಲಿಯನ್ ಡಾಲರುಗಳಿಗಿಂತ ಕಡಿಮೆ ಬೆಲೆಗೆ ಮಾರಿ ಕೈತೊಳೆದುಕೊಂಡಿತು. ಇದೀಗ ನ್ಯೂಸ್‌ಕಾರ್ಪ್ ಕೂಡ ಮೈಸ್ಪೇಸ್ ತಾಣವನ್ನು ಮೂವತ್ತೈದು ಮಿಲಿಯನ್ ಡಾಲರುಗಳಿಗೆ ಮಾರಿ ಸಮಾಜ ಜಾಲಗಳ ವ್ಯವಹಾರದಿಂದ ಹೊರನಡೆದಿದೆ.
***
ಮೊದಲ ತಲೆಮಾರಿನ ಸಮಾಜ ಜಾಲತಾಣಗಳ ಜನಪ್ರಿಯತೆ ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ ಮುಂಚೂಣಿಗೆ ಬಂದದ್ದು ಫೇಸ್‌ಬುಕ್ ಡಾಟ್ ಕಾಮ್. ೨೦೦೪ರಲ್ಲಿ ಪ್ರಾರಂಭವಾದ ಈ ತಾಣ ಸದ್ಯದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರುವ ಸಮಾಜ ಜಾಲತಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಮೊದಲಿಗೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗಷ್ಟೆ ಸೀಮಿತವಾಗಿದ್ದ ಈ ತಾಣ ನಿಧಾನಕ್ಕೆ ವಿಶ್ವವ್ಯಾಪಿಯಾಗಿ ಬೆಳೆಯಿತು. ಇದು ಬೇರೆಯವರಿಂದ ಕದ್ದ ಪರಿಕಲ್ಪನೆ ಎಂಬ ಆರೋಪ ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಫೇಸ್‌ಬುಕ್ ಜನಪ್ರಿಯತೆಗೆ ಅಡ್ಡಿಯಾಗಲಿಲ್ಲ.

ಪ್ರಸ್ತುತ ಫೇಸ್‌ಬುಕ್‌ನಲ್ಲಿ ಐವತ್ತು ಕೋಟಿಗೂ ಹೆಚ್ಚು ಜನ ಸದಸ್ಯರಿದ್ದಾರಂತೆ. ಫೇಸ್‌ಬುಕ್ ಅನ್ನು ಒಂದು ದೇಶ ಎಂದು ಕಲ್ಪಿಸಿಕೊಳ್ಳುವುದಾದರೆ ಅತ್ಯಂತ ಹೆಚ್ಚಿನ ಜನಸಂಖ್ಯೆ ಇರುವ ರಾಷ್ಟ್ರಗಳ ಸಾಲಿನಲ್ಲಿ ಅದು ಮೂರನೆಯ ಸ್ಥಾನದಲ್ಲಿ ನಿಲ್ಲಲಿದೆ.
***
ಫೇಸ್‌ಬುಕ್‌ನ ಜನಪ್ರಿಯತೆ ವಿಶ್ವವ್ಯಾಪಿ ಜಾಲದಲ್ಲಿ ಇನ್ನೂ ಅನೇಕ ಪ್ರಯತ್ನಗಳಿಗೆ ಸ್ಫೂರ್ತಿನೀಡಿದೆ; ಆದರೆ ಈವರೆಗೆ ಅವು ಯಾವುವೂ ಫೇಸ್‌ಬುಕ್‌ನಷ್ಟು ಜನಪ್ರಿಯತೆ ಗಳಿಸಿಕೊಂಡಿಲ್ಲ.

ಇದೀಗ ಗೂಗಲ್ ಕೂಡ ತನ್ನ 'ಗೂಗಲ್ ಪ್ಲಸ್' ಸೇವೆಯನ್ನು ಮುಂದಿಟ್ಟುಕೊಂಡು ಫೇಸ್‌ಬುಕ್‌ನೊಡನೆ ನೇರ ಸ್ಪರ್ಧೆಗಿಳಿದಿದೆ. ಈ ಸೇವೆ ತನ್ನ ಪ್ರಾರಂಭಿಕ ಹಂತದಲ್ಲಿ ಆಹ್ವಾನಿತ ಬಳಕೆದಾರರಿಗಷ್ಟೆ ಲಭ್ಯವಿದ್ದದ್ದರಿಂದ ಗೂಗಲ್ ಪ್ಲಸ್‌ನ ಬಗೆಗೆ ಸಾಕಷ್ಟು ಕುತೂಹಲವೂ ಸೃಷ್ಟಿಯಾಗಿದೆ.

ಫೇಸ್‌ಬುಕ್‌ನಲ್ಲಿ ಲಭ್ಯವಿರುವ ಬಹುತೇಕ ಎಲ್ಲ ಸೌಲಭ್ಯಗಳೂ ಗೂಗಲ್ ಪ್ಲಸ್‌ನಲ್ಲಿವೆ. ಗೂಗಲ್ ಪ್ಲಸ್‌ನ ಪುಟ ಸರಿಸುಮಾರು ಫೇಸ್‌ಬುಕ್‌ನಂತೆಯೇ ಕಾಣುತ್ತದೆ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ.

ನಮ್ಮ ಗೆಳೆಯರನ್ನು 'ಸರ್ಕಲ್'ಗಳೆಂಬ ಬೇರೆಬೇರೆ ಗುಂಪುಗಳಾಗಿ ವಿಂಗಡಿಸಿಕೊಳ್ಳುವ, ಹಾಗೂ ಯಾವ ಗುಂಪಿನವರ ಜೊತೆ ಯಾವ ಮಾಹಿತಿ ಹಂಚಿಕೊಳ್ಳಬೇಕೆಂದು ನಾವೇ ತೀರ್ಮಾನಿಸುವ ಸೌಲಭ್ಯ ಗೂಗಲ್ ಪ್ಲಸ್‌ನಲ್ಲಿದೆ. ಅಷ್ಟೇ ಅಲ್ಲ, ಇಲ್ಲಿರುವ 'ಹ್ಯಾಂಗ್ ಔಟ್' ಸೌಕರ್ಯ ಬಳಸಿಕೊಂಡು ಅನೇಕ ಮಿತ್ರರೊಡನೆ ಏಕಕಾಲದಲ್ಲಿ ವೀಡಿಯೋ ಚಾಟ್ ಕೂಡ ಮಾಡಬಹುದು. ಪಠ್ಯರೂಪದ ಚಾಟಿಂಗ್ ಮಾತ್ರವೇ ಲಭ್ಯವಿರುವ ಫೇಸ್‌ಬುಕ್‌ನಲ್ಲಿ ಇದು ಸಾಧ್ಯವಿಲ್ಲ. ನಾವು ಸೇರಿಸುವ ಚಿತ್ರಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡುವ ಸೌಲಭ್ಯವೂ ಇರುವುದು ಗೂಗಲ್ ಪ್ಲಸ್‌ನ ಇನ್ನೊಂದು ಪ್ಲಸ್ ಪಾಯಿಂಟ್.
***
ಸಮಾಜ ಜಾಲಗಳ ಲೋಕದಲ್ಲಿ ಗೂಗಲ್‌ನ ಈವರೆಗಿನ ಪ್ರಯತ್ನಗಳು ಹೇಳಿಕೊಳ್ಳುವಂತಹ ಫಲಿತಾಂಶವನ್ನೇನೂ ಕೊಟ್ಟಿಲ್ಲ. ಭಾರತವೂ ಸೇರಿದಂತೆ ಬೆರೆಳೆಣಿಕೆಯಷ್ಟು ರಾಷ್ಟ್ರಗಳಲ್ಲಿ ಒಂದಷ್ಟು ಕಾಲ ಹೆಸರುಮಾಡಿ ಈಗ ನಿಧಾನಕ್ಕೆ ತೆರೆಮರೆಗೆ ಸರಿಯುತ್ತಿರುವ ಆರ್ಕುಟ್, ಹೆಚ್ಚೇನೂ ಜನಪ್ರಿಯತೆ ಗಳಿಸದ ಬಜ್ ಹಾಗೂ ಸಂಪೂರ್ಣವಾಗಿ ವಿಫಲವಾದ ವೇವ್ - ಇವುಗಳ ನಂತರ ಬಂದಿರುವ ಗೂಗಲ್ ಪ್ಲಸ್ ಎಷ್ಟರ ಮಟ್ಟಿಗೆ ಜನಪ್ರಿಯವಾಗಲಿದೆ ಎಂದು ಎಲ್ಲರೂ ಕಾದುನೋಡುತ್ತಿದ್ದಾರೆ.

You Might Also Like

0 Responses

Popular Posts

Like us on Facebook