ಒನ್‌ಇಂಡಿಯಾ ಸಮೀಕ್ಷೆ: ಕನ್ನಡ ಅಂತರಜಾಲ ತಾಣಗಳಿಂದ ನಾನೇನು ಬಯಸುತ್ತೇನೆ?

7:30 AM

ಒನ್‌ಇಂಡಿಯಾ ಕನ್ನಡ ತಾಣದಲ್ಲಿ ನಡೆಸುತ್ತಿರುವ ಸಮೀಕ್ಷೆಗಾಗಿ 'ಕನ್ನಡ ಅಂತರಜಾಲ ತಾಣಗಳಿಂದ ನಾನೇನು ಬಯಸುತ್ತೇನೆ?' ಎನ್ನುವ ಪ್ರಶ್ನೆಗೆ ಉತ್ತರಿಸುವಂತೆ ಆ ತಾಣದ ಸಂಪಾದಕರು ಕೇಳಿದ್ದರು. ಅದಕ್ಕೆ ನಾನು ಬರೆದ ಉತ್ತರ ಇಲ್ಲಿದೆ (ಇದು ಒನ್‌ಇಂಡಿಯಾ ಕನ್ನಡ ತಾಣದಲ್ಲೂ ಪ್ರಕಟವಾಗಿದೆ).
ಕನ್ನಡ ಅಂತರಜಾಲ ತಾಣಗಳಿಂದ ನಾನು ಬಯಸುವುದು ಏನು? ಈ ಪ್ರಶ್ನೆ ಕೇಳಿಯೇ ಖುಷಿಯಾಯಿತು. ಕನ್ನಡದ ಅಂತರಜಾಲ ಇರುವ ಸದ್ಯದ ಪರಿಸ್ಥಿತಿಯಲ್ಲಿ ಓದುಗರಿಗೆ ಏನು ಬೇಕು ಎನ್ನುವ ಪ್ರಶ್ನೆ ಕೇಳುವವರೇ ಅಪರೂಪವಾಗಿಬಿಟ್ಟಿದ್ದಾರಲ್ಲ!

ಒಂದು ದಶಕದ ಹಿಂದೆ ಇದ್ದ ಪರಿಸ್ಥಿತಿಗೆ ಹೋಲಿಸಿದರೆ ಅಂತರಜಾಲ ಲೋಕದಲ್ಲಿ ಕನ್ನಡದ ಸ್ಥಾನ ಇಂದು ಬಹಳ ಉತ್ತಮ ಸ್ಥಿತಿಯಲ್ಲಿದೆ ಎಂದೇ ಹೇಳಬೇಕು. ಆದರೆ ಇಂಗ್ಲಿಷ್ ಮತ್ತಿತರ ಭಾಷೆಗಳ ಹೋಲಿಕೆಯಲ್ಲಿ ನಾವು ಇನ್ನೂ ಬಹುದೂರ ಸಾಗಬೇಕಿದೆ.

ಕನ್ನಡದ ವೆಬ್‌ಸೈಟ್ ಮತ್ತು ಬ್ಲಾಗುಗಳನ್ನು ಗಮನಿಸುವಾಗ ನಮಗೆ ಪ್ರಮುಖವಾಗಿ ಕಾಣಿಸುವುದು ವಿಷಯವೈವಿಧ್ಯ ಹಾಗೂ ನಿರಂತರತೆಯ ಅಭಾವ. ಸುಮಾರು ಐದು ವರ್ಷಗಳಷ್ಟು ಕಾಲ ನಿಯಮಿತವಾಗಿ ಉತ್ತಮ ಕನ್ನಡ ಬರಹಗಳನ್ನು ಪ್ರಕಟಿಸಿರುವ ತಾಣಗಳನ್ನು ಹುಡುಕಿದರೆ ಸಿಗುವುದು ತೀರಾ ಬೆರಳೆಣಿಕೆಯಷ್ಟು ಮಾತ್ರವೇ ಏನೋ.

ವಿಷಯ ಯಾವುದೇ ಇರಲಿ, ಶೈಲಿ ಹೇಗೇ ಇರಲಿ - ಗುಣಮಟ್ಟದ ಮಾಹಿತಿಯನ್ನು ನೀಡುವ ತಾಣಗಳು ಇಂದಿನ ಅಗತ್ಯ ಎಂದು ನಾನು ಭಾವಿಸುತ್ತೇನೆ. ಶಾಲೆಯ ಹೋಮ್‌ವರ್ಕ್‌ಗೆ ನೆರವಾಗುವ ವಿಶ್ವಕೋಶ ಮಾದರಿಯ ಲೇಖನಗಳಿಂದ ಪ್ರಾರಂಭಿಸಿ ಮನರಂಜನಾತ್ಮಕ ಬರಹಗಳವರೆಗೆ, ಕತೆ-ಕವನಗಳಿಂದ ವಿಜ್ಞಾನ-ತಂತ್ರಜ್ಞಾನದವರೆಗೆ, ಶೇರು ಮಾರುಕಟ್ಟೆಯಿಂದ ಕ್ರೀಡಾಕ್ಷೇತ್ರದವರೆಗೆ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ತಾಣಗಳ ಅಗತ್ಯ ಇದೆ.
ಇತರ ಭಾಷೆಗಳಲ್ಲಿ ಈಗಾಗಲೇ ವ್ಯವಹರಿಸುತ್ತಿರುವ ತಾಣಗಳ ಕನ್ನಡ ಆವೃತ್ತಿಗಳೂ ಖಂಡಿತಾ ಬರಬೇಕು. ಇಂತಹ ಎಲ್ಲ ತಾಣಗಳಲ್ಲಿ ಕಾಣಸಿಗುವ ಮಾಹಿತಿಯಲ್ಲಿ - ಬಳಕೆಯಾಗುವ ಕನ್ನಡದಲ್ಲಿ ತಪ್ಪುಗಳಿಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇರಬೇಕು.

"ಗುಣಮಟ್ಟದ ಮಾಹಿತಿ" ಎನ್ನುವಾಗ ಅದರ ಗುಣಮಟ್ಟವನ್ನು ನಿರ್ಧರಿಸುವವರು ಯಾರು ಎನ್ನುವ ಪ್ರಶ್ನೆ ಬರುತ್ತದೆ. ಇಂದಿನ ತಾಣಗಳು ತಮಗಿಷ್ಟಬಂದ ಸರಕುಗಳನ್ನು ಪ್ರಕಟಿಸುತ್ತಿರುವುದಕ್ಕೆ ಈ ಕುರಿತ ಗೊಂದಲವೂ ಒಂದು ಕಾರಣ ಇರಬಹುದೇನೋ. ಓದುಗರ ಅಗತ್ಯಗಳನ್ನು ಅರಿತುಕೊಳ್ಳದೆ ತಮ್ಮ ಮೂಗಿನ ನೇರದ ಮಾಹಿತಿಯನ್ನೇ ಪ್ರಕಟಿಸುವ ತಾಣಗಳು ಆರಂಭದ ಉತ್ಸಾಹವೆಲ್ಲ ಇಳಿದ ನಂತರ ಬಾಗಿಲು ಮುಚ್ಚುವ ಪರಿಸ್ಥಿತಿ ತಲುಪುವುದರ ಹಿನ್ನೆಲೆಯಲ್ಲಿ ಈ ಗೊಂದಲವನ್ನೂ ನಾವು ಕಾಣಬಹುದು.

ಹಾಗಾಗಿ ಕನ್ನಡ ತಾಣಗಳು ಓದುಗರಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸುವ, ಹಾಗೂ ಅವರ ಪ್ರತಿಕ್ರಿಯೆಗೆ ಸ್ಪಂದಿಸುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕೆಂದು ನಾನು ನಿರೀಕ್ಷಿಸುತ್ತೇನೆ (ದುರುದ್ದೇಶದ, ನಿಂದನಾತ್ಮಕ ಕಮೆಂಟುಗಳನ್ನು ಪೋಸ್ಟಿಸುವುದನ್ನೇ ಚಟವಾಗಿಸಿಕೊಂಡಿರುವ "ಕಮೆಂಟ್ ಭಯೋತ್ಪಾದಕ"ರಿಂದ ಅವರಿಗೆ ಸುಲಭವಾಗಿ ಮುಕ್ತಿಸಿಗುವಂತೆಯೂ ಆಗಲಿ, ಪಾಪ!). ತಪ್ಪುಗಳನ್ನು ತೋರಿಸಿದರೆ, ಸಲಹೆ-ಸೂಚನೆಗಳನ್ನು ನೀಡಿದರೆ ಧನಾತ್ಮಕವಾಗಿ ಸ್ವೀಕರಿಸುವ ದೊಡ್ಡ ಮನಸ್ಸೂ ಅವರಿಗೆ ಇರಬೇಕು!

ಅಂತರಜಾಲದಲ್ಲಿ ಕನ್ನಡದ ಸ್ಥಾನವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಪ್ರಯತ್ನ ಮಾಡುವವರ ಮೇಲೆ "ಹಿಂದೆ ಮುಂದೆ ಯೋಚಿಸದೆ ಕೆಲಸಮಾಡುತ್ತಾರೆ" ಎಂಬ ಆರೋಪದ ಮೂಲಕ ಗೂಬೆಕೂರಿಸುವುದು ಸುಲಭ, ನಿಜ. ಆದರೆ ತಮ್ಮ ಪ್ರತಿಕ್ರಿಯೆಗಳ ಮೂಲಕ ಅವರಿಗೆ ಮಾರ್ಗದರ್ಶನ ನೀಡಬಹುದಾದ ಓದುಗರ ನಿರಾಸಕ್ತಿಯ ತಪ್ಪನ್ನೂ ಮುಚ್ಚಿಡುವಂತಿಲ್ಲ.

ಸ್ವತಃ ಒಂದು ಜಾಲತಾಣವನ್ನು ನಡೆಸುತ್ತಿರುವ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಅಂತರಜಾಲ ತಾಣಗಳಿಗೆ ಭೇಟಿಕೊಡುವ ಓದುಗರ ಸಂಖ್ಯೆಗೂ ತಮ್ಮ ಪ್ರತಿಕ್ರಿಯೆಗಳ ಮೂಲಕ ಆ ತಾಣದ ಬೆಳವಣಿಗೆಯಲ್ಲಿ ಸಕ್ರಿಯರಾಗಿ ಭಾಗವಹಿಸುವವರ ಸಂಖ್ಯೆಗೂ ನಡುವೆ ಬಲುದೊಡ್ಡ ವ್ಯತ್ಯಾಸವಿದೆ. ಈ ಮನೋಭಾವವನ್ನು ಬದಲಿಸಿಕೊಳ್ಳುವ ಜವಾಬ್ದಾರಿ ಓದುಗರಾಗಿ ನಮ್ಮ ಮೇಲೂ ಇದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಕನ್ನಡ ತಾಣಗಳಲ್ಲಿ ನಮಗಿಷ್ಟವಾದ-ಆಗದ ಸಂಗತಿಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದರಿಂದ ಪ್ರಾರಂಭಿಸಿ ತಾಣಗಳ ಬೆಳವಣಿಗೆಗೆ ನಮ್ಮಿಂದಾದ ಸಹಾಯ ಮಾಡುವವರೆಗೆ ನಮ್ಮ ಜವಾಬ್ದಾರಿಯೂ ಮಹತ್ವದ್ದೇ.

ನಮ್ಮಿಂದಾದ ಸಹಾಯ ಎಂದತಕ್ಷಣ ನಾವೇನು ವೆಬ್‌ಸೈಟ್ ನಡೆಸುವವರಿಗೆ ನೇರವಾಗಿ ಧನಸಹಾಯ ಮಾಡಬೇಕಿಲ್ಲ. ನಮ್ಮ ಆಪ್ತವಲಯದಲ್ಲಿ - ಸಮಾಜ ಜಾಲಗಳಲ್ಲಿ ಆ ತಾಣಕ್ಕೆ ಪ್ರಚಾರ ಕೊಡುವುದರಿಂದ ಪ್ರಾರಂಭಿಸಿ ತಾಣದ ಉತ್ಪನ್ನಗಳನ್ನು ಕೊಳ್ಳುವವರೆಗೆ ಈ ಸಹಾಯ ಯಾವ ಬಗೆಯದ್ದಾದರೂ ಇರಬಹುದು. ಅಷ್ಟೇ ಏಕೆ, ಕೆಲವು ತಾಣಗಳು ಆನ್‌ಲೈನ್ ಶಾಪಿಂಗ್ ಜಾಹೀರಾತುಗಳನ್ನು ಪ್ರದರ್ಶಿಸುತ್ತವಲ್ಲ, ನಮ್ಮ ಆಯ್ಕೆಯ ವಸ್ತುಗಳನ್ನು ಕೊಳ್ಳಲು ಆ ಜಾಹೀರಾತುಗಳ ಮೂಲಕ ಹೋದರೂ ಸಾಕು, ಜಾಹೀರಾತು ಪ್ರದರ್ಶಿಸಿದ ತಾಣಕ್ಕೆ ಒಂದಷ್ಟು ಕಮೀಶನ್ ಸಿಗುತ್ತದೆ - ಕನ್ನಡದ ಇನ್ನಷ್ಟು ಮಾಹಿತಿ ಪ್ರಕಟಿಸಲು ಶಕ್ತಿಬರುತ್ತದೆ. ಅಂದಹಾಗೆ ಈ ಕುರಿತು ತಮ್ಮ ಓದುಗರಲ್ಲಿ ಜಾಗೃತಿಮೂಡಿಸಲು ಕೊಂಚ ಸಮಯದ ಮಟ್ಟಿಗಾದರೂ ತಮ್ಮ ಸಂಕೋಚವನ್ನು ದೂರವಿಡಬೇಕಾದ್ದು ತಾಣಗಳ ಕೆಲಸವೂ ಹೌದು!

You Might Also Like

0 Responses

Popular Posts

Like us on Facebook