ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ

2:35 PM

ನಾಗೇಶ ಹೆಗಡೆಯವರನ್ನು ಒಂದು ವಾಕ್ಯದಲ್ಲಿ ಪರಿಚಯಿಸಿ ಎಂಬ ಪ್ರಶ್ನೆಯಿರುವ ಪರೀಕ್ಷೆಯೇನಾದರೂ ನಡೆದರೆ ಬಹುಶಃ ಯಾರೂ ಪಾಸ್ ಆಗಲಿಕ್ಕಿಲ್ಲ. ಹಾಗೆಯೇ 'ಆಲ್ ಆಫ್ ದಿ ಅಬವ್' ಆಯ್ಕೆಯಿಲ್ಲದ ಮಲ್ಟಿಪಲ್ ಚಾಯ್ಸ್ ಪ್ರಶ್ನೆ ಕೇಳಿ ನಾಗೇಶ ಹೆಗಡೆ ಯಾರು ಎನ್ನುವುದಕ್ಕೆ ಉತ್ತರ ಹುಡುಕುವುದೂ ಸಾಧ್ಯವಾಗಲಿಕ್ಕಿಲ್ಲ. ಪರಿಸರಪ್ರೇಮಿ ಎನ್ನಿ, ವಿಜ್ಞಾನ ಲೇಖಕರೆನ್ನಿ, ಪತ್ರಕರ್ತರೆನ್ನಿ, ತಂತ್ರಜ್ಞಾನ ಆಸಕ್ತರೆನ್ನಿ, ಕಿರಿಯ ಬರೆಹಗಾರರ ಗುರುಗಳೆನ್ನಿ - ಎಲ್ಲ ವಿಶೇಷಣಗಳೂ ನಾಗೇಶ ಹೆಗಡೆಯವರಿಗೆ ಹೊಂದುತ್ತವೆ.

ಈಗಷ್ಟೆ ಪ್ರಕಟವಾಗಿರುವ ಹೊಸ ಪುಸ್ತಕ 'ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ'ದಿಂದಾಗಿ ಹೆಗಡೆಯವರನ್ನು ಗುರುತಿಸುವ ವಿಶೇಷಣಗಳ ಪಟ್ಟಿಗೆ ಹೊಸತೊಂದು ಅಂಶ ಸೇರ್ಪಡೆಯಾಗಿದೆ.

ನಾಗೇಶ ಹೆಗಡೆಯವರ ಹಾಸ್ಯಪ್ರಜ್ಞೆಯ ಬಗ್ಗೆ ಏನೂ ಹೇಳಬೇಕಾದ್ದೇ ಇಲ್ಲ. ಅವರ ಲೇಖನಗಳಲ್ಲಿ, ಭಾಷಣಗಳಲ್ಲಿ ಇದರ ಪರಿಚಯ ಎಲ್ಲರಿಗೂ ಆಗುತ್ತದೆ. ಹೀಗಿರುವಾಗ ನಾಗೇಶ ಹೆಗಡೆಯವರು ಹಾಸ್ಯಪತ್ರಿಕೆಗೆಂದೇ ಲೇಖನಗಳನ್ನು ಬರೆದರೆ?

ಅದಕ್ಕಿಂತ ಖುಷಿಕೊಡುವ ಅನುಭವ ಬೇರೊಂದಿಲ್ಲ ಎಂದಿರಾ? ನಿಮ್ಮ ಉತ್ತರ ಸರಿ.

ಬೆಂಗಳೂರಿನಿಂದ 'ಹದಿನೈದೇ ನಿಮಿಷಗಳ ದೂರ'ದ ಹಳ್ಳಿಯ ನಿವಾಸಿಯಾಗಿ ನಾಗೇಶ ಹೆಗಡೆಯವರ ಅನುಭವಗಳನ್ನು ಹಂಚಿಕೊಳ್ಳುವ ಅನೇಕ ಬರೆಹಗಳು ಈ ಹಿಂದೆ ಅಪರಂಜಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಈ ಲೇಖನಗಳ ಸಂಗ್ರಹ ಇದೀಗ ನಮಗೆಲ್ಲ ಖುಷಿಕೊಡಲು ಪುಸ್ತಕರೂಪದಲ್ಲಿ ಹೊರಬಂದಿದೆ. ಜೊತೆಗೊಂದು ಬೋನಸ್ ಬರಹ ಕೂಡ ಇದೆ.

ತಿಳಿಹಾಸ್ಯದ ಪ್ರಸಂಗಗಳೊಡನೆ ನಗಿಸುವ, ಜೊತೆಯಲ್ಲೇ ಪರಿಸರ ಹಾಗೂ ವಿಜ್ಞಾನದ ಪಾಠಹೇಳುವ ಹದಿನಾಲ್ಕು ಆಕರ್ಷಕ ಬರೆಹಗಳ ಈ ಸಂಕಲನ ಅದರ ಬೆನ್ನುಡಿಯಲ್ಲಿ ಡಾ. ಉಲ್ಲಾಸ ಕಾರಂತರು ಹೇಳಿರುವಂತೆ 'ನವಿಲುಗರಿಯ ನವಿರು ಪೊರಕೆ'. ನಾಗೇಶ ಹೆಗಡೆಯವರ ಎಂದಿನ ಆಕರ್ಷಕ ಶೈಲಿಯ ಬರೆವಣಿಗೆ ಜೊತೆಗೆ ಗುಜ್ಜಾರರ ಸೂಪರ್ ಕಾರ್ಟೂನುಗಳು ಈ ಪುಸ್ತಕದ ವೈಶಿಷ್ಟ್ಯ. "ಹಾಸ್ಯದ ಹೊನಲು ಹರಿಸುತ್ತಲೇ ಡಾಂಭಿಕ ರಾಜಕಾರಣಿಗಳಿಗೆ, ಹಾದಿತಪ್ಪಿದ ಪ್ರಾಣಿಪ್ರೇಮಿಗಳಿಗೆ, ಅಂತೆಯೇ ಮೌಢ್ಯ ಹಾಗೂ ದುರಾಸೆ ತುಂಬಿದ ಜನರಿಗೆ ನವಿಲುಗರಿಯ ಪೊರಕೆಯ ರುಚಿ ಕಾಣಿಸುವ" ಈ ಪುಸ್ತಕ ನಿಮ್ಮ ಮಸ್ಟ್ ರೀಡ್ ಪಟ್ಟಿಗೆ ಸೇರಬೇಕು ಎನ್ನುವುದು ಶ್ರೀನಿಧಿಯ ಪ್ರಪಂಚದ ರೆಕಮಂಡೇಶನ್. ಸಂಕಲನದ ಹನ್ನೊಂದನೇ ಲೇಖನ 'ಅಂತರಜಾಲ ಮತ್ತು ಜೀವಜಾಲ' ನಮ್ಮ ಫೇವರಿಟ್.
ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ
ಲೇಖಕರು: ಶ್ರೀ ನಾಗೇಶ ಹೆಗಡೆ
೯೨ ಪುಟಗಳು, ಬೆಲೆ: ರೂ. ೭೫
ಪ್ರಕಾಶಕರು: ಭೂಮಿ ಬುಕ್ಸ್, ಬೆಂಗಳೂರು

You Might Also Like

1 Responses

Popular Posts

Like us on Facebook