ಹೊಸವರ್ಷದ ಪ್ರತಿಜ್ಞೆಗಳು

9:52 AM

ಶ್ರೀನಿಧಿಯ ಪ್ರಪಂಚದ ಮಿತ್ರವೃಂದಕ್ಕೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. ಹೊಸವರ್ಷದ ಮೊದಲ ಓದಿಗಾಗಿ ನನ್ನ ತಂದೆ ಶ್ರೀ ಟಿ. ಎಸ್. ಗೋಪಾಲ್ ಅವರ ಲೇಖನವೊಂದು ಇಲ್ಲಿದೆ.
ವರಕವಿ ಬೇಂದ್ರೆಯವರು ತಮ್ಮ ಯುಗಾದಿ ಎಂಬ ಕವನದಲ್ಲಿ "ವರುಷಕೊಂದು ಹೊಸತು ಜನುಮ ವರುಷಕೊಂದು ಹೊಸತು ನೆಲೆಯು ಅಖಿಲಜೀವಜಾತಕೆ, ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರೆಯ ನಮಗದಷ್ಟೆ ಏತಕೆ" ಎಂದು ಹೇಳುತ್ತ, ಪ್ರಕೃತಿಯ ಇತರ ಜೀವಜಂತುಗಳ ವೈವಿಧ್ಯಮಯ ಜೀವನಕ್ಕೆ ಬೆರಗಾಗುತ್ತ ಮಾನವ ಜೀವನದ ಏಕತಾನತೆ, ನೀರಸತೆಗಳ ಬಗೆಗೆ ವಿಷಾದಿಸಿರುವುದು ಸರಿಯಷ್ಟೆ.  ಇದು ನೆನಪಾದಾಗಲೆಲ್ಲ,  ಆ ಕವಿವರ್‍ಯರು ಯುಗಾದಿಗೆ ಎರಡು ಮೂರು ತಿಂಗಳಿಗೆ ಮೊದಲೇ ನನ್ನನ್ನು ನನ್ನಂಥ ಹಲವರನ್ನೂ ಭೇಟಿ ಮಾಡಿ ನಿಜ ವಿಷಯವನ್ನು ತಿಳಿದುಕೊಳ್ಳಲಿಲ್ಲವೇಕೆಂದು ಆಶ್ಚರ್‍ಯವೂ ದುಃಖವೂ ಉಂಟಾಗುತ್ತದೆ.  ಬೇಂದ್ರೆಯವರು ಗುರುತಿಸಿದ ಪ್ರಾಣಿಪಕ್ಷಿ ಸಸ್ಯಾದಿಗಳು ಹೊಸ ಜನ್ಮ ಹೊಸ ನೆಲೆಗಳಿಗಾಗಿ ಯುಗಾದಿಯ ದಿನವನ್ನು ಶುಭಮುಹೂರ್ತವಾಗಿ ನಿಶ್ಚಯಿಸಿಕೊಂಡಿದ್ದರೆ, ನನ್ನಂಥವರು ಇದಕ್ಕೆ ಮೂರು ತಿಂಗಳು ಮೊದಲೇ ಆರಂಭಗೊಳ್ಳುವ ಕ್ರಿಸ್ತಶಕ ಕ್ಯಾಲೆಂಡರಿನ ನವವರ್ಷದ ಜನವರಿ ಒಂದನೇ ತಾರೀಖಿನಂದೇ, ನಮ್ಮ ಕಳೆದ ವರ್ಷದ ಜನ್ಮವನ್ನ ಜಾಲಾಡಿಕೊಳ್ಳುತ್ತ ಹೊಸನೆಲೆಗಾಗಿ ತಿಣುಕಾಡುತ್ತ ಸಂಭ್ರಮ ಪಡುವುದು ಆ ಕವಿಗೆ ಕಂಡಿರಲಿಕ್ಕಿಲ್ಲ.  ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನ ನಮಗೆ ಬಾರದಿದ್ದರೂ, ಕಳೆದ ಇಡೀ ವರ್ಷದ ನಿದ್ರೆಯ ಜಡವನು ಕೊಡವಿ ಎಬ್ಬಿಸುವ ಹೊಸವರ್ಷದ ಆ ಮೊದಲ ದಿನ ನಮ್ಮ ಬದುಕಿಗೆ ಹೊಸ ಆಯಾಮವನ್ನೂ, ನವೀನ ಚೈತನ್ಯವನ್ನೂ ತಂದುಕೊಡಬಾರದೇ? ಆ ದಿನಕ್ಕಾಗಿ ಕಾಯುವುದೇ ನಮ್ಮ ಕಳೆದ ವರ್ಷದ ಕಾರ್‍ಯಕ್ರಮದ್ದೊಂದು ಪ್ರಮುಖ ಅಂಗವಾಗಿರಲಿಲ್ಲವೇ? ನವವರ್ಷದ ನಿರೀಕ್ಷೆಯಲ್ಲಿ ಹಿಂದಿನ ಡಿಸೆಂಬರ್‌ನ ಚಳಿಯನ್ನು ಲೆಕ್ಕಿಸದೆ ನಾವು ಸಂಭ್ರಮ ಸಡಗರಗಳಾದ ಸ್ವಾಗತದ ಸಿದ್ಧತೆ ನಡೆಸುತ್ತ ಬಂದಿಲ್ಲವೇ? ಹೊಸವರ್ಷದ ಮೊದಲ ದಿನದಿಂದ ಏನೆಲ್ಲ ಮಾಡಬಹುದು, ಏನೇನು ಮಾಡಬಾರದೆಂಬುದರ ಲೆಕ್ಕಾಚಾರದ ಹವಣಿಕೆಯಲ್ಲಿ ನವೆಂಬರ್ ಡಿಸೆಂಬರ್‌ಗಳಂತಹ ಅಲ್ಪವೂ ಗೌಣವೂ ಆದ ತಿಂಗಳುಗಳು ಲೆಕ್ಕಕ್ಕೇ ಬಾರದೆ ನಮ್ಮ ಆಯುಷ್ಯದ ಲೆಕ್ಕದಿಂದ ಜಾರಿ ಹೋಗಲಿಲ್ಲವೇ? ಇದನ್ನೆಲ್ಲ ಯೋಚಿಸಿಕೊಂಡರೆ ನವವರ್ಷದ ಮೊದಲ ದಿನದ ಮಹತ್ವ ಎಷ್ಟೆಂಬುದರ ಅರಿವಾಗುತ್ತದೆ.
ನಮ್ಮ ದಿನಚರಿ, ಸ್ವಭಾವ, ಧೋರಣೆಗಳಲ್ಲಿ ನಾವು ತರಬಯಸುವ ಬದಲಾವಣೆ, ಸುಧಾರಣೆಗಳನ್ನು ಕುರಿತು ಚಿಂತಿಸಿ, ನಾವು ಆಗಾಗ ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ.  ತಾನು ನಡೆದು ಬಂದ ದಾರಿಯ ಕಡೆಗೆ ಆಗಾಗ ಕಣ್ಣು ಹೊರಳಿಸಿ ನೊಡುವ ಸಿಂಹಾವಲೋಕನ ಕ್ರಮದಂತೆ ನಮ್ಮ ಹಿಂದಿನ ದಿನಗಳ ಬದುಕಿನೆಡೆಗೆ ಕಣ್ಣು ಹೊರಳಿಸಿ, ನಮ್ಮ ಕಣ್ಣಿಗೆ ಕಂಡ ಲೋಪದೋಷಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.  ಈ ನಿರ್ಧಾರಗಳು ಜಾರಿಗೆ ಬರಬೇಕಾದರೆ ಇವುಗಳಿಗೆ 'ಪ್ರತಿಜ್ಞೆ'ಗಳೆಂಬ ಗಂಭೀರ ಹೆಸರನ್ನೇ ಕೊಡಬೇಕಾಗುತ್ತದೆ. ನಿರ್ಧಾರವು ಪ್ರತಿಜ್ಞೆಯಾದರೆ ಮಾತ್ರ ಮನಸ್ಸಿಗೊಂದು ಧೈರ್‍ಯ, ಪ್ರಯತ್ನದಲ್ಲಿ ಎಚ್ಚರಿಕೆ!

ಆದರೆ ಇಂಥ ನಿರ್ಧಾರಗಳನ್ನು ಮನಬಂದಂತೆ ಕೈಗೊಳ್ಳುವುದು ಸರಿಯಲ್ಲ.  ಹಾಗೆ ಮಾಡುವುದರಿಂದ ಕೈಗೊಳ್ಳುವ ನಿರ್ಧಾರ ತನ್ನ ಬೆಲೆಯನ್ನು ಕಳೆದುಕೊಳ್ಳುವುದರೊಂದಿಗೆ ನಿರ್ಧರಿಸುವವನ ಬೆಲೆಯೂ ತಗ್ಗುವುದರಲ್ಲಿ ಸಂಶಯವಿಲ್ಲ.  ಇದನ್ನೂ ಮೀರಿ ಕೈಗೊಂಡ ನಿರ್ಧಾರವನ್ನು ಪ್ರತಿಜ್ಞೆ ಎಂದು ಯಾರು ತಾನೇ ಗೌರವಿಸಿಯಾರು? ಇದನ್ನು ಮನಗಂಡ ಅನುಭವಸ್ಥರು, ಜೀವನದಲ್ಲಿ ಮಹತ್ವದ ಹೆಜ್ಜೆಯನ್ನಿಡ ಹೊರಡುವ ಧೀರರ ನಿರ್ಧಾರಗಳೂ ಪ್ರತಿಜ್ಞೆಗಳೂ ಜಾರಿಗೆ ಬರಬೇಕಾದ ದಿನವನ್ನು ನಿಗದಿಪಡಿಸುವುದೇ ಎಲ್ಲಕ್ಕಿಂತ ಅತಿ ಮುಖ್ಯ ನಿರ್ಧಾರವೆಂಬ ತೀರ್ಮಾನಕ್ಕೆ ಬಂದರು.  ಇದಕ್ಕಾಗಿ ವ್ಯಾವಹಾರಿಕವಾಗಿ ಸರ್ವಸಮ್ಮತವಾಗಿರುವ, ವೈಯಕ್ತಿಕವಾಗಿ ಇನ್‌ಕ್ರಿಮೆಂಡು, ಕ್ಯಾಷುಯಲ್ ರಜೆ, ತುಟ್ಟಿಭತ್ಯವೇ ಮೊದಲಾದ ವಾರ್ಷಿಕ ಸುಖಸಮೃಧ್ಧಿಗಳು ಲಭಿಸತೊಡಗುವ, ಬಣ್ಣಬಣ್ಣದ ಕ್ಯಾಲೆಂಡರುಗಳ ಮೂಲಕ ಇನ್ನಷ್ಟು ಆಕರ್ಷಕವಾಗಿ ಕಾಣುವ ನವವರ್ಷದ ಜನವರಿ ಒಂದನೇ ತಾರೀಖಿಗಿಂತ ಮಿಗಿಲಾದ ಶುಭದಿನ ಬೇರಾವುದೂ ಇರಲಿಕ್ಕಿಲ್ಲವೆಂಬುದು ನಮ್ಮ ಹಿರಿಯರಿಗೆ ಮನದಟ್ಟಾಯಿತು.  ತಂತಮ್ಮ ಮತಧರ್ಮ ಸಂಪ್ರದಾಯಾನುಸಾರವಾಗಿ ವರ್ಷದ ಬೇರೆ ಬೇರೆ ದಿನಗಳಂದು ನವವರ್ಷವನ್ನು ಪ್ರಾರಂಭಿಸುವ ವಿಭಿನ್ನ ಸಂಸ್ಕೃತಿಗಳ ಜನರೂ ತಂತಮ್ಮ ವ್ಯಕ್ತಿತ್ವವಿಕಸನಕ್ಕೆ, ಧೋರಣೆಯ ಕ್ರಾಂತಿಕಾರೀ ಬದಲಾವಣೆಗೆ, ದಿನಚರಿಯ ಆಮೂಲಾಗ್ರ ಪರಿವರ್ತನೆಯ ಮೊದಲ ಹೆಜ್ಜೆಯಾಗಿ ಕ್ರಿಸ್ತಶಕ ವರ್ಷದ ಜನವರಿ ಒಂದನೇ ದಿನವನ್ನು ಪ್ರತಿಜ್ಞಾಪೂರ್ವಕ ಆಯ್ಕೆಮಾಡಿಕೊಳ್ಳುವುದು ಕೆಲವರಿಗಾದರೂ 'ಸರ್ವಧರ್ಮಸಮಭಾವ'ದ ಬೆಳ್ಳಿರೇಖೆಯಾಗಿ ಕಂಡಿರುವುದರಲ್ಲಿ ಸಂಶಯವಿಲ್ಲ.

ನಾನು ಕಳೆದ ಎಷ್ಟೋ ವರ್ಷಗಳಿಂದ ಕೈಗೊಳ್ಳುತ್ತ ಬಂದಿರುವ ನವವರ್ಷದ ಪ್ರತಿಜ್ಞೆಗಳೆಲ್ಲವನ್ನೂ ನೆನಪಿನಲ್ಲಿಟ್ಟುಕೊಂಡಿದ್ದೇನೆ.  ಆ ಪ್ರತಿಜ್ಞೆಗಳ ವೈವಿಧ್ಯ, ವಿಸ್ತಾರ, ಉದಾತ್ತತೆ, ಸೂಕ್ಷ್ಮತೆಗಳೇ ಮೊದಲಾದ ವಿಶಿಷ್ಟ ಗುಣ ಸಂಪತ್ತನ್ನು ಮೆಚ್ಚಿಕೊಂಡಿದ್ದೇನೆ.  ಸಮಾನಶೀಲವ್ಯಸನೇಷು ಸಖ್ಯಂ ಎಂಬ ಉಕ್ತಿಗನುಗುಣವಾಗಿ ನನ್ನ ಗೆಳೆಯರಾದ ಹಲವರು ಸಂಕಲ್ಪಧೀರರ ಪ್ರತಿಜ್ಞೆಗಳನ್ನು ಸಾಕಷ್ಟು ಆದ್ಯಯನ ಮಾಡಿದ್ದೇನೆ.  ಇದನ್ನೆಲ್ಲ ತಿಳಿದೋ ಏನೋ, ಎಷ್ಟೋ ಜನರು ಆಗಾಗ ನನ್ನಲ್ಲಿಗೆ ಬಂದು ತಾವು ಕೈಗೊಳ್ಳ ಬಯಸುವ ಹೊಸವರ್ಷದ ಪ್ರತಿಜ್ಞೆಗಳ ವಿಷಯ ವಿಮರ್ಶೆ ಮಾಡಿ ಹೋಗುತ್ತಿರುವುದರಲ್ಲಿ ಅತಿಶಯವೇನಿಲ್ಲ.

ಹೊಸವರ್ಷದ ಪ್ರತಿಜ್ಞೆಗಳ ಸ್ವರೂಪ, ವೈವಿಧ್ಯ, ಸಂಖ್ಯೆಗಳಿಗೆ ಮಿತಿಯೆಂಬುದಂತೂ ಇಲ್ಲ. ತಂತಮ್ಮ ಜೀವನದ ಸ್ಥಿತಿಗತಿ-ಕಾರ್‍ಯಕ್ಷೇತ್ರ - ಹವ್ಯಾಸ - ವಿಚಾರ - ಆವಶ್ಯಕತೆಗಳಿಗನುಗುಣವಾಗಿ ಯಾರು ಎಷ್ಟು ಪ್ರತಿಜ್ಞೆಗಳನ್ನು ಬೇಕಾದರೂ ಸ್ವೀಕರಿಸಬಹುದು.  ಆದರೆ ಈ ಪ್ರತಿಜ್ಞೆಗಳನ್ನು ಕೈಗೊಳ್ಳುವುದಕ್ಕೆ ಸರಿಯಾದ ಮಾನಸಿಕ-ದೈಹಿಕ ಸಿದ್ಧತೆ ಬೇಕು.  ಅಲ್ಲದೆ, ಹೊಸವರ್ಷದ ಮೊದಲ ದಿನಕ್ಕಿಂತ ಕನಿಷ್ಠ ಹತ್ತು ದಿನಗಳಿಗೆ ಮುಂಚಿತವಾಗಿಯಾದರೂ ಈ ಬಗ್ಗೆ ನಿರ್ಧಾರಕ್ಕೆ ಬಂದಿದ್ದರೆ ಒಳ್ಳೆಯದು.  ನನ್ನ ಒಬ್ಬ ಸ್ನೇಹಿತ ಬಹುವಾಗಿ ಮದ್ಯಪಾನಾಸಕ್ತನಾಗಿದ್ದವನು.  ಈತ ಡಿಸೆಂಬರ್ ೩೧ರ ದಿನ ಬೆಳಗ್ಗೆ ಬಂದು ಹೊಸವರ್ಷದ ದಿನದಿಂದ ತಾನಿನ್ನು ಕುಡಿಯುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸುತ್ತಿರುವುದಾಗಿ ಹೇಳಿ ನನ್ನನ್ನು ಆಶ್ಚರ್‍ಯದ ಕಡಲಿನಲ್ಲಿ ಮುಳುಗಿಸಿಬಿಟ್ಟ.  ಅಲ್ಲದೆ ಪ್ರತಿಜ್ಞಾವಚನವನ್ನು ಬೋಧಿಸುವ ಪವಿತ್ರವಾದ ಹೊಣೆಯನ್ನು ನನಗೇ ವಹಿಸಿದ.  ಮರುದಿನ ನವವರ್ಷದ ನನ್ನ ಪ್ರತಿಜ್ಞಾವಿಧಿಗಳನ್ನು ಪೂರೈಸಿ ಅವನ ಮನೆಗೆ ಹೋದೆ.  ಎಷ್ಟು ಸಲ ಬಾಗಿಲು ತಟ್ಟಿದರೂ ತೆರೆಯಲಿಲ್ಲ.  ಅರ್ಧಗಂಟೆ ಕಾದು ಬೇಸರವಾಗಿ ಹಿಂದಕ್ಕೆ ಬಂದೆ.  ಮಧ್ಯಾಹ್ನದ ವೇಳೆಗೆ ಅವನೇ ಬಂದ.  ಇಂದಿನಿಂದ ಕುಡಿಯುವುದನ್ನು ಬಿಟ್ಟುಬಿಡಬೇಕಾದ ಅಗಲಿಕೆಯ ನೋವಿನಲ್ಲಿ ಹಿಂದಿನ ರಾತ್ರಿ ವಿಪರೀತ ಕುಡಿದನಂತೆ.  ೩೧ರ ಮಧ್ಯರಾತ್ರಿ ಕಳೆದು ಜನವರಿ ೧ರ ಮೊದಲ ನಿಮಿಷ, ಗಂಟೆಗಲು ಕಳೆದರೂ ಕುಡಿಯುತ್ತಲೇ ಇದ್ದನಂತೆ.  ತಪ್ಪು ಅರಿವಾದಾಗ ಕಾಲ ಮಿಂಚಿ ಹೋಗಿತ್ತೆಂದು ಕೊರಗಿದ.  ಅವನ ಪಶ್ಚಾತ್ತಾಪ ಪ್ರಾಮಾಣಿಕವಾಗಿದೆಯೆಂದು ನನಗೆ ಮನವರಿಕೆಯಾಯಿತು.  ಇನ್ನು ಕೇವಲ ೩೬೪ ದಿನಗಳಲ್ಲಿಯೇ ಈ ಬಗ್ಗೆ ಹೊಸ ಪ್ರತಿಜ್ಞೆಯನ್ನೂ ಸ್ವೀಕರಿಸಬಹುದಾಗಿದೆಯೆಂದು ಸಂತೈಸಿ ಕಳುಹಿಸಿಕೊಟ್ಟೆ.  ಒಂದು ವೇಳೆ ಈ ನನ್ನ ಸ್ನೇಹಿತ ೮-೧೦ ದಿನಗಳಿಗೆ ಮುನ್ನವೇ ತನ್ನ ಪ್ರತಿಜ್ಞೆಯ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿದ್ದರೆ ಹೀಗಾಗುತ್ತಿರಲಿಲ್ಲವೆಂದು ಕಾಣುತ್ತದೆ.  ಪೂರ್ವನಿರ್ಧಾರ ಯಾವುದೇ ಪ್ರತಿಜ್ಞೆಯನ್ನು ಕಾರ್‍ಯರೂಪಕ್ಕೆ ತರಲು ಸಹಾಯಕವಾಗಬಲ್ಲುದು.

ಹಾಗೆಂದು ತೀರಾ ಎರಡು ಮೂರು ತಿಂಗಳಿಗೆ ಮೊದಲಿನಿಂದಲೇ ನಿಮ್ಮ ಪ್ರತಿಜ್ಞೆಯನ್ನು ಸಾರಿಕೊಂಡು ಬಂದರೂ ಪ್ರಯೋಜನವಿಲ್ಲ.  ಹಿಂದೊಮ್ಮೆ ನವೆಂಬರ್ ತಿಂಗಳ ಪ್ರಾರಂಭದಲ್ಲಿ ಏನೋ ಅನಾರೋಗ್ಯವೆಂದು ಡಾಕ್ಟರರ ಕಡೆಗೆ ಹೋಗಿದ್ದೆ.  ಅವರು ಕಾಫಿ ಕುಡಿಯುವುದನ್ನು ಬಿಡುವಂತೆ ಹೇಳಿ ಬಿಡುವುದೆ?  ನನಗೆ ಬೇರೇನನ್ನೂ ಕುಡಿಯುವ ಯೋಗ್ಯತೆಯಿರಲಾರದೆಂದು ಮುಖ ನೋಡಿಯೆ ಕಂಡುಕೊಂಡ  ಡಾಕ್ಟರರು ನನ್ನನ್ನು ಉಳಿದೊಂದು ಕಾಫಿಯಿಂದಲೂ ವಂಚಿತನನ್ನಾಗಿ ಮಾಡಿ ಇನ್ನಷ್ಟು ಆರೋಗ್ಯನನ್ನಾಗಿ ಮಾಡಬೇಕೇಂದಿದ್ದರೋ ಏನೋ! ಹುಟ್ಟುಗುಣವನ್ನು ಬಿಡುವುದಾದರೂ ಹೇಗೆಂದು ಕೇಳಿಯೂ ಕೇಳಿದೆ.  ಅದಕ್ಕವರು, ಕಾಫಿಯ ಚಟವನ್ನು ಸ್ವಲ್ಪಸ್ವಲ್ಪವಾಗಿ ತೊರೆಯುತ್ತ ಬರಲು ಎರಡು ತಿಂಗಳ ಕಾಲಾವಕಾಶ ಸಾಕೆಂದೂ, ನವವರ್ಷದ ಜನವರಿ ಒಂದರಿಂದ ಪೂರ್ಣವಾಗಿ ಕಾಫಿಯನ್ನು ತ್ಯಜಿಸಿಬಿಡಬಹುದೆಂದೂ ಸೂಚಿಸಿದರು.  ಅದುವರೆವಿಗೂ ನನ್ನ ಹಿತಶತ್ರುವಿನಂತೆ ಭಾಸವಾಗುತ್ತಿದ್ದ ಈ ಡಾಕ್ಟರರು ಹೊಸವರ್ಷದ ಪ್ರತಿಜ್ಞಾಧೀರರಲ್ಲೊಬ್ಬರೆಂದು ತಿಳಿದಾಗ ಅಪರಿಮಿತ ಆನಂದವಾಯಿತು.  ಅವರು ಹೇಳಿದಂತೆ ನಾನು ಮೊದಲಿಗೇನೂ ಕಾಫಿಯ ಪ್ರಮಾಣವನ್ನು ತಗ್ಗಿಸಿಲ್ಲವಾದರೂ ಜನವರಿ ಒಂದರಿಂದ ಪೂರ್ಣವಾಗಿಯೆ ಕಾಫಿಯನ್ನು ತ್ಯಜಿಸುವುದೆಂದು ಪ್ರತಿಜ್ಞೆ ಮಾಡಿಬಿಟ್ಟೆ.  ನಿಮಗೆ ಇದು ಕಷ್ಟಸಾದ್ಯವೆಂದು ತೋರಿದರೂ ಅನುಭವಸ್ಥನಿಗೇನೂ ಕಷ್ಟವಲ್ಲ!

ಜನವರಿ ಒಂದನೇ ತಾರೀಖಿನ ಶುಭದಿವಸ ವರಾಂಡದಲ್ಲಿ ಕುಳಿತು, ಇಂದಿನಿಂದ ನಾನು ಕಾಫಿ ಕುಡಿಯುವುದನ್ನು ಪೂರ್ಣವಾಗಿ ತ್ಯಜಿಸುವುದರಿಂದ ಕಾಫಿ ಬೆಳೆಗಾರರಿಗೂ ಕಾಫಿಪುಡಿ ಅಂಗಡಿಯವರಿಗೂ ಆಗುವ ನಷ್ಟವನ್ನು ಕುರಿತು ಚಿಂತಿಸುತ್ತಲೇ ಬೆಳಗಿನ ಪೇಪರ್ ಕಡೆಗೆ ಕಣ್ಣು ಹಾಯಿಸುತ್ತಿದ್ದೆ.  ಆಗೋ, ಆಗಬಾರದಿದ್ದ ಅನಾಹುತ ಜರುಗಿಹೋಯಿತು!  ಅದು ಯಾವ ಮಾಯದಲ್ಲೋ ಹೆಂಡತಿ ಅಭ್ಯಾಸ ಬಲದಿಂದ ತಂದು ಕೈಗಿತ್ತ ಕಾಫಿಯ ಬಟ್ಟಲನ್ನು ತೆಗೆದುಕೊಂಡು, ಅರ್ಧ ಕಪ್ ಕುಡಿದು ಮುಗಿಸಿದಾಗಲೇ ನನಗೆ ಎಚ್ಚರ!  ಹೆಂಡತಿಯ ಮೇಲೆ ರೇಗಾಡಿದೆ.  ನನಗೆ ಇದರಿಂದ ಅನಾರೋಗ್ಯವಾದಲ್ಲಿ ಅದರ ಹೊಣೆಯನ್ನು ಅವಳೇ ಹೊರಬೇಕಾಗುತ್ತದೆಯೆಂದು ಎಚ್ಚರಿಸಿದೆ.  'ಡಾಕ್ಟರರು ಈ ಸಲಹೆ ಕೊಟ್ಟು ಆಗಲೇ ಎರಡು ತಿಂಗಳ ಮೇಲಾಯಿತು.  ಇವತ್ತೊಂದು ದಿನ ಕಾಫಿ ಕುಡಿದರೆ ಅನಾರೋಗ್ಯ ಮರುಕಳಿಸಿಬಿಡುತ್ತದೇನು!' ಎಂದು ನಕ್ಕುಬಿಟ್ಟಳು.  ಹೊಸವರ್ಷದ ಮೊದಲ ದಿನ ಇಂಥ ಮಾತು ಕೇಳಬೇಕಾಯಿತಲ್ಲ ಎಂದು ವಿಷಾದವಾಯಿತು.  ಕೈಯಲ್ಲಿದ್ದ ಬಟ್ಟಲನ್ನೇ ದಿಟ್ಟಿಸಿದೆ.  ನನ್ನ ಪ್ರತಿಜ್ಞೆ ಕೇವಲ ಅರ್ಧಕಪ್ ಕಾಫಿಯನ್ನು ಮೀರಿ ಭಂಗಗೊಳ್ಳಲಿಲ್ಲವೆಂದು ಸಮಾಧಾನವಾಯಿತು.  ಅದರ ಸಾಕ್ಷಿಯಾಗಿ ಇನ್ನು ಮುಂದೆ ಅರ್ಧಕಪ್ ಕಾಫಿ ಮಾತ್ರ ಕುಡಿಯುವುದಾಗಿ ಪ್ರತಿಜ್ಞೆ ಮಾಡಿದೆ.  ಈ ಪ್ರತಿಜ್ಞೆ ಮಾತ್ರ ಭಂಗಗೊಳ್ಳಲಿಲ್ಲ.  ಆದರೆ ಕಾಫಿ ವಿಪರೀತ ಸ್ಟ್ರಾಂಗ್ ಆಯಿತೆಂದು ನಾನು ದೂರುವುದೂ, ಸ್ವಲ್ಪ ಹಾಲು ಸೇರಿಸಬೇಕೆಂದು ಹೆಂಡತಿಯನ್ನು ಕೇಳುವುದೂ, ಅಂತೂ ಇಂತೂ ಕಾಫಿ ಒಂದು ಕಪ್‌ಗಿಂತ ಹೆಚ್ಚೇ ಆಯಿತೆಂದು ಅವಳು ಕೆಣಕುವುದೂ ಇದ್ದೇ ಇದೆ.  ಚಳಿಮಳೆಗಾಳಿಯ ಹವಾಮಾನದಲ್ಲಿ ಸ್ವಲ್ಪಸ್ವಲ್ಪ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ ಎಂಬ ಪ್ರೀತಿಕಾಳಜಿಗಳಿಂದ ನನ್ನ ಪ್ರತಿಜ್ಞೆ ಅಬಾಧಿತವಾಗಿ ಮುಂದುವರೆದಿದೆ.

ಈ ಪ್ರಸಂಗದಿಂದ ನೀವು ಕಂಡುಕೊಳ್ಳಬಹುದಾದಂತೆ, ಹೊಸವರ್ಷದ ಪ್ರತಿಜ್ಞೆಗಳ ಇನ್ನೊಂದು ಅಫುರ್ವ ಹುಣವೇನೆಂದರೆ, ಈ ಪ್ರತಿಜ್ಞೆಗಳು ತಗ್ಗಿಬಗ್ಗಿ ಬಳುಕುವ ಸ್ಥಿತಿಸ್ಥಾಪಕ ಶಕ್ತಿಯನ್ನು ಹೊಂದಿರುವುದು.  ಕಾಫಿ ಸೇವನೆಯನ್ನು ಸಮಗ್ರವಾಗಿ ಕೈಬಿಡಬೇಕೆನ್ನುವ ನನ್ನ ಪ್ರತಿಜ್ಞೆ, ಅರ್ಧ ಕಪ್ ಕಾಫಿ ಕುಡಿಯುವ ರಿಯಾಯಿತಿಯನ್ನು ತೋರಿಸಿಯೆ ಜಾರಿಗೆ ಬಂದಿತಲ್ಲದೆ, ಕಪ್ ಪೂರ್ಣಗೊಳ್ಳುವ ಸಾಧ್ಯತೆಯನ್ನು ಒಳಗೊಂಡಿತ್ತಲ್ಲವೇ!  ಹೀಗೆ ಪ್ರತಿಜ್ಞೆಗಲು ಅನೇಕ ರಿಯಾಯಿತಿಗಳನ್ನು ತೋರುತ್ತಲೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ವ್ಯಕ್ತಿತ್ವದ ಗಾಂಭೀರ್‍ಯವನ್ನು ಹೆಚ್ಚಿಸುತ್ತದೆ.  ಸಿಗರೇಟು ಸೇದಬಾರದೆಂದು ನಿರ್ಧರಿಸುವರನು 'ಬೀಡಿ, ನಶ್ಯ, ಹೊಗೆಸೊಪ್ಪು ಇತ್ಯಾದ ತಂಬಾಕಿನ ಯಾವುದಾದರೊಂದು ರೂಪವನ್ನು ಕಂಡುಕೊಂಡೇ ಇರುತ್ತಾನೆ.  ಈ ವರ್ಷ ಯಾವ ರೇಷ್ಮೆ ಸೀರೆಯನ್ನು ಕೊಳ್ಳುವುದಿಲ್ಲ ಎಂದು ನಿಮ್ಮ ಪತ್ನಿಯೇನಾದರೂ ಪ್ರತಿಜ್ಞೆ ಮಾಡಿದರೆಂದರೆ, ನಿಮ್ಮ ವಾರಭವಿಷ್ಯದಲ್ಲಿ ಪತ್ನಿಗೆ ವಸ್ತ್ರಲಾಭ ಎಂದೂ ಬಟ್ಟೆ ಖರೀದಿಯಿಂದ ನಷ್ಟ ವೆಂದೂ, ಪದೇ ಪದೇ ಕಾಣಿಸಿಕೊಳ್ಳುವುದು ಖಂಡಿತ.  ಇಲ್ಲಿ 'ವಸ್ತ್ರ' 'ಬಟ್ಟೆ' ಎಂಬ ನಾಮಪದಗಳ ಹಿಂದೆ 'ರೇಷ್ಮೆ' ಎಂಬುದಕ್ಕೆ ಬದಲಾಗಿ ಪಾಲಿಯೆಸ್ಟರ್, ಷಿಫಾನ್, ಕ್ರೇಪ್ ಇತ್ಯಾದಿ ವಿಶೇಷಣಗಳು ಮಿಂಚತೊಡಗುತ್ತವೆಯಷ್ಟೆ.  ಬಿಯರ್ ಕುಡಿಯುವುದೇನು ಮದ್ಯಪಾನವೆನಿಸುತ್ತದೆಯೇ? ಪೌರಾಣಿಕ ಚಿತ್ರಗಳನ್ನು ನೋಡಿದರೆ ಸಿನಿಮಾ ನೋಡಿದ ಹಾಗಾಯಿತೇ? ಕಾರ್ಟೂನ್ ಚಿತ್ರಾವಳಿ ನೋಡಿದಾಕ್ಷಣ ಟಿ.ವಿ. ಮುಂದೆ ಕುಳಿತ ಲೆಕ್ಕವೇ? ಎಂಬಂತಹ ಪ್ರಶ್ನೆಗಳನ್ನು ಯಾರಾದರೂ ಕೇಳಿದರೆ ಅಂಥವರು ನವ ವರ್ಷದ ಪ್ರತಿಜ್ಞೆಗಳನ್ನು ಕೈಗೊಂಡವರಾಗಿದ್ದು ಆಯಾ ಪ್ರತಿಜ್ಞೆಗಳು ಕರುಣಿಸಬಹುದಾದ ರಿಯಾಯಿತಿಗಳಿಗಾಗಿ ತಡಕಾಡುತ್ತಿರುವರೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.  ತಾನು ಈ ವರ್ಷ ಹೊಸದಾಗಿ ಬಟ್ಟೆಗಳನ್ನು ಹೊಲಿಸಿಕೊಳ್ಳುವುದಿಲ್ಲವೆಂದು ನನ್ನ ಮುಂದೆಯೆ ಪ್ರತಿಜ್ಞೆ ಮಾಡಿದ್ದ ಪಕ್ಕದ ಮನೆ ಕಾಲೇಜು ಹುಡುಗ ಆರು ತಿಂಗಳೊಳಗೆ ಅಪ್ಪನನ್ನು ಕಾಡಿ ಬೇಡಿ ಐದು ಸೆಟ್ ರೆಡಿಮೇಡ್ ಉಡುಪುಗಳನ್ನು ತಂದಿದ್ದನಂತೆ!

ಹೊಸ ವರ್ಷದ ಪ್ರತಿಜ್ಞೆಗಳಿಂದ ರಿಯಾಯಿತಿಯನ್ನು ಅಪೇಕ್ಷಿಸುವುದು ಮಾತ್ರವಲ್ಲ.  ಕೆಲವೊಮ್ಮೆ ಷರತಿಗೊಳಪಟ್ಟಂತೆ ಪ್ರತಿಜ್ಞೆಗಳನ್ನು ಕೈಗೊಳ್ಳುವವರಿದ್ದಾರೆ.  ಹೀಗೊಮ್ಮೆ ಗೆಳೆಯರ ಚರ್ಚೆಯ ನಡುವೆ, ಇತರ ಭಾಷಾಪತ್ರಿಕೆಗಳಿಗೆ ಹೋಲಿಸಿದರೆ ಕನ್ನಡ ವೃತ್ತಪತ್ರಿಕೆಗಳ ಚಂದಾದಾರರ ಸಂಖ್ಯೆ ಕಡಿಮೆಯೆಂದೂ ಇದರಿಂದ ಕನ್ನಡಿಗರ ಭಾಷಾಭಿಮಾನದ ಕೊರತೆ ಸ್ಪಷ್ಟವಾಗುವುದೆಂದೂ ಅಭಿಪ್ರಾಯ ಕೇಳಿ ಬಂದಿತು.  ಒಬ್ಬ ಗೆಳೆಯ ಕೂಡಲೇ ಘೋಷಿಸಿದ -  ಬರುವ ಜನವರಿ ಒಂದರಿಂದ ಕನ್ನಡ ಪತ್ರಿಕೆಯನ್ನೇ ಕೊಂಡು ಓದುತ್ತೇನೆ.  ಉಳಿದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವ ಹವಣಿಕೆಯಲ್ಲಿದ್ದಾಗ ಮಾತು ಮುಂದುವರೆಸಿ ಪಕ್ಕದ ಮನೆ ನಂಜಪ್ಪನವರು ಪೇಪರ್ ತರಿಸದೆ ಇದ್ದರೆ ಮಾತ್ರ ಎಂಬ ಷರತ್ತು ಹಾಕಿದ.  ಅವನ ಮುಖದಲ್ಲಿ ಪ್ರತಿಜ್ಞೆ ಮಾಡಿದ ಸಂಭ್ರಮದ ಜತೆಗೆ ಈ ಪ್ರತಿಜ್ಞೆಯನ್ನು ನೆರವೇರಿಸುವ  ಅಗತ್ಯವಿಲ್ಲವೆಂಬ ಸಂತೋಷವೂ ಎದ್ದು ಕಾಣುತ್ತಿತ್ತು.  'ಪಕ್ಕದ ಮನೆ ನಂಜಪ್ಪ'ನವರೂ ಪೇಪರ್ ತರಿಸದೆ ಇದ್ದರೆ ಹಿಂದಿನ ಬೀದಿಯ ಮೂರನೇ ಮನೆಗಾದರೂ ಪೇಪರ್ ಬಂದೇ ಬರುತ್ತದೆಯಷ್ಟೆ.

ಇನ್ನು ಮೇಲೆ ಕತೆ ಕಾದಂಬರಿ ಓದುವುದಿಲ್ಲ ಅಂತ ಮಾಡಿದ್ದೀನ್ರಿ ಎಂದು ಬಸ್‌ಸ್ಟಾಪಿನಲ್ಲಿ ಮಹಿಳೆಯೊಬ್ಬರು ತಮ್ಮ ಸ್ನೇಹಿತೆಗೆ ಹೇಳುತ್ತಿದ್ದುದು ನನ್ನ ಕಿವಿಗೆ ಬಿದ್ದಿತು.  ಮಾತು ಮುಂದುವರೆಸಿದ ಆಕೆ ಕಾದಂಬರಿ ಓದ್ತಾ ಇದ್ರೆ ಮನೆ ಕಲ್ಸಾನೂ ಸಾಗೋದಿಲ್ಲ. ಅದೂ ಅಲ್ದೆ ಅಂಬುಜಮ್ಮನವರು ಲೈಬ್ರರಿ ಮೆಂಬರ್‌ಶಿಪ್ ವಾಪಸ್ ತೆಗೊಂಡಿದಾರಂತೆ ಎಂದಾಗ ಅವರ ಪ್ರತಿಜ್ಞೆಗೆ ನಿಜವಾದ ಕಾರಣ ಗೊತ್ತಾಯಿತು.

ನಾವು ಕೈಗೊಳ್ಳುವ ಹೊಸವರ್ಷದ ಪ್ರತಿಜ್ಞೆಗಳನ್ನು ಇತರರ ಎದುರಿಗೇ ಘೋಷಿಸಬೇಕೆಂದೇನೂ ಇಲ್ಲ.  ಪ್ರತಿಜ್ಞೆ ಈಡೇರದೆ ಇದ್ದಾಗ ಹೊರಡುವ ಉಳಿದವರ ಕೊಂಕು ಮಾತುಗಳನ್ನು ಸಹಿಸಬೇಕಾಗುತ್ತದೆಯಷ್ಟೆ.  ಆದರೆ ಒಂದು ಕ್ಷಣದಲ್ಲಿ ಯಾವುದೇ ಪ್ರತಿಜ್ಞೆಯ ಮೂಲಕ ನಿಮ್ಮ ಘನತೆ ಗೌರವ ಹೆಚ್ಚುವುದೆಂದು ಕಂಡುಬಂದಲ್ಲಿ ಧಾರಾಳವಾಗಿ ಘೋಷಿಸಿಬಿಡಿ.  ಅದಕ್ಕೆ ಉಳಿದವರ ಪ್ರತಿಕ್ರಿಯೆ ಹೇಗೊ ಇರಬಹುದು.  ಇನ್ಮೇಲೆ ಇಸ್ಪೀಟ್ ಆಡೋದಿಲ್ಲ ಅಂತ ಪ್ರತಿಜ್ಞೆ ಮಾಡಿದೀಯಲ್ಲಯ್ಯಾ.  ನಿನ್ನದು ಭಾರಿ ಗಟ್ಟಿ ಮನಸ್ಸು ನೋಡು ಎಂಬ ಮೆಚ್ಚುಗೆಯ ಹಿಂದೆಯೇ ಇಷ್ಟು ವರ್ಷದ ಪ್ರತಿಜ್ಞೆಗಳ ಕತೆ ಏನು ಅಂತ ಗೊತ್ತಿದೆಯಲ್ಲ ಎಂಬ ವ್ಯಂಗ್ಯವೂ ಕೇಳಿಬಂದೀತು.  ಈ ಪ್ರತಿಜ್ಞೇನೇನಾದ್ರೂ ಸಾಧಿಸಿಬಿಟ್ಟೆಯೋ ನನ್ನ ಹೆಸರು ಬದಲಿಸಿ ಕೊಳ್ತೀನಿ ಎನ್ನುವ ಮರಿ ಪ್ರತಿಜ್ಞೆಯೂ ಸಮಾನಾಂತರವಾಗಿ ಹುಟ್ಟಿಕೊಳ್ಳಬಹುದು.

ಸಾಮಾನ್ಯವಾಗಿ ನಾವು ಕೈಗೊಳ್ಳುವ ಪ್ರತಿಜ್ಞೆಗಳು ವೈಯಕ್ತಿಕವಾಗಿರಬೇಕೇ ಹೊರತು ಇತರರ ಹಿತಾಸಕ್ತಿಗಳಿಗೆ ಭಂಗತರುವಂಥದ್ದಾಗಿರಬಾರದಷ್ಟೆ.  ಆದರೆ ಕಳೆದ ವರ್ಷದ ಆರಂಭದಲ್ಲಿ ನನ್ನ ಪತ್ನಿ ದಿಢೀರನೆ ಪ್ರತಿಜ್ಞೆಯೊಂದನ್ನು ಪ್ರಕಟಿಸಿ ನನ್ನ ನೆಮ್ಮದಿ ಕೆಡಿಸಿಬಿಟ್ಟಿದ್ದಳು.  ಇನ್ನು ಮುಂದೆ ಪ್ರತಿ ಭಾನುವಾರದಂದು ಅಡುಗೆ ಮನೆ ಪ್ರವೇಶಿಸುವುದಿಲ್ಲವೆಂಬುದೇ ಆ ಪ್ರತಿಜ್ಞೆ.  ವಾರಕ್ಕೊಂದು ದಿನ ರಜೆ ಪಡೆಯಲು ತನಗೂ ಹಕ್ಕಿದೆ ಎನ್ನವುದು ಈ ಪ್ರತಿಜ್ಞೆಯ ಹಿನ್ನೆಲೆ.  ನನಗೆ ಪಾಕಶಾಸ್ತ್ರದ ಜ್ಞಾನವಿರುವುದನ್ನು ಹೀಗೆ ಈಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದರ ಬಗೆಗೆ ಸಿಟ್ಟು ಬಂದಿತ್ತಲ್ಲದೆ ನವ ವರ್ಷದ ಪ್ರತಿಜ್ಞೆಗಳು ಪರಪೀಡನೆಗಾಗಿಯೂ ಹುಟ್ಟಿಕೊಳ್ಳಬಹುದೆಂಬುದರ ಅರಿವಾಯಿತು.  ಇತರರಿಗೆ ತೊಂದರೆಯಾಗುವಂಥ ಪ್ರತಿಜ್ಞೆಗಳಿಂದ ಯಾವ ಪುರುಷಾರ್ಥವೂ ಸಾಧಿಸುವುದಿಲ್ಲವೆಂದು ನಾನು ಟೀಕಿಸಿದ್ದಕ್ಕೆ, ಹಿಂದಿನ ವರ್ಷಗಳಲ್ಲಿ ಉಳಿತಾಯದ ನೆಪ ಹೇಳಿಕೊಂಡು ಹೊಸಖರೀದಿಗಳಿಗೆ ಇಡಿತ ತಂದಿದ್ದರ ಪರಿಣಾಮ ತನಗಾದ ಕಷ್ಟನಷ್ಟಗಳನ್ನು ವರ್ಣಿಸಿ ನನ್ನ ಬಾಯಿ ಮುಚ್ಚಿಸಿದಳು.  ನವವರ್ಷದ ಮೊದಲ ಭಾನುವಾರಕ್ಕೆ ಮೊದಲ?ಏ ಅಡಿಗೆ ಮನೆಗೆ ನನ್ನನ್ನು ಕರೆಸಿ ಪರಿಚಯ ಭಾಷಣವನ್ನೂ ಮಾಡಿಬಿಟ್ಟಳು.  ಆ ಭಾನುವಾರ ಬೆಳಗಿನಿಂದಲೇ ಅಡಿಗೆ ಮನೆಯ ನನ್ನ ಪರದಾಟವನ್ನು ನೋಡಲು ಖುಶಿ ಪಟ್ಟ ಮಕ್ಕಳು ಊಟಕ್ಕೆ ಕುಳಿತಾಗ ಮಾತ್ರ ಏಕೋ ಒದ್ದಾಡ ತೊಗಡಿದರು.  ನನ್ನ ಹೆಂಡತಿ ಅಡಿಗೆಯ ಬಗೆಗೆ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇದ್ದರೂ, ಸಂಜೆಯಾಗುವಾಗ ಹೋಟೆಲಿಗೆ ಹೋಗಿ ಬಹಳ ದಿನವಾಯಿತಲ್ಲವೇ ಮಕ್ಕಳೇ ಎಂದು ನನಗೆ ಕೇಳುವಂತೆ ಹೇಳಿದಳು.  ಅದರ ಮುಂದಿನ ಶನಿವಾರ ನನ್ನ ಮಾವನವರ ಅನಿರೀಕ್ಷಿತ ಆಗಮನವಾಗುತ್ತಿದ್ದಂತೆಯೆ ನನ್ನ ಹೆಂಡತಿಯ ಪ್ರತಿಜ್ಞೆ ಕೊನೆಗೊಂಡು ನನಗೆ ಶಾಪವಿಮೋಚನೆಯಾಯಿತು.

ಮನುಷ್ಯನ ಬದುಕಿನಲ್ಲಿ ಅವನು ಇಟ್ಟುಕೊಳ್ಳುವ ಆಕಾಕ್ಷೆಗಳಂತೆಯೇ ಸಂಕಲ್ಪಿಸುವ ಪ್ರತಿಜ್ಷೆಗಳೂ ಕೂಡ; ಅವು ಈಡೇರಬಹುದು, ಈಡೇರದೆಯೂ ಇರಬಹುದು.  ಹಾಗೆಂದು ಮನುಷ್ಯ ಆಸೆಗಳನ್ನು ತೊರೆಯಲಾರ, ಪ್ರತಿಜ್ಞೆಗಳನ್ನೂ ಬಿಡಲಾರ.  ನವವರ್ಷದಲ್ಲಿ ತನ್ನೆಲ್ಲಾ ಆಸೆಗಳೂ ಕೈಗೂಡಬಹುದೆಂಬ ಹೊಸದೊಂದು ಆಸೆ ಅವನ ಮನದಲ್ಲಿ ಮೂಡದೆ ಇರುತ್ತದೆಯೇ? ಅಂತೆಯೆ ಹಿಂದಿನ ವರ್ಷಗಳಲ್ಲಿ ತಾನು ಕೈಗೊಂಡಿದ್ದ ಪ್ರತಿಜ್ಞೆಗಳೆಲ್ಲ ಏನಾದುವೋ ಏನೋ ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಅವೇ ಅವೇ ಪ್ರತಿಜ್ಞೆಗಳನ್ನೇ ಅವನು ಮತ್ತೆ ಈ ವಷ್ವೂ ಕೈಗೊಂಡರೆ ಆಚ್ಚರಿಯಿಲ್ಲ.  ರಿಯಾಯಿತಿ, ಷರತ್ತುಗಳ ರೂಪದಲ್ಲಿ ಆ ಪ್ರತಿಜ್ಞೆಗಳು ಹೊರ ರೂಪ ತಾಳಿರುತ್ತದೆಯಷ್ಟೆ.  ಹೀಗೆ ನವವರ್ಷದ ಪ್ರತಿಜ್ಞೆಗಳು ಜೀವನದ ನಿರಂತರತೆಗೂ ಚಿರನೂತನತೆಗೂ ಸಂಕೇತವಾಗಿವೆ.  ಪ್ರತಿಜ್ಞೆಗಳು ನೆರವೇರಲಿಲ್ಲವೆಂದೋ ಭಂಗವಾಯಿತೆಂದೋ ಯಾರೂ ಕೊರಗಬೇಕಾಗಿಲ್ಲ.  ಪರಿಪೂರ್ಣತೆಯೆಂಬುದು ಯಾರೂ ಸಾಧಿಸಲಾಗದ ಆದರ್ಶ ಎಂದು ಹೇಳಿದ ಮಹಾನುಭಾವರು ವರ್ಷವರ್ಷವೂ ಪ್ರತಿಜ್ಞೆಗಳನ್ನು ಕೈಗೊಳ್ಳುತ್ತಿದ್ದ ಅನುಭವಶಾಲಿಯೇ ಆಗಿದ್ದರೆಂದು ಊಹಿಸಲವಕಾಶವಿದೆ.

ಹಾಗಿದ್ದರೆ ನಾವು ಕೈಗೊಳ್ಳುವ ಯಾವ ಪ್ರತಿಜ್ಷೆಯೂ ಈಡೇರುವುದೇ ಇಲ್ಲವೇ ಎಂದು ಕೊರಗಿ ನಿರಾಶಾವಾದದತ್ತ ಹೊರಳಬೇಡಿ.  ನಂಬಿದರೆ ನಂಬಿ, ಬಿಟ್ಟರೆ ಬಿಡಿ.  ನಾನು ಚಿಕ್ಕ ಹುಡುಗನಾಗಿರುವಾಗಲೇ ಮಾಡಿದ್ದ ಒಂದು ಪ್ರತಿಜ್ಞೆಯನ್ನು ಈವರೆಗೂ ಉಳಿಸಿಕೊಂಡಿದ್ದೇನೆ - ಪ್ರತಿವರ್ಷವೂ ಯಾವುದಾದರೂ ಪ್ರತಿಜ್ಞೆ ಮಾಡಿಯೇ ಮಾಡುತ್ತೇನೆ ಎಂಬೀ ಸಂಕಲ್ಪ ಈವರೆಗೂ ಭಂಗವಾಗಿಯೇ ಇಲ್ಲ! ಹೀಗೆಯೇ ನಿಮ್ಮ ಹೊಸವರ್ಷದ ಪ್ರತಿಜ್ಞೆಗಳೂ ನಿರಂತರವಾಗಿ ಮುಂದುವರೆಯಲೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ.

You Might Also Like

0 Responses

Popular Posts

Like us on Facebook