ಸ್ಟಾಂಪಿನ ಮೇಲೆ ನಮ್ಮದೇ ಫೋಟೋ!

9:46 AM

ಟಿ. ಜಿ. ಶ್ರೀನಿಧಿ

ಅಂಚೆಚೀಟಿಗಳ ಸಂಗ್ರಹಣೆ ಒಂದು ವಿಶಿಷ್ಟ ಹವ್ಯಾಸ. ಅದು ಕೇವಲ ಮನರಂಜನೆಗಷ್ಟೇ ಅಲ್ಲ, ತನ್ನ ವಿಷಯ ವೈವಿಧ್ಯದಿಂದಾಗಿ ನಮ್ಮ ಜ್ಞಾನಾರ್ಜನೆಗೂ ಸಹಾಯಮಾಡುತ್ತದೆ. ವಿವಿಧ ವರ್ಣ-ವಿನ್ಯಾಸದ ಅಂಚೆಚೀಟಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ; ಅಂಚೆ ಚೀಟಿಯ ವಿಷಯ ಏನೆಂದು ತಿಳಿದುಕೊಂಡು ಅದರ ಬಗ್ಗೆ ಹೆಚ್ಚಿನ ವಿವರ ಕಲೆಹಾಕುವುದು ಮೆದುಳಿಗೂ ಕಸರತ್ತಿನ ಕೆಲಸವೇ.

ವ್ಯಕ್ತಿಗಳ ವಿಷಯಕ್ಕೆ ಬಂದರಂತೂ ಅಂಚೆಚೀಟಿಗಳು ಪ್ರಪಂಚದೆಲ್ಲೆಡೆಯ ಪ್ರಸಿದ್ಧರನ್ನೂ ನಮ್ಮೆದುರು ತಂದು ನಿಲ್ಲಿಸುತ್ತವೆ. ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳು, ರಾಷ್ಟ್ರ ನಾಯಕರು, ಸಿನಿಮಾ ತಾರೆಗಳು, ಕ್ರೀಡಾಪಟುಗಳು, ಸಮಾಜಸೇವಕರು, ಐತಿಹಾಸಿಕ ವ್ಯಕ್ತಿಗಳು - ಒಂದೇ ಎರಡೇ, ಅಂಚೆಚೀಟಿಗಳಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳ ವೈಶಿಷ್ಟ್ಯದಲ್ಲಿನ ವೈವಿಧ್ಯ!

ಹೀಗೆ ಅಂಚೆಚೀಟಿಗಳ ಮೇಲೆ ವಿಭಿನ್ನ ಕ್ಷೇತ್ರಗಳ ಸಾಧಕರ ಚಿತ್ರಗಳನ್ನು ನೋಡಿದಾಗ ನಮ್ಮ ಚಿತ್ರವೂ ಅಂಚೆಚೀಟಿಯಲ್ಲಿದ್ದರೆ ಎಷ್ಟು ಚೆಂದ ಎಂದು ಕೆಲವರಿಗಾದರೂ ಅನ್ನಿಸದೆ ಇರದು. ಬೇರೆ ಯಾರೂ ಬಳಸದಿದ್ದರೆ ಬೇಡ, ನಮ್ಮ ಸಂಗ್ರಹದಲ್ಲಿ ಇಟ್ಟುಕೊಳ್ಳುವುದಕ್ಕೆ - ಅಥವಾ - ಮಿತ್ರರಿಗೆ ಶುಭಾಶಯಪತ್ರವನ್ನೋ ಮತ್ತೊಂದನ್ನೋ ಕಳುಹಿಸುವಾಗ ಬಳಸುವುದಕ್ಕೆ ನಮ್ಮದೇ ಚಿತ್ರವಿರುವ ಅಂಚೆಚೀಟಿ ಇದ್ದುಬಿಟ್ಟರೆ ಅದಕ್ಕಿಂತ ಬೇರೇನು ಬೇಕು?

ಹಾಗಾದರೆ ಅಂಚೆಚೀಟಿಯ ಮೇಲೆ ನಮ್ಮದೇ ಚಿತ್ರ ನೋಡಬೇಕೆನ್ನುವವರು ಏನು ಮಾಡಬೇಕು? ಸಚಿನ್ ತೆಂಡೂಲ್ಕರ್ ತರಹ ಇನ್ನೂರು ಟೆಸ್ಟ್ ಮ್ಯಾಚ್ ಆಡಬೇಕೋ, ಡಾ. ರಾಜ್‌ಕುಮಾರರ ರೀತಿ ಸಿನಿಮಾರಂಗದಲ್ಲಿ ಮಿಂಚಬೇಕೋ ಎಂದು ಕೇಳಿದರೆ ಉತ್ತರ - ಖಂಡಿತಾ ಬೇಡ. ಏಕೆಂದರೆ ಅಷ್ಟೆಲ್ಲ ಸಾಧನೆ ಮಾಡಿಲ್ಲದಿದ್ದರೂ ನನ್ನ-ನಿಮ್ಮಂತಹವರ ಚಿತ್ರಗಳೂ ಅಂಚೆಚೀಟಿಯ ಮೇಲೆ ಬರುವುದು ಸಾಧ್ಯವಿದೆ.


ನಮ್ಮದೇ ಚಿತ್ರವಿರುವ ಅಂಚೆಚೀಟಿಗಳನ್ನು ಕೊಂಡಿಟ್ಟುಕೊಳ್ಳುವುದು, ಬಳಸುವುದು ಸ್ಟಾಂಪುಲೋಕದ ಫ್ಯಾಶನ್ನುಗಳಲ್ಲೊಂದು. ಸಾಧಕರ ಗೌರವಾರ್ಥ ಬಿಡುಗಡೆಯಾಗುತ್ತವಲ್ಲ ಅಂಚೆಚೀಟಿಗಳು, ಅವಕ್ಕೂ ಈ ಪರ್ಸನಲೈಸ್ಡ್ ಅಂಚೆಚೀಟಿಗಳಿಗೂ ಅಜಗಜಾಂತರ ವ್ಯತ್ಯಾಸ. ನಿರ್ದಿಷ್ಟ ಶುಲ್ಕಕ್ಕೆ ಪ್ರತಿಯಾಗಿ ನಮ್ಮ ಫೋಟೋವನ್ನು ಅಂಚೆಚೀಟಿಗಳ ಮೇಲೆ ಮುದ್ರಿಸಿಕೊಡುವ ಈ ಸೌಲಭ್ಯ ನಮ್ಮ ದೇಶದ ಜೊತೆಗೆ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಸಿಂಗಪುರ, ಭೂತಾನ್ ಮುಂತಾದ ಅನೇಕ ದೇಶಗಳಲ್ಲೂ ಲಭ್ಯ. ಕೆಲವು ದೇಶಗಳಲ್ಲಿ (ಉದಾ: ಭೂತಾನ್, ಅಮೆರಿಕಾ) ನಮ್ಮ ಚಿತ್ರವನ್ನು ನೇರವಾಗಿ ಅಂಚೆಚೀಟಿಯ ಮೇಲೆಯೇ ಮುದ್ರಿಸಲಾಗುತ್ತದೆ, ಅಂದರೆ ಸ್ಟಾಂಪಿನ ಮೇಲೆ ಸಚಿನ್ ತೆಂಡೂಲ್ಕರ್ ಫೋಟೋ ಇದ್ದಂತೆ ನಮ್ಮ ಫೋಟೋ ಕೂಡ ಇರುವುದು ಅಲ್ಲಿ ಸಾಧ್ಯ. ಆದರೆ ಭಾರತವೂ ಸೇರಿದಂತೆ ಇನ್ನು ಕೆಲ ದೇಶಗಳಲ್ಲಿ ನಮ್ಮ ಚಿತ್ರವನ್ನು ಅಂಚೆಚೀಟಿಯ ಬದಲಿಗೆ ಅದಕ್ಕೆ ಹೊಂದಿಕೊಂಡಂತಿರುವ ಪ್ರತ್ಯೇಕ ಭಾಗದಲ್ಲಿ ಮುದ್ರಿಸಲಾಗುತ್ತದೆ. ಆದರೆ ಈ ಭಾಗ ಅಂಚೆಚೀಟಿಗೆ ಹೊಂದಿಕೊಂಡಂತೆಯೇ ಇರುವುದರಿಂದ ಅಗತ್ಯಬಿದ್ದರೆ ಅದನ್ನು ಅಂಚೆಚೀಟಿಯ ಜೊತೆಗೇ ಬಿಡಿಸಿ ಲಕೋಟೆಗೆ ಅಂಟಿಸಿ ಕಳುಹಿಸುವುದು ಸಾಧ್ಯ.

ಅಂದಹಾಗೆ ನಮ್ಮ ದೇಶದ ಅಂಚೆ ಇಲಾಖೆ ಈ ಬಗೆಯ ಸ್ಟಾಂಪುಗಳನ್ನು 'ಮೈ ಸ್ಟಾಂಪ್' ಎಂಬ ವಿಶೇಷ ಕಾರ್ಯಕ್ರಮದಡಿ ಮುದ್ರಿಸಿ ಮಾರಾಟಮಾಡುತ್ತದೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳ ಮುಖ್ಯ ಅಂಚೆಕಚೇರಿಗಳಲ್ಲಿ ನಮ್ಮ ಆಯ್ಕೆಯ ಚಿತ್ರ ಮತ್ತು ಗುರುತಿನ ಪುರಾವೆ ನೀಡಿ ಒಂದು ಅರ್ಜಿ ಭರ್ತಿಮಾಡಿಕೊಟ್ಟರೆ ನಾವೂ ಸ್ಟಾಂಪಿನಲ್ಲಿ ಕಾಣಿಸಿಕೊಳ್ಳಬಹುದು. ತಲಾ ರೂ. ೫ ಮುಖಬೆಲೆಯ ಹನ್ನೆರಡು ಅಂಚೆಚೀಟಿಗಳಿರುವ ಹಾಳೆಯಲ್ಲಿ ಸ್ಟಾಂಪಿನ ಪಕ್ಕ ನಮ್ಮ ಚಿತ್ರ ಮುದ್ರಿಸಿಕೊಡಲು ನೀಡಬೇಕಿರುವ ಶುಲ್ಕ ಮುನ್ನೂರು ರೂಪಾಯಿಗಳು.

ಡಿಸೆಂಬರ್ ೧೪, ೨೦೧೩ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

You Might Also Like

0 Responses

Popular Posts

Like us on Facebook