ಕನ್ನಡ ಕಾದಂಬರಿಗಳೂ ಕರ್ನಾಟಕದ ಇತಿಹಾಸವೂ...

9:50 PM

ಚಿತ್ರದುರ್ಗ (ಚಿತ್ರ: ಟಿ. ಎಸ್. ಗೋಪಾಲ್)
ನಮ್ಮ ನಾಡಿನ ಇತಿಹಾಸ ಎಂದಿಗೂ ಕುತೂಹಲ ಕೆರಳಿಸುವ ವಿಷಯ. ವಿಚಿತ್ರ ಸಂಗತಿಯೆಂದರೆ ನಮ್ಮ ನಾಡಿನ ಇತಿಹಾಸದ ಬಗ್ಗೆ ಓದಲು ಸಿಗುವ ಸರಕು  ಬಹಳ ಕಡಿಮೆ. ಬಿ ಎಲ್ ರೈಸ್ - ಹಯವದನ ರಾಯರ ಗಜೆಟಿಯರ್‌, ಎಂ ಎಸ್ ಪುಟ್ಟಣ್ಣನವರಂತಹ ಹಿರಿಯರ ಕೃತಿಗಳು (ಉದಾ: ಚಿತ್ರದುರ್ಗದ ಪಾಳೆಯಗಾರರು) ಎಲ್ಲೋ ಬೆರಳೆಣಿಕೆಯಷ್ಟು - ಬೆಂಗಳೂರಿನಲ್ಲಿ ಖಾಲಿ ರಸ್ತೆ ಸಿಕ್ಕಷ್ಟೇ ಅಪರೂಪ.

ಈ ಕೊರತೆಯನ್ನು ತುಂಬಿಕೊಡುವಲ್ಲಿ ಕನ್ನಡದ ಕಾದಂಬರಿಕಾರರ ಕೊಡುಗೆ ಅಪಾರವಾದದ್ದು. ಚಿತ್ರದುರ್ಗದ ಕತೆಯನ್ನು ಅಮರವಾಗಿಸಿದ ತ.ರಾ.ಸು, ಹೊಯ್ಸಳರ ಇತಿಹಾಸಕ್ಕೆ ರೋಚಕ ಕಾದಂಬರಿಗಳ ರೂಪಕೊಟ್ಟ ಸಿ. ಕೆ. ನಾಗರಾಜರಾವ್, ಕೊಡಗಿನ ವೀರ ದೊಡ್ಡವೀರರಾಜೇಂದ್ರನ ಬಗ್ಗೆ ಬರೆದ ಎಸ್. ವಿ. ಶ್ರೀನಿವಾಸರಾವ್, ಕೆಂಪೇಗೌಡರ ಬಗ್ಗೆ ಬರೆದ ಅ.ನ.ಕೃ, ಚಿಕ್ಕವೀರರಾಜೇಂದ್ರನ ದುರಂತಕತೆಯನ್ನು ಕಟ್ಟಿಕೊಟ್ಟ ಮಾಸ್ತಿ, ... ಈ ಪಟ್ಟಿ ಬಹಳ ದೊಡ್ಡದು. ಕಾದಂಬರಿಗಳಷ್ಟೇ ಏಕೆ, ಮಾಸ್ತಿಯವರ 'ನಿಜಗಲ್ಲಿನ ರಾಣಿ' ಕತೆಯಿದೆಯಲ್ಲ - ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿ ಕಾಣುವ ನಿಜಗಲ್ಲು ಕೋಟೆಯ ಬಗ್ಗೆ ಕುತೂಹಲ ಹುಟ್ಟಲು ಅದೊಂದೇ ಸಾಕು!

ಈ ಪಟ್ಟಿಗೆ ಸೇರುವ ಇನ್ನೊಂದು ಕೃತಿಯನ್ನು ಈಗಷ್ಟೆ ಓದಿಮುಗಿಸಿದೆ. ಪ್ರಸಿದ್ಧ ಕಾದಂಬರಿಕಾರ ಟಿ. ಕೆ. ರಾಮರಾಯರ 'ಜಗದೇವರಾಯ', ನಮ್ಮೂರ ಪಕ್ಕದ ಚನ್ನಪಟ್ಟಣದ ಇತಿಹಾಸವನ್ನು ಅದೆಷ್ಟು ಸೊಗಸಾಗಿ ಪರಿಚಯಿಸುತ್ತದೆಂದರೆ ಈವರೆಗೆ ನಮಗೇನೂ ಗೊತ್ತೇ ಇರಲಿಲ್ಲವಲ್ಲ ಎಂದು ನಾಚಿಕೆಯಾಗುತ್ತದೆ. ದಕ್ಷಿಣಭಾರತ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದ ಸಾಮ್ರಾಜ್ಯದ ಕತೆಯ ಜೊತೆಗೆ ರಕ್ಕಸತಂಗಡಿ ನಂತರದ ವಿಜಯನಗರದ ಇತಿಹಾಸ, ಮೈಸೂರು ಸಂಸ್ಥಾನದ ಉಗಮ, ಶಿವನಸಮುದ್ರದಂತಹ ಸಣ್ಣಪುಟ್ಟ ಸಂಸ್ಥಾನಗಳ ಕತೆಯೂ ನಮ್ಮನ್ನು ಸೆಳೆಯುತ್ತದೆ.

'ಜಗದೇವರಾಯ' ಕಾದಂಬರಿಯ ನಂತರ ಚನ್ನಪಟ್ಟಣದ ಪತನ ಕುರಿತ ಇನ್ನೊಂದು ಕಾದಂಬರಿ ಬರೆಯುವ ಉದ್ದೇಶ ರಾಮರಾಯರಿಗಿತ್ತಂತೆ. ಇನ್ನು ಈಗ ಆ ಪುಸ್ತಕದ ಹುಡುಕಾಟ ಶುರುಮಾಡಬೇಕು! 

You Might Also Like

0 Responses

Popular Posts

Like us on Facebook