ನಾಗೇಶ ಹೆಗಡೆ ಮೇಷ್ಟ್ರು

10:56 AM

ಚಿಕ್ಕ ವಯಸ್ಸಿನಿಂದಲೇ ಕತೆ, ಪುಸ್ತಕ, ಪತ್ರಿಕೆ ಅಂತೆಲ್ಲ ಏನೇನೋ ಪ್ರಯೋಗಗಳನ್ನು ಮಾಡುತ್ತ ಬಂದಿದ್ದರೂ ನಾನು ವಿಜ್ಞಾನ - ತಂತ್ರಜ್ಞಾನದ ಲೇಖನಗಳನ್ನು ನಿಯಮಿತವಾಗಿ ಬರೆಯಲು ಶುರುಮಾಡಿದ್ದು ಮಾತ್ರ ಇಂಜಿನಿಯರಿಂಗ್ ವ್ಯಾಸಂಗದ ಸಂದರ್ಭದಲ್ಲಿಯೇ. ಪಿಯುಸಿ ಮುಗಿಸಿದ ಮೇಲೆ ಸಾಕಷ್ಟು ಸಮಯದ ರಜೆ ಇದ್ದದ್ದು ಬಹುಶಃ ಈ ಹವ್ಯಾಸದತ್ತ ನನ್ನನ್ನು ಸೆಳೆದಿರಬೇಕು ಅನ್ನಿಸುತ್ತದೆ. ಬರವಣಿಗೆಯಲ್ಲಿ ನೆರವಾಗಲು ಶ್ರೀಮಂಗಲದ ಮನೆಯಲ್ಲಿ ನೂರಾರು ಪುಸ್ತಕಗಳೂ ಇದ್ದವಲ್ಲ! ಇನ್ನು ಈ ಹವ್ಯಾಸಕ್ಕೆ ಅಗತ್ಯವಾದ ಪ್ರೇರಣೆಯನ್ನು ಪತ್ರಿಕೆಯಲ್ಲಿ ನನ್ನ ಹೆಸರನ್ನು ನೋಡುವ ಖುಷಿ, ಹಾಗೂ ಪ್ರಕಟಿತ ಲೇಖನಗಳಿಗೆ [ಕೆಲವು] ಪತ್ರಿಕೆಗಳು ನೀಡುತ್ತಿದ್ದ ಸಂಭಾವನೆ ಕೊಡುತ್ತಿದ್ದವು.

ಹೀಗೆ ಏನೇನೋ ಬರೆದುಕೊಂಡು ಒಂದಷ್ಟು ಸಮಯ ಕಳೆದಿದ್ದಾಗ ಒಂದು ದಿನ (೧೦ ಜುಲೈ ೨೦೦೩) ನನ್ನ ಇಮೇಲಿನಲ್ಲಿ ಒಂದು ಅಪರೂಪದ ಪತ್ರ ಕಾಣಿಸಿಕೊಂಡಿತು: "ಪ್ರಿಯ ಶ್ರೀನಿಧಿ, ವಿವಿಧ ಪತ್ರಿಕೆಗಳಲ್ಲಿ ನಿನ್ನ ಲೇಖನಗಳನ್ನು ಓದುತ್ತಿರುತ್ತೇನೆ. ಮಾಹಿತಿ ತಂತ್ರಜ್ಞಾನ ಕುರಿತ ಲೇಖನಗಳನ್ನು ನೀನು ನಮ್ಮ ಪತ್ರಿಕೆಗೂ ಯಾಕೆ ಬರೆಯಬಾರದು?" ಎನ್ನುವುದು ಆ ಪತ್ರದಲ್ಲಿದ್ದ ಸಂದೇಶ. ಯಾವ ರೀತಿಯ ಲೇಖನಗಳನ್ನು ಬರೆಯಬಹುದು ಎನ್ನುವ ಬಗ್ಗೆ ಮಾಹಿತಿಯೂ ಅದೇ ಪತ್ರದಲ್ಲಿತ್ತು.

ಆ ಪತ್ರ ಬರೆದವರು ಶ್ರೀ ನಾಗೇಶ ಹೆಗಡೆ. ಆಗಷ್ಟೆ ಬರೆಯಲು ಪ್ರಾರಂಭಿಸಿದವನಿಗೆ ಇಂತಹುದೊಂದು ಪತ್ರ ಕಳುಹಿಸಿ ಅವರು ನೀಡಿದ ಪ್ರೋತ್ಸಾಹವಿದೆಯಲ್ಲ, ಅಂತಹ ಪ್ರೋತ್ಸಾಹ ಕೊಡುವವರು ಎಲ್ಲೋ ಬೆರಳೆಣಿಕೆಯಷ್ಟು ಜನ ಇರಬಹುದಷ್ಟೆ. ಅಲ್ಲಿಂದ ಇಲ್ಲಿಯವರೆಗಿನ ಒಂದು ದಶಕಕ್ಕೂ ಮಿಕ್ಕ ಅವಧಿಯಲ್ಲೂ ಅಷ್ಟೆ - ನಾಗೇಶ ಹೆಗಡೆಯವರು ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ.

ನಾಗೇಶ ಹೆಗಡೆಯವರೊಡನೆ, ೨೦೦೭ರಲ್ಲಿ
ಪ್ರಕಟಣೆಗೆಂದು ಲೇಖನವೊಂದನ್ನು ಕಳುಹಿಸಿದಾಗ ಅದನ್ನು ಅಚ್ಚುಕಟ್ಟಾಗಿ ಬದಲಿಸಿ ಹೊಸ ರೂಪಕೊಡುವುದರಿಂದ ಹಿಡಿದು ಲೇಖನ ಚೆನ್ನಾಗಿಲ್ಲದಾಗ 'Scrap and Rewrite!' ಎನ್ನುವವರೆಗೆ ಅವರು ನೀಡಿರುವ ಮಾರ್ಗದರ್ಶನ ಅಮೂಲ್ಯವಾದದ್ದು. ಇಜ್ಞಾನ ಡಾಟ್ ಕಾಮ್ ಮೂಲಕ ಮಾಡುತ್ತಿರುವ ಪ್ರಯೋಗಗಳಿಗೂ ಅವರ ಬೆಂಬಲ ಸದಾಕಾಲ ನನ್ನೊಡನೆ ಇದೆ. ಅಷ್ಟೇ ಏಕೆ, ಲೇಖನವೊಂದನ್ನು ಕಳುಹಿಸಿದಾಗ ಅದನ್ನು ಓದಿ, ಉತ್ತಮ ಅಂಶಗಳನ್ನು ಗುರುತಿಸಿ, ಇನ್ನೂ ಹೆಚ್ಚು ವಿವರ ಸೇರಿಸಬೇಕಾದ್ದನ್ನು ಹೇಳಿ, ನಿರೂಪಣೆಯ ಲೋಪದೋಷಗಳನ್ನು ವಿವರಿಸಿ, ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ ಅವರ ನೆನಪಿನ ಕೆಲವು ಸಂಗತಿಗಳನ್ನು ಉದಾಹರಿಸುವಷ್ಟು ವ್ಯವಧಾನ - ಪ್ರೀತಿ ಅದೆಷ್ಟು ಜನರಲ್ಲಿ ಇದ್ದೀತು? ಆ ಪ್ರೀತಿ ನನಗೆ ದೊರೆತಿರುವುದು ನಿಜಕ್ಕೂ ನನ್ನ ಅದೃಷ್ಟವೆಂದು ನಾನು ಭಾವಿಸುತ್ತೇನೆ.

ಈಗ ಹೇಳಿ, ಮೇಷ್ಟರು ಇರುವುದು ಶಾಲೆ ಕಾಲೇಜುಗಳಲ್ಲಷ್ಟೆ ಅಂದವರು ಯಾರು?
ಇಂದು, ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ನನ್ನ ಜಾಲತಾಣ ಇಜ್ಞಾನ ಡಾಟ್ ಕಾಮ್‌ನಲ್ಲಿ ನಾಗೇಶ ಹೆಗಡೆಯವರ ಸಂದರ್ಶನ ಪ್ರಕಟಿಸಲು ನನಗೆ ಹೆಮ್ಮೆಯೆನಿಸುತ್ತಿದೆ. ಸಂದರ್ಶನ ಓದಲು ಇಲ್ಲಿ ಕ್ಲಿಕ್ ಮಾಡಿ.

You Might Also Like

0 Responses

Popular Posts

Like us on Facebook