ಸ್ಮಾರ್ಟ್ ಮಕ್ಕಳಿಗೊಂದು ಸ್ಮಾರ್ಟ್ ಉಡುಗೊರೆ!

7:29 PM


ಸ್ಮಾರ್ಟ್‌ಫೋನ್ ಒಂದು ಬಹೂಪಯೋಗಿ ಸಾಧನ. ಪುಟ್ಟಮಕ್ಕಳಿಂದ ಹಿಡಿದು ಅಜ್ಜಿ-ತಾತಂದಿರವರೆಗೆ ಎಲ್ಲರಿಗೂ ಪ್ರಯೋಜನಕ್ಕೆ ಬರುವ ಹಲವು ಸವಲತ್ತುಗಳು ಸ್ಮಾರ್ಟ್‌ಫೋನಿನಲ್ಲಿರುತ್ತವೆ. ಈ ಸಾಧನದ ಅಭೂತಪೂರ್ವ ಜನಪ್ರಿಯತೆಗೆ ಕಾರಣವೂ ಇದೇ.

ಆದರೆ ಸ್ಮಾರ್ಟ್‌ಫೋನಿನಲ್ಲಿ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನನುಕೂಲಗಳೂ ಇವೆ. ಮಕ್ಕಳ ದೃಷ್ಟಿಯಿಂದ ನೋಡಿದಾಗಲಂತೂ ಅದರಲ್ಲಿರುವ ಹಲವು ಸೌಲಭ್ಯಗಳು ಮಕ್ಕಳ ಏಕಾಗ್ರತೆಗೆ ಭಂಗತರಬಹುದು, ಸಮಯ ವ್ಯರ್ಥಮಾಡಲು ಪ್ರೇರೇಪಿಸಬಹುದು, ಓದಿನ ಬಗ್ಗೆ ಆಸಕ್ತಿಯನ್ನೇ ಕಡಿಮೆಮಾಡಿಬಿಡಬಹುದು.

ಅಂದರೆ ಮಕ್ಕಳಿಗೆ ಸ್ಮಾರ್ಟ್‌ಫೋನ್ ಸಹವಾಸವೇ ಬೇಡವೇ? ಖಂಡಿತಾ ಇಲ್ಲ. ಸ್ಮಾರ್ಟ್‌ಫೋನಿನ ಉಪಯುಕ್ತ ಸವಲತ್ತುಗಳನ್ನು ಮಾತ್ರ ಪ್ರತ್ಯೇಕಿಸಿ ಅವರಿಗೆ ನೀಡುವುದಾದರೆ ಅದು ನಿಜಕ್ಕೂ ಒಳ್ಳೆಯ ಆಲೋಚನೆ ಆಗಬಲ್ಲದು.

ಇಂತಹುದೊಂದು ಒಳ್ಳೆಯ ಆಲೋಚನೆಯ ಪರಿಣಾಮವಾಗಿ ರೂಪುಗೊಂಡಿರುವುದೇ 'ಓಜಾಯ್ ಎ೧' ಎಂಬ ವಿಶಿಷ್ಟ ಕೈಗಡಿಯಾರ. ಇದು ನಮ್ಮದೇ ದೇಶದ ಸಂಸ್ಥೆಯೊಂದರ ಉತ್ಪನ್ನ ಎನ್ನುವುದು ವಿಶೇಷ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಕಚೇರಿಗಳಿರುವ NWSD Technologies Private Limited ಎಂಬ ಸಂಸ್ಥೆ ಈ ಕೈಗಡಿಯಾರವನ್ನು ರೂಪಿಸಿದೆ.

ಅರೆ, ಸ್ಮಾರ್ಟ್‌ಫೋನ್ ಕುರಿತ ಮಾತಿನ ನಡುವೆ ಕೈಗಡಿಯಾರ ಎಲ್ಲಿಂದ ಬಂತು ಎಂದಿರಾ? ಇಲ್ಲಿ ಪರಿಚಯಿಸಲು ಹೊರಟಿರುವ ಓಜಾಯ್ ಎ೧ ಒಂದು ಸ್ಮಾರ್ಟ್‌ಫೋನ್-ವಾಚು, ಅರ್ಥಾತ್, ಸ್ಮಾರ್ಟ್‌ಫೋನಿನ ಹಲವು ಸೌಲಭ್ಯಗಳಿರುವ ಸ್ಮಾರ್ಟ್ ಕೈಗಡಿಯಾರ!


ಈ ಕೈಗಡಿಯಾರವನ್ನು ಮಕ್ಕಳಿಗಾಗಿಯೇ ನಿರ್ಮಿಸಲಾಗಿರುವುದು ವಿಶೇಷ. ಮಕ್ಕಳ ಸುರಕ್ಷತೆ ಹಾಗೂ ಸಂವಹನದ ದೃಷ್ಟಿಯಿಂದ ಉಪಯುಕ್ತವಾದ ದೂರವಾಣಿ ಕರೆ, ಮೆಸೇಜಿಂಗ್, ಜಿಪಿಎಸ್, ಕ್ಯಾಮೆರಾ ಮುಂತಾದ ಸೌಲಭ್ಯಗಳೆಲ್ಲ ಇದರಲ್ಲಿವೆ.

ಬಹುತೇಕ ಸ್ಮಾರ್ಟ್‌ವಾಚುಗಳನ್ನು ಮೊಬೈಲ್ ಫೋನಿನ ಜೊತೆಯಲ್ಲಿ ಬಳಸಬೇಕಾಗುತ್ತದಲ್ಲ, ಆ ಪರಿಸ್ಥಿತಿಯನ್ನು ಬದಲಿಸಲೆಂದು ಈ ವಾಚಿಗೇ ೪ಜಿ ಸಿಮ್ ಕಾರ್ಡ್ ಹಾಕುವ ಸೌಲಭ್ಯ ನೀಡಲಾಗಿದೆ. ಹಾಗಾಗಿ ಇದನ್ನು ಸ್ವತಂತ್ರವಾಗಿ, ಮೊಬೈಲಿನ ಗೊಡವೆಯಿಲ್ಲದೆ, ಬಳಸುವುದು ಸಾಧ್ಯ.

ಇಷ್ಟೆಲ್ಲ ವಿಶಿಷ್ಟವಾದ ಕೈಗಡಿಯಾರವನ್ನು ಕೊಡಿಸುವ ಪೋಷಕರಿಗೆ ತಮ್ಮ ಮಕ್ಕಳ ಚಟುವಟಿಕೆ ಗೊತ್ತಾಗಬೇಕಲ್ಲ, ಅದಕ್ಕಾಗಿ ಅವರು ತಮ್ಮ ಮೊಬೈಲಿನಲ್ಲೇ ಒಂದು ಆಪ್‌ ಅನ್ನು ಬಳಸಿಕೊಳ್ಳಬಹುದು. ವಾಚಿನ ಜಿಪಿಎಸ್ ಸೌಲಭ್ಯ ಬಳಸಿಕೊಳ್ಳುವ ಈ ಆಪ್, ಮಕ್ಕಳು ಎಲ್ಲಿದ್ದಾರೆ ಎನ್ನುವುದನ್ನು ತತ್‌ಕ್ಷಣದಲ್ಲೇ ತೋರಿಸುತ್ತದೆ. ಅಷ್ಟೇ ಅಲ್ಲ, ಶಾಲೆಯ ಅಥವಾ ಮನೆಯ ಸುತ್ತಲ ಪ್ರದೇಶ ಬಿಟ್ಟು ಅವರು ಹೊರಗೇನಾದರೂ ಹೋದರೆ ಆ ಬಗ್ಗೆಯೂ ಮಾಹಿತಿ ನೀಡುತ್ತದೆ (ಜಿಯೋಫೆನ್ಸಿಂಗ್ ತಂತ್ರಜ್ಞಾನ ಬಳಸುವ ಈ ಸವಲತ್ತನ್ನು ಪೋಷಕರು ಮೊದಲಿಗೆ ಸಕ್ರಿಯಗೊಳಿಸಬೇಕಾಗುತ್ತದೆ).

ಇದೇ ಆಪ್ ಮೂಲಕ ಮಕ್ಕಳ ಜೊತೆಗೆ ಚಾಟ್ ಮಾಡುವುದು ಕೂಡ ಸಾಧ್ಯ. ಮಕ್ಕಳಿಗೆ ಪಠ್ಯ ಸಂದೇಶಗಳನ್ನು ಕಳುಹಿಸುವುದಷ್ಟೇ ಅಲ್ಲದೆ ಧ್ವನಿ, ಚಿತ್ರ, ವೀಡಿಯೋ ಹಾಗೂ ಎಮೋಜಿಗಳನ್ನೂ ಅವರೊಡನೆ ಹಂಚಿಕೊಳ್ಳಬಹುದು. ಮಕ್ಕಳು ತಮ್ಮ ವಾಚಿನಿಂದ ಯಾರಿಗೆಲ್ಲ ಕರೆಮಾಡಬಹುದು ಎನ್ನುವುದನ್ನೂ ಈ ಆಪ್‌ನಲ್ಲಿಯೇ ನಿಗದಿಪಡಿಸಬಹುದು. ಹೀಗೆ ನಿಗದಿಪಡಿಸಿದವರನ್ನು ಹೊರತುಪಡಿಸಿ ಮಕ್ಕಳು ಬೇರೆ ಸಂಖ್ಯೆಗಳಿಗೆ ಕರೆಮಾಡುವಂತಿಲ್ಲ ಎನ್ನುವುದು ಈ ವಾಚಿನಲ್ಲಿರುವ ಸುರಕ್ಷತಾ ಸೌಲಭ್ಯ.

ಇತರೆಲ್ಲ ಸ್ಮಾರ್ಟ್‌ವಾಚುಗಳಂತೆ ಬಳಕೆದಾರರ ದೈಹಿಕ ಚಟುವಟಿಕೆಗಳನ್ನು ಗಮನಿಸಿಕೊಳ್ಳುವ ಸೌಲಭ್ಯ ಈ ಕೈಗಡಿಯಾರದಲ್ಲೂ ಇದೆ. ಅಲಾರ್ಮ್, ಸ್ಟಾಪ್‌ವಾಚ್, ಕ್ಯಾಲೆಂಡರ್, ಹವಾಮಾನ ಮಾಹಿತಿ ಅಲ್ಲದೆ ವಿನ್ಯಾಸವನ್ನು (ಥೀಮ್) ಬದಲಿಸಿಕೊಳ್ಳುವಂತಹ ಸೌಲಭ್ಯಗಳೂ ಇದರಲ್ಲಿವೆ. ಇಷ್ಟೆಲ್ಲ ಸೌಲಭ್ಯಗಳನ್ನು ಮಕ್ಕಳು ಶಾಲೆಯ ಸಮಯದಲ್ಲಿ ಬಳಸಿ ಬೈಸಿಕೊಳ್ಳಬಾರದಲ್ಲ, ಅದಕ್ಕಾಗಿ ನಿರ್ದಿಷ್ಟ ಸಮಯದಲ್ಲಿ ವಾಚ್ ಬಳಕೆಯನ್ನು ನಿರ್ಬಂಧಿಸಲು 'ಸ್ಕೂಲ್ ಮೋಡ್' ಸವಲತ್ತು ನೆರವಾಗುತ್ತದೆ.


ಆಂಡ್ರಾಯ್ಡ್ ಆಧರಿತ 'ಕಿಡೋ ಓಎಸ್' ಕಾರ್ಯಾಚರಣ ವ್ಯವಸ್ಥೆ ಬಳಸುವ ಈ ಕೈಗಡಿಯಾರದಲ್ಲಿ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ ವೇರ್ ೨೧೦೦ ಪ್ರಾಸೆಸರ್ ಹಾಗೂ ೫೧೨ ಎಂಬಿ ರ್‍ಯಾಮ್ ಇದೆ. ಇದರಲ್ಲಿರುವ ೧.೪ ಇಂಚಿನ ರೆಟಿನಾ ಡಿಸ್ಪ್ಲೇ‌ಗೆ (೩೨೦*೩೨೦ ರೆಸಲ್ಯೂಶನ್) ಗೊರಿಲ್ಲಾ ಗ್ಲಾಸ್ ರಕ್ಷಣೆ ಉಂಟು. ೮೦೦ ಎಂಎ‌ಎಚ್ ಸಾಮರ್ಥ್ಯದ ಬ್ಯಾಟರಿ ಹಾಗೂ ೨ ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಈ ವಾಚು ನೀರು ನಿರೋಧಕವೂ ಹೌದು.

ಇಷ್ಟೆಲ್ಲ ವೈಶಿಷ್ಟ್ಯಗಳಿರುವ, ಫ್ಲಿಪ್‌ಕಾರ್ಟ್ ಮೂಲಕ ಎರಡು ಬಣ್ಣಗಳಲ್ಲಿ (ನೀಲಿ, ಪಿಂಕ್) ಲಭ್ಯವಿರುವ, ಈ ವಾಚಿನ ಬೆಲೆ ರೂ. ೯,೯೯೯.

ಹೆಚ್ಚಿನ ವಿವರಗಳಿಗೆ: www.theojoy.com/ojoy-a1-smart-watch-for-kids

You Might Also Like

0 Responses

Popular Posts

Like us on Facebook