ಮಕ್ಕಳಿಗೊಂದು ಕತೆಹೇಳಿ!

10:04 PM

ಬರವಣಿಗೆ ಕಷ್ಟ ಎಂದು ಅನೇಕರು ಹೇಳುತ್ತಾರೆ. ಮಕ್ಕಳಿಗಾಗಿ ಬರೆಯುವುದು ಇನ್ನೂ ಕಷ್ಟ. ಆದರೆ ಅವರಿಗಾಗಿ ಬರೆದಾಗ ಸಿಗುವ ಖುಷಿಯಿದೆಯಲ್ಲ, ಅದಕ್ಕೆ ಬೆಲೆಕಟ್ಟುವುದೂ ಕಷ್ಟ. ಅಂತಹ ಖುಷಿಯನ್ನು ನನಗೆ ಕೊಟ್ಟಿರುವುದು ಪ್ರಥಮ್ ಬುಕ್ಸ್ ಎಂಬ ಬೆಂಗಳೂರು ಮೂಲದ ಸ್ವಯಂಸೇವಾ ಸಂಸ್ಥೆ.

ಹಲವು ಭಾರತೀಯ ಭಾಷೆಗಳಲ್ಲಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿ ಅದನ್ನು ಮಕ್ಕಳಿಗೆ ತಲುಪಿಸುವುದು ಈ ಸಂಸ್ಥೆಯ ಕೆಲಸ. ಮುದ್ರಿತ ಪುಸ್ತಕಗಳ ಜೊತೆಗೆ ಡಿಜಿಟಲ್ ಪುಸ್ತಕಗಳ ಪ್ರಕಟಣೆಯಲ್ಲೂ ಪ್ರಥಮ್ ಬುಕ್ಸ್ ಸಕ್ರಿಯವಾಗಿದೆ. ಈ ಸಂಸ್ಥೆ ರೂಪಿಸಿರುವ 'ಸ್ಟೋರಿವೀವರ್' ಎಂಬ ಮುಕ್ತ ವೇದಿಕೆಯಲ್ಲಿರುವ ಕತೆಗಳನ್ನು ನಾವು ಬೇಕಾದಷ್ಟು ಓದಬಹುದು, ಅನುವಾದಿಸಬಹುದು, ಹೊಸ ಕತೆಗಳನ್ನು ಸೇರಿಸಲೂಬಹುದು. [ಸ್ಟೋರಿವೀವರ್ ಬಗ್ಗೆ ಹೆಚ್ಚಿನ ವಿವರಗಳಿಗೆ ಈ ಲೇಖನ ಓದಿ!]

ನನ್ನ ಕೆಲ ಅನುವಾದಗಳನ್ನು ಸ್ಟೋರಿವೀವರ್‌ನಲ್ಲಿ ಪ್ರಕಟಿಸುವ ಅವಕಾಶ ಕೊಟ್ಟಿದ್ದ ಪ್ರಥಮ್ ಬುಕ್ಸ್, ಇದೀಗ ಅವುಗಳಲ್ಲಿ ಕೆಲವನ್ನು ಮುದ್ರಿತ ರೂಪದಲ್ಲೂ ಹೊರತಂದಿದೆ. ಡಿಜಿಟಲ್ ಜಗತ್ತಿನ ಮೂಲಭೂತ ಪರಿಕಲ್ಪನೆಯಾದ ಬೈನರಿ ವ್ಯವಸ್ಥೆಯನ್ನು ಮಕ್ಕಳಿಗೆ ಪರಿಚಯಿಸುವ 'ಒಂದು-ಸೊನ್ನೆಯ ಕತೆ'ಯ ಪ್ರತಿಗಳು ಈಗಷ್ಟೇ ನನ್ನ ಕೈಸೇರಿವೆ.


ಈ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳುವುದಷ್ಟೇ ಈ ಬರಹದ ಉದ್ದೇಶವಲ್ಲ. ಇನ್ನೂ ಒಂದು ಇಂಟರೆಸ್ಟಿಂಗ್ ವಿಷಯ ಇದೆ.

ಆ ವಿಷಯ ಏನೆಂದರೆ ಹೊಸ ಕತೆಗಳನ್ನು ಬರೆಯುವ ಆಸಕ್ತಿಯುಳ್ಳವರಿಗೆ ಸ್ಟೋರಿವೀವರಿನಲ್ಲಿ ಈಗ ಒಂದು ಸ್ಪರ್ಧೆ ನಡೆಯುತ್ತಿದೆ. 'Retell, Remix & Rejoice' ಎಂಬ ಹೆಸರಿನ ಈ ಸ್ಪರ್ಧೆಗೆ ನೀವು ಬರೆದ ಕತೆಗಳನ್ನು ಕಳಿಸುವ ಮೂಲಕ ನೀವು ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು, ನಿಮ್ಮ ಕತೆಯನ್ನು ಪ್ರಕಟಿಸುವ ಅವಕಾಶವನ್ನೂ ಪಡೆಯಬಹುದು!

ಪ್ರಥಮ್ ಬುಕ್ಸ್ ಹೇಳುವಂತೆ ಈ ಅಭಿಯಾನದ ಮುಖ್ಯ ಉದ್ದೇಶ ಕನ್ನಡ, ಹಿಂದಿ, ಬಂಗಾಳಿ, ಮರಾಠಿ, ತಮಿಳು, ಉರ್ದು ಮುಂತಾದ ಭಾಷೆಗಳಲ್ಲಿ ಹೊಚ್ಚ ಹೊಸ ಕತೆಗಳನ್ನು ಬರೆಸುವುದು ಮತ್ತು ಈ ಭಾಷೆಗಳ ಕತೆಗಳಿಗೆ ಓದುಗರನ್ನು ಹೆಚ್ಚಿಸುವುದು. ಈ ಮೂಲಕ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಉದಯೋನ್ಮುಖ ಬರಹಗಾರರನ್ನು ಗುರುತಿಸಿ, ಅವರಿಗೆ ವೇದಿಕೆ ಒದಗಿಸುವುದು ಇದರ ಉದ್ದೇಶ. ಸರಳ, ಓದಲು ಸುಲಭವಾದ ಕತೆಗಳನ್ನು ಬರೆದು, ಸ್ಟೋರಿವೀವರ್ ವೇದಿಕೆಯಲ್ಲಿ ಪ್ರಕಟಿಸುವುದನ್ನು ಈ ಅಭಿಯಾನ ಸಾಧ್ಯವಾಗಿಸುತ್ತದೆ.

ಕತೆಗಳನ್ನು ಬರೆಯುವ ಮುನ್ನ ಸ್ಟೋರಿವೀವರಿನಲ್ಲಿ ಈಗಾಗಲೇ ಇರುವ ಕೆಲ ಕತೆಗಳನ್ನು ಓದಿದರೆ ಒಳ್ಳೆಯದು. ಅಲ್ಲಿರುವ ಲೆವೆಲ್ ೧ ಹಾಗೂ ಲೆವೆಲ್ ೨ ಕತೆಗಳ ಮಟ್ಟದಲ್ಲೇ ನಿಮ್ಮ ಕತೆಗಳೂ ಇರಬೇಕಾದ್ದು ಅಪೇಕ್ಷಣೀಯ. ಸ್ಟೋರಿವೀವರ್‌ನಲ್ಲಿ ಈಗಾಗಲೇ ಇರುವ ಚಿತ್ರಗಳ ಅಗಾಧ ಸಂಗ್ರಹದಿಂದ ನಮ್ಮ ಇಷ್ಟದ ಚಿತ್ರಗಳನ್ನು ಆಯ್ದು ನಮ್ಮ ಕತೆಯ ಜೊತೆ ಬಳಸಿಕೊಳ್ಳಬಹುದು.


ಈ ಕೆಳಗಿನ ವಿಷಯಗಳ ಕುರಿತು ನೀವು ಕತೆಗಳನ್ನು ಬರೆಯಬಹುದು:
  • ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರನ್ನು ಕುರಿತಾದ ಕತೆಗಳು: ತಂದೆ-ತಾಯಿ, ಸೋದರರು, ಚಿಕ್ಕಪ್ಪ- ಚಿಕ್ಕಮ್ಮಂದಿರು, ಅಜ್ಜ-ಅಜ್ಜಿಯರು... ಕುಟುಂಬ, ಪರಿವಾರದ ಪರಿಕಲ್ಪನೆ, ಗೆಳೆಯರು ಮತ್ತು ಸಮುದಾಯ ಕುರಿತಾದ ಯಾವುದೇ ವಸ್ತು ಕತೆಯಾಗಬಹುದು. 
  • ಮುದ ನೀಡುವ ಕತೆಗಳು: ಹಾಸ್ಯದ ಮೂಲಕ ವಿಷಯ ತಿಳಿಸುವ ಯಾವುದಾದರೂ ಕತೆ. 
  • ಆಟಗಳನ್ನು ಕುರಿತ ಕತೆ: ಫುಟ್ ಬಾಲ್, ಕ್ರಿಕೆಟ್, ಗಿಲ್ಲಿ-ದಾಂಡು, ಕೂಡಿ ಆಡುವ ಯಾವುದೇ ಆಟ, ಸಮುದಾಯ ಕುರಿತ ಕತೆಗಳು. ಕ್ರೀಡಾ ಸಾಧಕರ ಸ್ಫೂರ್ತಿದಾಯಕ ಕತೆಗಳು.
  • ಶಾಲಾ ಕತೆಗಳು: ಶಾಲಾ ದಿನಗಳು, ಗೆಳೆತನ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಶಾಲಾದಿನಗಳ ಮಧುರ ಮೆಲುಕುಗಳು, ಅಷ್ಟೇ ಏಕೆ ಊಟದ ಸಮಯ ಇತ್ಯಾದಿ. ವಿಷಯಗಳಿರುವ ಕತೆಗಳು.   
ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ಸ್ಪರ್ಧೆಯಲ್ಲಿ ಭಾಗವಹಿಸಲು ಕ್ಲಿಕ್ ಮಾಡಿ: https://storyweaver.org.in/v0/blog_posts/380

ತ್ವರೆಮಾಡಿ, ಈ ಅಭಿಯಾನ ಏಪ್ರಿಲ್ ೨೦, ೨೦೧೯ರಂದು ಕೊನೆಗೊಳ್ಳುತ್ತಿದೆ!

You Might Also Like

0 Responses

Popular Posts

Like us on Facebook