ಟೆಕ್ನೋ ಫ್ಯಾಂಟಮ್ 9: ಕೈಗೆಟುಕುವ ಬೆಲೆಯಲ್ಲಿ ಹೈಟೆಕ್ ಸೌಲಭ್ಯ
11:00 AMಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಟ್ರಿಪಲ್ ಕ್ಯಾಮೆರಾ ರೂ. 14,999ಕ್ಕೆ ಲಭ್ಯ!
ನೌಕಾಪಡೆಯ ಹಡಗುಗಳ ಪೈಕಿ ಸೇನಾಪತಿಯನ್ನು ಕರೆದೊಯ್ಯುವ, ಮತ್ತು ಆ ಕಾರಣಕ್ಕೆ ವಿಶೇಷ ಬಾವುಟವನ್ನು ಹಾರಿಸುವ ಹಡಗನ್ನು 'ಫ್ಲ್ಯಾಗ್‌ಶಿಪ್' ಎಂದು ಕರೆಯುತ್ತಾರಂತೆ. ಮೊಬೈಲ್ ಫೋನ್ ಲೋಕದಲ್ಲೂ ಅಷ್ಟೇ, ಯಾವುದೇ ಸಂಸ್ಥೆ ತಯಾರಿಸುವ ಅತ್ಯುತ್ತಮ ಸಾಧನಕ್ಕೆ ಫ್ಲ್ಯಾಗ್‌ಶಿಪ್ ಎಂದೇ ಹೆಸರು. ಸಾಮಾನ್ಯ ಫೋನುಗಳ ಹೋಲಿಕೆಯಲ್ಲಿ ಮುಂದುವರೆದ ಸೌಲಭ್ಯಗಳು, ಹೆಚ್ಚು ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯಿರುವ ಫ್ಲ್ಯಾಗ್‌ಶಿಪ್ ಫೋನುಗಳ ಬೆಲೆಯೂ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಈ ಹಣೆಪಟ್ಟಿ ಹೊತ್ತುಬರುವ ಫೋನುಗಳ ಬೆಲೆ ಆರಂಕಿ ಮುಟ್ಟುವುದೂ ಅಪರೂಪವೇನಲ್ಲ.
ಕೈಗೆಟುಕುವ ಬೆಲೆಯ ಫೋನುಗಳಲ್ಲೂ ಹೆಚ್ಚಿನ ಸೌಲಭ್ಯಗಳನ್ನು ಕೊಟ್ಟು ಫ್ಲ್ಯಾಗ್‌ಶಿಪ್‌ಗಳೊಡನೆ ಸೀಮಿತ ಮಟ್ಟದಲ್ಲಾದರೂ ಸ್ಪರ್ಧೆಗಿಳಿಯುವ ಪ್ರಯತ್ನಗಳನ್ನು ಹಲವು ಸಂಸ್ಥೆಗಳು ಮಾಡುತ್ತಾ ಬಂದಿವೆ. ಇಂತಹ ಪ್ರಯತ್ನಗಳ ಫಲವಾಗಿ ಹಲವು ಹೊಸ ಮಾದರಿಗಳೂ ಮಾರುಕಟ್ಟೆಗೆ ಬಂದಿವೆ, ಬರುತ್ತಿವೆ.
ಇಂತಹ ಮಾದರಿಗಳಿಗೆ ಲೇಟೆಸ್ಟ್ ಉದಾಹರಣೆಯೇ ಟೆಕ್ನೋ ಸಂಸ್ಥೆಯ 'ಫ್ಯಾಂಟಮ್ 9'. ಟ್ರಿಪಲ್ ಕ್ಯಾಮೆರಾ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಹಲವು ವೈಶಿಷ್ಟ್ಯಗಳಿರುವ ಈ ಹೊಸ ಫೋನು ನಾಳೆಯಿಂದ (ಜುಲೈ 17, 2019) ಫ್ಲಿಪ್‌ಕಾರ್ಟ್‌ನಲ್ಲಿ ರೂ. 14,999 ಬೆಲೆಯಲ್ಲಿ ದೊರಕಲಿದೆ.
ಬೆರಳೊತ್ತನ್ನು ಗುರುತಿಸುವ ಮೂಲಕ ಸುರಕ್ಷತೆ ನೀಡುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಬಹಳಷ್ಟು ಫೋನುಗಳಲ್ಲಿ ನಾವು ನೋಡಬಹುದು. ಅದು ಪರದೆಯ ಕೆಳಬದಿ ಅಥವಾ ಫೋನಿನ ಹಿಂಭಾಗದಲ್ಲಿರುವುದು ಸಾಮಾನ್ಯ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೀಗೆ ಪ್ರತ್ಯೇಕವಾಗಿ ಇರಿಸುವ ಬದಲು ಪರದೆಯ ಭಾಗವಾಗಿಯೇ ನೀಡುವುದು ಇನ್-ಡಿಸ್ಪ್ಲೇ ತಂತ್ರಜ್ಞಾನದ ಹೆಚ್ಚುಗಾರಿಕೆ. ಟೆಕ್ನೋ ತನ್ನ ಫ್ಯಾಂಟಮ್ ೯ನಲ್ಲಿ ಈ ಸೌಲಭ್ಯ ಒದಗಿಸುವ ಮೂಲಕ ಹದಿನೈದು ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನುಗಳಲ್ಲಿ ಇದನ್ನು ಮೊತ್ತಮೊದಲ ಬಾರಿ ಪರಿಚಯಿಸಿದ ಸಾಧನೆ ಮಾಡಿದೆ. ಪರದೆಯ ಮೇಲೆ ನಿರ್ಧಾರಿತ ಭಾಗವನ್ನು ಮುಟ್ಟುವ ಮೂಲಕ ನಮ್ಮ ಬೆರಳೊತ್ತನ್ನು ದೃಢೀಕರಿಸುವುದನ್ನು ಈ ತಂತ್ರಜ್ಞಾನ ಸಾಧ್ಯವಾಗಿಸುತ್ತದೆ.
ತ್ರಿವಳಿ (ಟ್ರಿಪಲ್) ಪ್ರಾಥಮಿಕ ಕ್ಯಾಮೆರಾಗಳು ಈ ಫೋನಿನಲ್ಲಿರುವ ಇನ್ನೊಂದು ಹೆಚ್ಚುಗಾರಿಕೆ. 16 ಎಂಪಿ (ಮುಖ್ಯ ಕ್ಯಾಮೆರಾ), 8 ಎಂಪಿ (ವೈಡ್-ಆಂಗಲ್) ಹಾಗೂ 2 ಎಂಪಿಯ (ಡೆಪ್ತ್-ಸೆನ್ಸಿಂಗ್) ಈ ಕ್ಯಾಮೆರಾಗಳನ್ನು ಬಳಸಿ ಅತ್ಯುತ್ತಮ ಭಾವಚಿತ್ರಗಳನ್ನು, ವೈಡ್ ಆಂಗಲ್ ಹಾಗೂ ಮ್ಯಾಕ್ರೋ ಚಿತ್ರಗಳನ್ನೂ ಸೆರೆಹಿಡಿಯಬಹುದು. ಕ್ಯಾಮೆರಾ ಮುಂದಿನ ದೃಶ್ಯದ ಬಗ್ಗೆ ಮಾಹಿತಿ ನೀಡಬಲ್ಲ ಗೂಗಲ್ ಲೆನ್ಸ್ ಸೌಲಭ್ಯವನ್ನು ಮುಂಚಿತವಾಗಿಯೇ ಸೇರಿಸಿರುವುದು ಇನ್ನೊಂದು ಗಮನಾರ್ಹ ಅಂಶ. ಇನ್ನು ಈ ಮೊಬೈಲಿನಲ್ಲಿರುವ ಸೆಲ್ಫಿ ಕ್ಯಾಮೆರಾ 32 ಮೆಗಾಪಿಕ್ಸೆಲ್‌ನದು. ಪ್ರಾಥಮಿಕ ಹಾಗೂ ಸೆಲ್ಫಿ ಕ್ಯಾಮೆರಾಗಳೆರಡಕ್ಕೂ ಫ್ಲ್ಯಾಶ್ ಬೆಂಬಲವಿದ್ದು, ಸೆಲ್ಫಿ ಕ್ಯಾಮೆರಾಗಾಗಿ ನೀಡಲಾಗಿರುವ ಜೋಡಿ (ಡ್ಯುಯಲ್) ಫ್ಲ್ಯಾಶ್‌ಲೈಟ್ ಸೌಲಭ್ಯ ತನ್ನ ಆಕರ್ಷಕ ವಿನ್ಯಾಸದಿಂದಾಗಿ ಗಮನಸೆಳೆಯುತ್ತದೆ.
ಟೆಕ್ನೋ ಸಂಸ್ಥೆಯ ಸ್ವಂತ ಹೈಓಎಸ್ 5.0 (ಆಂಡ್ರಾಯ್ಡ್ 9.0 ಆಧರಿತ) ಕಾರ್ಯಾಚರಣ ವ್ಯವಸ್ಥೆ ಬಳಸುವ ಈ ಫೋನಿನಲ್ಲಿ 6 ಜಿಬಿ ರ್‍ಯಾಮ್ ಹಾಗೂ 128 ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯ ಇದೆ. ಎರಡು ಸಿಮ್ ಜೊತೆಯಲ್ಲಿ ಹೆಚ್ಚುವರಿ ಮೆಮೊರಿ ಕಾರ್ಡನ್ನೂ ಬಳಸಿ 256 ಜಿಬಿವರೆಗಿನ ಮಾಹಿತಿ ಸಂಗ್ರಹಿಸಿಕೊಳ್ಳುವುದು ಸಾಧ್ಯ. ಈ ಫೋನಿನಲ್ಲಿ ಬಳಕೆಯಾಗಿರುವ ಹೀಲಿಯೋ P35 2.3 ಗಿಗಾಹರ್ಟ್ಸ್ ಆಕ್ಟಾಕೋರ್ ಪ್ರಾಸೆಸರ್ ಅತ್ಯುತ್ತಮ ಎನ್ನಿಸಿಕೊಳ್ಳುವ ಮಟ್ಟದಲ್ಲಿಲ್ಲದಿದ್ದರೂ ಕೊಟ್ಟ ಬೆಲೆಗೆ ತೃಪ್ತಿಕರವಾಗಿ ಕೆಲಸ ಮಾಡುತ್ತದೆ ಎನ್ನಬಹುದು.
ಇನ್ನು ಈ ಫೋನಿನಲ್ಲಿ 6.4 ಇಂಚಿನ FHD+ AMOLED ಪರದೆ ಇದೆ. ತೆಳ್ಳನೆಯ ಗೆರೆಗಳಿರುವ ಹಿಂಬದಿ ಕವಚದ ವಿನ್ಯಾಸ ಆಕರ್ಷಕವಾಗಿದ್ದು ಮೂರು ಆಯಾಮದ ಅನುಭವ ನೀಡುತ್ತದೆ. ಸಾಕಷ್ಟು ತೆಳ್ಳಗಿರುವ (7.75 ಎಂಎಂ) ಈ ಫೋನಿನ ತೂಕವೂ ಬಹಳ ಕಡಿಮೆ (164 ಗ್ರಾಂ). ಬಾಕ್ಸಿನಲ್ಲಿ ಮೊಬೈಲ್ ಹಾಗೂ ಚಾರ್ಜರ್ ಜೊತೆ ಇಯರ್ ಫೋನ್ ಹಾಗೂ ರಕ್ಷಾಕವಚ ಕೂಡ ಇದೆ. ಸ್ಕ್ರೀನ್ ಗಾರ್ಡ್ ಅನ್ನು ಮುಂಚಿತವಾಗಿಯೇ ಅಂಟಿಸಲಾಗಿದೆ.
ಬೇರೆಲ್ಲ ಟೆಕ್ನೋ ಫೋನುಗಳಂತೆ ಫ್ಯಾಂಟಮ್ 9 ಕೂಡ "111" ಭರವಸೆಯೊಡನೆ ಬರುತ್ತದೆ. ಈ ಭರವಸೆಯಡಿ ಗ್ರಾಹಕರಿಗೆ ಒಂದು ಬಾರಿ ಸ್ಕ್ರೀನ್ ರೀಪ್ಲೇಸ್‌ಮೆಂಟ್ (6 ತಿಂಗಳವರೆಗೆ ಅನ್ವಯ), 100 ದಿನಗಳ ಉಚಿತ ರೀಪ್ಲೇಸ್‌ಮೆಂಟ್ ಹಾಗೂ ಒಂದು ತಿಂಗಳ ಹೆಚ್ಚುವರಿ ವಾರಂಟಿ (ಒಟ್ಟು 13 ತಿಂಗಳು) ದೊರಕುತ್ತದೆ.
ಇಷ್ಟೆಲ್ಲ ಸೌಲಭ್ಯಗಳೊಡನೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಈ ಫೋನಿನ ಬೆಲೆ - ರೂ. 14999 ಸಮರ್ಪಕವೆಂದೇ ಹೇಳಬಹುದು. ಇದಕ್ಕೆ ಗ್ರಾಹಕರ ಪ್ರತಿಕ್ರಿಯೆ ಹೇಗಿರಬಹುದು ಎನ್ನುವುದನ್ನು ಇನ್ನಷ್ಟೇ ನೋಡಬೇಕಿದೆ.
ಟೆಕ್ನೋ ಸಂಸ್ಥೆಯ ಆಹ್ವಾನದ ಮೇರೆಗೆ ಲೇಖಕರು ದೆಹಲಿಗೆ ತೆರಳಿ ಫ್ಯಾಂಟಮ್ 9 ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 Responses