ಹೊಸವರ್ಷದ ಶುಭಾಶಯಗಳು

9:47 PM

 ವಿಜ್ಞಾನ ಸಂವಹನ ಚಟುವಟಿಕೆಗಳ ದೃಷ್ಟಿಯಿಂದ ೨೦೨೩ ಬಹಳವೇ ಖುಷಿಕೊಟ್ಟ ವರ್ಷ. ನನ್ನಂತಹ ಅನೇಕರಿಗೆ ಮಾರ್ಗದರ್ಶಕರಾಗಿದ್ದ ಅಡ್ಯನಡ್ಕ ಕೃಷ್ಣಭಟ್ ಅವರ ಪ್ರಾತಿನಿಧಿಕ ಬರಹಗಳ ಸಂಕಲನ ಲೋಕಾರ್ಪಣೆಯಾಗಿದ್ದು ಹಾಗೂ ಶ್ರೀಮಂಗಲದ ನೆನಪುಗಳ 'ನೂರೊಂದು ನೆನಪು ನ್ಯೂರಾನಿನಿಂದ' ಪ್ರಕಟವಾಗಿದ್ದು ನನ್ನ ದೃಷ್ಟಿಯಿಂದ ಈ ವರ್ಷದ ಪ್ರಮುಖಾಂಶಗಳು. ಜನವರಿಯಲ್ಲಿ ಭೋಪಾಲದಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಹಬ್ಬದಲ್ಲಿ ಹಲವು ಕನ್ನಡದ ಕೆಲಸಗಳಿಗೆ ಸಾಕ್ಷಿಯಾಗಿದ್ದು, ನಾನೂ ವಿಷಯಮಂಡನೆ ಮಾಡಿದ್ದು ಸುಮಧುರ ನೆನಪು. ಕೊಳ್ಳೇಗಾಲ ಶರ್ಮ ಅವರ 'ತಳಿ-ಉಳಿ' ಕೃತಿಯ ಸಂಪಾದಕನೆನ್ನಿಸಿಕೊಂಡಿದ್ದು, ಡಾ. ಎ. ಸತ್ಯನಾರಾಯಣರೊಡನೆ ಸೇರಿ ಸಿದ್ಧಪಡಿಸಿದ 'ಡಿಜಿಟಲ್ ಕನ್ನಡ ಕೌಶಲ' ಪಠ್ಯಪುಸ್ತಕ ಬೆಂಗಳೂರು ವಿವಿಯಿಂದ ಪ್ರಕಟವಾಗಿದ್ದು ಬೋನಸ್.

ವಿಜಯ ಕರ್ನಾಟಕದ 'ಟೆಕ್ ನೋಟ' ಅಂಕಣ ಮುಂದುವರಿದದ್ದು ಮಾತ್ರವಲ್ಲದೆ ಹೊಸಬಗೆಯ ಬರಹಗಳನ್ನು ಪ್ರಯತ್ನಿಸುವುದಕ್ಕೆ ಅವಕಾಶವನ್ನೂ ಕೊಟ್ಟಿತು. ಬೆಂಗಳೂರು, ಮೈಸೂರು, ಕೈಗಾ, ಹಂಪೆ, ಹಗರಿಬೊಮ್ಮನಹಳ್ಳಿ ಸೇರಿದಂತೆ ರಾಜ್ಯದ ಹಲವೆಡೆ ವಿಜ್ಞಾನ ಸಂವಹನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಕೂಡ ಈ ವರ್ಷ ಸಾಧ್ಯವಾಯಿತು. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ನನ್ನ ಪುಸ್ತಕ ಓದಿಕೊಂಡು ಸಿದ್ಧರಾಗಿ ಬಂದಿದ್ದ ಮಕ್ಕಳೊಡನೆ ಮೈಸೂರಿನ ಎಸ್‌ವಿವೈಎಂ‌ನಲ್ಲಿ ಮಾತನಾಡಿದ್ದು ವಿಶೇಷ. ಈ ಹಿಂದೆ ಪ್ರಕಟವಾಗಿದ್ದ 'ಪುಟ್ಟ ಪುಟ್ಟಿಯ ಪರಿಸರ ಪಾಠಗಳು' ಕೃತಿಗಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಪುರಸ್ಕಾರ ಕೈಸೇರಿದ್ದೂ ಇದೇ ವರ್ಷ. ಕನ್ನಡದ ಹಲವು ವಿಜ್ಞಾನ ಸಂವಹನ ಕಾರ್ಯಕ್ರಮಗಳಿಗೆ ಬೆಂಬಲವಾಗಿದ್ದ ವಿಜ್ಞಾನ್ ಪ್ರಸಾರ್ ಸಂಸ್ಥೆ ಈ ವರ್ಷ ಮುಚ್ಚಿಹೋದದ್ದು ಬೇಸರದ ಸಂಗತಿಯಾದರೂ, ಆ ಸಂಸ್ಥೆಯ ಆಶ್ರಯದಲ್ಲಿ ಪ್ರಾರಂಭವಾಗಿದ್ದ 'ಕುತೂಹಲಿ' ಕನ್ನಡ ಜಾಲಪತ್ರಿಕೆಯ ಪ್ರಕಟಣೆ ಸ್ವತಂತ್ರವಾಗಿ ಮುಂದುವರಿದಿರುವುದು ಸಮಾಧಾನದ ಸಂಗತಿ.

ಜನವರಿ ಮೂರನೇ ವಾರ ಫರೀದಾಬಾದಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ೨೦೨೪ರ ಚಟುವಟಿಕೆಗಳು ಪ್ರಾರಂಭವಾಗಲಿವೆ. ಮುಂಬರುವ ವರ್ಷದಲ್ಲಿ ಇನ್ನೂ ಹೆಚ್ಚಿನದು ಸಾಧ್ಯವಾಗಲಿ, ಅದಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎನ್ನುವುದು ನನ್ನ ಆಶಯ. ನಿಮ್ಮೆಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.

You Might Also Like

0 Responses

Popular Posts

Like us on Facebook