ಹಂಪೆಯಲ್ಲಿ ಜಾಂಬವಂತನ ದರ್ಶನ!

11:58 AM

ಹಂಪೆಯ ಸಮೀಪದಲ್ಲಿರುವ ದರೋಜಿ ಕರಡಿಧಾಮ ಅತ್ಯಂತ ವಿಶಿಷ್ಟವಾದದ್ದು. ಶ್ರೀ ಎಂ. ವೈ. ಘೋರ್ಪಡೆಯವರ ಪ್ರಯತ್ನಗಳಿಂದ ಸಂರಕ್ಷಿತ ಪ್ರದೇಶವಾಗಿ ಗುರುತಿಸಿಕೊಂಡ ಈ ಕುರುಚಲು ಕಾಡು, Sloth Bearಗಳ ತವರು (Sloth ಅಂದರೆ ಸೋಮಾರಿ ಅಂತ ಅರ್ಥ!). ಈ ಹಿಂದೆ ಒಂದೆರಡು ಬಾರಿ ಅಲ್ಲಿ ಹೋಗಿದ್ದಾಗ ವೀಕ್ಷಣಾ ಗೋಪುರದ ಮೇಲೆ ನಿಂತು ದೂರದಲ್ಲಿ ಕಾಣುವ ಕರಡಿಗಳನ್ನು ನೋಡುವ ಅವಕಾಶ ದೊರೆತಿತ್ತು. ಕಳೆದ ವರ್ಷ ಅಲ್ಲಿ ಸಫಾರಿ ಪ್ರಾರಂಭವಾಗಿದೆ ಎನ್ನುವ ವಿಷಯ ತಿಳಿದಲ್ಲಿಂದ ದರೋಜಿಗೆ ಮತ್ತೊಮ್ಮೆ ಭೇಟಿಕೊಡುವ ಯೋಜನೆ ರೂಪಿಸುತ್ತಿದ್ದೆ.

ಈ ಯೋಜನೆಗೆ ಮಾರ್ಗದರ್ಶಕರಾಗಿ ಸಿಕ್ಕವರು ಹಂಪೆಯ ವಿನೋದ್ ಕುಮಾರ್. ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುವ ಅವರು ದರೋಜಿ ಕರಡಿಧಾಮದ ಬಗ್ಗೆ, ಅಲ್ಲಿನ ಸಫಾರಿ ಹಾಗೂ ವನ್ಯಜೀವನದ ಬಗ್ಗೆ ಆಗಿಂದಾಗ್ಗೆ ಬರಹಗಳನ್ನು - ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಬಾರಿ ಹಂಪೆಗೆ ಪ್ರವಾಸ ಹೊರಡುವುದೆಂದು ತೀರ್ಮಾನವಾಗುತ್ತಿದ್ದಂತೆಯೇ ಅವರನ್ನು ಸಂಪರ್ಕಿಸಿದೆ. ದರೋಜಿಯ ಬಗ್ಗೆ, ಅಲ್ಲಿನ ವನ್ಯಜೀವನದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡ ಅವರು ಸಫಾರಿಯಲ್ಲಿ ನಮ್ಮ ಮಾರ್ಗದರ್ಶಕರಾಗಲು ಒಪ್ಪಿಕೊಂಡರು. ಅಷ್ಟೇ ಅಲ್ಲ, ಯಾವ ಹೊತ್ತಿನಲ್ಲಿ ಸಫಾರಿ ಹೊರಟರೆ ಒಳ್ಳೆಯದು ಎನ್ನುವುದನ್ನೂ ಸೂಚಿಸಿದರು.

ಕಳೆದ ಭಾನುವಾರ (ಜುಲೈ ೨೪) ಮಧ್ಯಾಹ್ನ ಬನ್ನಿ ಎಂದು ಹೇಳಿದ್ದವರು, ಮತ್ತೆ ಕರೆಮಾಡಿ ಸಂಜೆಯೇ ಹೋಗೋಣ ಎಂದು ಸೂಚಿಸಿದರು. ಅದರಂತೆಯೇ ಹಂಪೆ ಜ಼ೂ ಪಕ್ಕದಲ್ಲಿರುವ ದರೋಜಿ ನಿಸರ್ಗಧಾಮದ ಕಚೇರಿಯಿಂದ ನಮ್ಮನ್ನು ಅರಣ್ಯ ಇಲಾಖೆಯ ವಾಹನದಲ್ಲಿ ಕರೆದುಕೊಂಡು ಹೊರಟರು. ಮುಂದಿನ ಒಂದೆರಡು ಗಂಟೆಗಳ ಕಾಲ ನಿಜಕ್ಕೂ ನೆನಪಿನಲ್ಲಿ ಉಳಿಯುವ ಅನುಭವ! ಮಾರ್ಗದರ್ಶಕರಾಗಿ ತರಬೇತಿ ಪಡೆದಿರುವ ವಿನೋದ್ ಹಾಗೂ ಅವರ ಜೊತೆಯಲ್ಲಿದ್ದ ರವಿ ಕುರುಚಲು ಕಾಡಿನ ವಿಶ್ವರೂಪವನ್ನು ನಮಗೆ ಪರಿಚಯಿಸಿದರು, ಅನೇಕ ಪಕ್ಷಿಗಳನ್ನು ತೋರಿಸಿದರು.

ಅರಣ್ಯ ಇಲಾಖೆಯವರು ಇಡುವ ಬೆಲ್ಲ ತಿನ್ನಲು ಬಂದಿದ್ದ ನಾಲ್ಕು ಕರಡಿಗಳನ್ನು ನಾವು ಆ ಸಂಜೆ ನೋಡಿದೆವು. ಅವುಗಳ ಚಟುವಟಿಕೆಯನ್ನು - ಆಟದಿಂದ ಜಗಳದವರೆಗೆ - ಕೆಲವೇ ಅಡಿಗಳ ದೂರದಿಂದ (ಕಬ್ಬಿಣದ ಕೋಣೆಯ ಸುರಕ್ಷತೆಯಲ್ಲಿ ಕುಳಿತು) ಕಣ್ತುಂಬಿಕೊಂಡೆವು. ಕಾಡುಪ್ರಾಣಿಗಳಿಗೆ ಆಹಾರ ನೀಡಬೇಡಿ ಎಂದು ಎಲ್ಲ ಕಡೆಯೂ ಹೇಳುವ ಅರಣ್ಯ ಇಲಾಖೆಯೇ ಇಲ್ಲಿ ಕರಡಿಗಳಿಗೆ ಬೆಲ್ಲ ಇತ್ಯಾದಿಗಳನ್ನು ತಿನ್ನಲು ಕೊಡುವುದು ಕೊಂಚ ಅಸಹಜವೆನಿಸಿದರೂ ಕರಡಿಗಳಂತಹ ಅಪರೂಪದ ಜೀವಿಗಳನ್ನು ಹತ್ತಿರದಿಂದ ಗಮನಿಸುವುದು ನಿಜಕ್ಕೂ ಅಪರೂಪದ ಅವಕಾಶ. ಈ ಅವಕಾಶ ಒದಗಿಸಿರುವ ಅರಣ್ಯ ಇಲಾಖೆ, ಅದರ ಪ್ರಯೋಜನ ಪಡೆದುಕೊಳ್ಳಲು ನೆರವಾಗುವ ವಿನೋದ್ ಹಾಗೂ ರವಿಯವರಂತಹ ಮಿತ್ರರು ಅಭಿನಂದನಾರ್ಹರು.

  • ಸಫಾರಿ ಶುಲ್ಕ ಒಂದು ಜೀಪಿಗೆ (6-7 ಜನ ಹೋಗಬಹುದು) ರೂ. 2000/-, ಕ್ಯಾಮೆರಾ ಶುಲ್ಕ ಪ್ರತ್ಯೇಕ. 
  • ವಿನೋದ್ ಅವರ ಫೇಸ್‌ಬುಕ್ ಪುಟ ಇದು 
  • ಸಫಾರಿ ಪ್ರಾರಂಭವಾಗುವ ಸ್ಥಳ: Interpretation Center - Daroji Bear Sanctuary
  • ಸಫಾರಿಗೆ ಹೋಗುವ ಮುನ್ನ ಅಥವಾ ಸಫಾರಿ ಮುಗಿಸಿದ ನಂತರ ಪಕ್ಕದಲ್ಲೇ ಇರುವ ಅಟಲ್ ಬಿಹಾರಿ ವಾಜಪೇಯಿ ಜ಼ೂಲಾಜಿಕಲ್ ಪಾರ್ಕ್‌ಗೂ (ಹಂಪೆ ಜ಼ೂ) ಭೇಟಿ ಕೊಡಬಹುದು - ಚಿಕ್ಕ ಮಕ್ಕಳಿಗೆ ಇದು ಇಷ್ಟವಾಗುತ್ತದೆ.

You Might Also Like

0 Responses

Popular Posts

Like us on Facebook