ಜಿಯೋಫೋನ್ ನೆಕ್ಸ್ಟ್: ಹೊಸ ಫೋನಿನಲ್ಲಿ ಏನೆಲ್ಲ ಇದೆ?

3:12 PM



ಫೀಚರ್ ಫೋನ್ ಬಳಕೆದಾರರನ್ನು ಸ್ಮಾರ್ಟ್‌ಫೋನಿನತ್ತ ಕರೆದೊಯ್ಯುವ ಮೂಲಕ ಭಾರತವನ್ನು '2ಜಿ-ಮುಕ್ತ'ವಾಗಿಸುವ ತನ್ನ ಯೋಜನೆಯ ಅಂಗವಾಗಿ ರಿಲಯನ್ಸ್ ಜಿಯೋ ಹೊಸದೊಂದು ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಕಡಿಮೆ ಪ್ರವೇಶ ಬೆಲೆಯಲ್ಲಿ ಎಲ್ಲರೂ ಸ್ಮಾರ್ಟ್‌ಫೋನ್ ಖರೀದಿಸಲು ಸಾಧ್ಯವಾಗಬೇಕು ಎಂಬ ಗುರಿ, 'ಜಿಯೋಫೋನ್ ನೆಕ್ಸ್ಟ್' ಎಂಬ ಹೆಸರಿನ ಈ ಹೊಸ ಫೋನಿನ ವೈಶಿಷ್ಟ್ಯ.

ರೂ. 6499/- ಮುಖಬೆಲೆಯ ಈ ಫೋನನ್ನು ಮೊದಲಿಗೆ ರೂ. 2499 (ರೂ. 1999 + ರೂ. 500 ಸಂಸ್ಕರಣಾ ಶುಲ್ಕ) ಮಾತ್ರ ಪಾವತಿಸುವ ಮೂಲಕ ನಮ್ಮದಾಗಿಸಿಕೊಳ್ಳುವುದು ಸಾಧ್ಯ. ಬಾಕಿ ಹಣವನ್ನು 18 ಅಥವಾ 24 ತಿಂಗಳ ಮಾಸಿಕ ಪಾವತಿ ಮಾಡುವ ಮೂಲಕ ಕೊಡಬಹುದು. ಈ ಪಾವತಿಯಲ್ಲಿ ಸಾಲದ ಕಂತು ಹಾಗೂ ಫೋನ್ ಬಳಕೆಯ ಶುಲ್ಕಗಳೆರಡೂ ಸೇರಿರುವುದು ವಿಶೇಷ. ತಿಂಗಳಿಗೆ ರೂ. 300ರಿಂದ ರೂ. 600ರವರೆಗೆ ಹಲವು ಆಯ್ಕೆಗಳ ಪೈಕಿ ನಮಗೆ ಬೇಕಾದ್ದನ್ನು ಆರಿಸಿಕೊಳ್ಳುವುದು ಸಾಧ್ಯ. ಒಂದೇ ಬಾರಿಗೆ ಪೂರ್ತಿ ಮೊತ್ತ ಪಾವತಿಸಿ ಖರೀದಿಸುವ ಆಯ್ಕೆಯೂ ಇದೆ. ನೋಂದಣಿ ಹಾಗೂ ಖರೀದಿ ಹೇಗೆ, ಎಲ್ಲಿ ಮುಂತಾದ ವಿವರಗಳನ್ನು ರಿಲಯನ್ಸ್ ಜಿಯೋ ಇಷ್ಟರಲ್ಲೇ ಪ್ರಕಟಿಸಲಿದೆ.




ರಿಲಯನ್ಸ್ ಜಿಯೋ ಸಂಸ್ಥೆಯು ಈ ಸ್ಮಾರ್ಟ್ ಫೋನ್ ಅನ್ನು ಗೂಗಲ್ ಹಾಗೂ ಕ್ವಾಲ್‌ಕಾಮ್ ಸಂಸ್ಥೆಗಳ ಸಹಯೋಗದೊಂದಿಗೆ ನಿರ್ಮಿಸಿದೆ. ಕೈಗೆಟುಕುವ ಬೆಲೆಯ ಫೋನುಗಳಿಗೆಂದೇ ನಿರ್ಮಿತವಾಗಿರುವ ಸ್ನಾಪ್‌ಡ್ರಾಗನ್ QM215 ಪ್ರಾಸೆಸರ್, ಹಾಗೂ ಜಿಯೋಫೋನ್‌ ನೆಕ್ಸ್ಟ್‌ಗಾಗಿಯೇ ವಿನ್ಯಾಸಗೊಳಿಸಿದ ಪ್ರಗತಿ ಓಎಸ್‌ ಎಂಬ ಆಂಡ್ರಾಯ್ಡ್‌ ಆವೃತ್ತಿಯನ್ನು ಇದು ಬಳಸುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳಿರುವುದನ್ನು ಬಿಟ್ಟರೆ ಅನಗತ್ಯ ಬ್ಲೋಟ್‌ವೇರ್‌ಗಳು ಕಾಣಿಸಲಿಲ್ಲ ಎನ್ನುವುದು ಸಮಾಧಾನಕರ ವಿಷಯ.

ಕಡಿಮೆ ಸಾಮರ್ಥ್ಯದಲ್ಲೂ ಸರಾಗ ಕಾರ್ಯಾಚರಣೆಗಾಗಿ ಇಲ್ಲಿ 'ಗೂಗಲ್ ಗೋ' ಆಪ್‌ಗಳನ್ನೇ ಪ್ರಮುಖವಾಗಿ ಬಳಸಲಾಗಿದೆ. ಕೆಲವು ಜಿಯೋ ಆಪ್‌ಗಳದೂ ಲೈಟ್ ಆವೃತ್ತಿ ಇದೆ. ಗೂಗಲ್ ಪ್ಲೇ ಸ್ಟೋರ್‌ ಇರುವುದರಿಂದ ಬೇರೆ ಆಪ್‌ಗಳನ್ನೂ ಬಳಸಬಹುದು, ಆದರೆ ಹೆಚ್ಚು ಸಂಪನ್ಮೂಲಗಳನ್ನು ಬೇಡುವ ಆಪ್‌ಗಳು ಇದರ ಕಾರ್ಯಕ್ಷಮತೆಯನ್ನು ಹೇಗೆ ಪ್ರಭಾವಿಸಬಹುದೆಂದು ನೋಡಬೇಕಿದೆ.

ಪಠ್ಯವನ್ನು ಓದಿ ಹೇಳುವ ('ರೀಡ್ ಅಲೌಡ್') ಹಾಗೂ ಅನುವಾದಿಸುವ ('ಟ್ರಾನ್ಸ್‌ಲೇಟ್ ನೌ') ಸೌಲಭ್ಯಗಳು ಓಎಸ್ ಮಟ್ಟದಲ್ಲೇ ದೊರಕುತ್ತಿರುವುದು ಈ ಫೋನಿನ ವೈಶಿಷ್ಟ್ಯ. ಈ ಸೌಲಭ್ಯವನ್ನು ಬಳಸಿಕೊಂಡು ನಾವು ಪರದೆಯ ಮೇಲಿರುವ ಯಾವುದೇ ಪಠ್ಯವನ್ನು ನಮ್ಮ ಭಾಷೆಗೆ ಅನುವಾದಿಸಿಕೊಳ್ಳಬಹುದು ಹಾಗೂ/ಅಥವಾ ಓದಿಸಿ ಕೇಳಬಹುದು. ಕನ್ನಡವೂ ಸೇರಿದಂತೆ ಎಂಟು ಭಾರತೀಯ ಭಾಷೆಗಳಲ್ಲಿ ಈ ಸೌಲಭ್ಯ ದೊರಕುತ್ತದೆ. ವೆಬ್ ಪುಟಗಳು, ಆಪ್‌ಗಳು, ಸಂದೇಶಗಳು ಮತ್ತು ಫೋಟೋಗಳೂ ಸೇರಿದಂತೆ ಫೋನ್ ಪರದೆಯಲ್ಲಿರುವ ಯಾವುದೇ ಪಠ್ಯದೊಂದಿಗೆ ಈ ಸೌಲಭ್ಯಗಳು ಕೆಲಸ ಮಾಡುತ್ತವೆಂದು ಜಿಯೋ ಹೇಳಿದೆ. ವೆಬ್‌ಪುಟಗಳನ್ನು ಓದಿಸಿ ಕೇಳುವ, ಅನುವಾದಿಸುವ ಸೌಲಭ್ಯವನ್ನು ಪರೀಕ್ಷಿಸಿದಾಗ ತಕ್ಕಮಟ್ಟಿಗೆ ಸಮರ್ಪಕವಾದ ಫಲಿತಾಂಶಗಳು ದೊರಕಿದವು. ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನುಗಳಂತೆ ಇದರಲ್ಲಿ ಗೂಗಲ್ ಅಸಿಸ್ಟೆಂಟ್ ಸೌಲಭ್ಯವೂ ಇದೆ.


ಫೋನಿನ ಇನ್ನಿತರ ವೈಶಿಷ್ಟ್ಯಗಳು ಹೀಗಿವೆ:
  • 2 ಜಿಬಿ ರ್‍ಯಾಮ್ ಮತ್ತು 32 ಜಿಬಿ ಶೇಖರಣಾ ಸಾಮರ್ಥ್ಯ
  • ಹೆಚ್ಚುವರಿ 512 ಜಿಬಿವರೆಗೆ ಮೆಮೊರಿ ಕಾರ್ಡ್ ಬಳಸುವ ಅವಕಾಶ
  • ಎರಡು ನ್ಯಾನೋ ಸಿಮ್, ಪ್ರಾಥಮಿಕ/ಡೇಟಾ ಸಿಮ್ ಆಗಿ ಜಿಯೋ ಸಂಪರ್ಕ ಬಳಸುವುದು ಕಡ್ಡಾಯ
  • 13 ಎಂಪಿ ಪ್ರಾಥಮಿಕ ಕ್ಯಾಮೆರಾ, 8 ಎಂಪಿ ಸೆಲ್ಫಿ ಕ್ಯಾಮೆರಾ, ಗೂಗಲ್ ಕ್ಯಾಮೆರಾ ಗೋ ಆಪ್‌ನೊಂದಿಗೆ
  • 3500 ಎಂಎಎಚ್ ಬ್ಯಾಟರಿ, ನಾವೇ ಬದಲಿಸುವುದು ಸಾಧ್ಯ
  • 5.45" HD+ (720 x 1440) ಪರದೆ
  • ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3
  • ಹಿಂಬದಿ ರಕ್ಷಾಕವಚ ಪ್ಲಾಸ್ಟಿಕ್ಕಿನದು
  • ಭಾರತದಲ್ಲೇ ತಯಾರಾದ ಫೋನು
ಗಮನಿಸಬೇಕಾದ ಅಂಶಗಳು:
  • ಪ್ರಾಥಮಿಕ/ಡೇಟಾ ಸಿಮ್ ಆಗಿ ಜಿಯೋ ಸಂಪರ್ಕ ಬಳಸುವುದು ಕಡ್ಡಾಯ, ಎರಡನೆಯ ಸಿಮ್ (ಕರೆಗಳಿಗೆ ಮಾತ್ರ) ಯಾವ ಸಂಸ್ಥೆಯದಾದರೂ ಇರಬಹುದು
  • ಹಣಕಾಸು ಸೌಲಭ್ಯದೊಂದಿಗೆ ಫೋನ್ ಖರೀದಿಸಿದರೆ, ಕಂತು ಪಾವತಿ ಮಾಡದ ಸಂದರ್ಭಗಳಲ್ಲಿ ನಿಮ್ಮ ಫೋನನ್ನು ಸಂಸ್ಥೆ ಲಾಕ್ ಮಾಡಬಹುದು
ಫೋನಿನ ಪೆಟ್ಟಿಗೆಯಲ್ಲಿ ಹ್ಯಾಂಡ್‌ಸೆಟ್‌ನೊಂದಿಗೆ ಬ್ಯಾಟರಿ, ಅಡಾಪ್ಟರ್ ಹಾಗೂ ಯುಎಸ್‌ಬಿ ಕೇಬಲ್ ಇವೆ. ಜೊತೆಗೆ ಕೊಟ್ಟಿರುವ ಮಾಹಿತಿಯ ಪ್ರಕಾರ ಹ್ಯಾಂಡ್‌ಸೆಟ್‌ಗೆ ಒಂದು ವರ್ಷ ಹಾಗೂ ಬ್ಯಾಟರಿ, ಅಡಾಪ್ಟರ್ ಮತ್ತು ಕೇಬಲ್‌ಗೆ ಆರು ತಿಂಗಳ ವಾರಂಟಿ ಇದೆ. ತಂತ್ರಾಂಶದ ವಿಷಯಕ್ಕೆ ಬರುವುದಾದರೆ, ಇದಕ್ಕೆ ಆಂಡ್ರಾಯ್ಡ್ ಫೀಚರ್ ಅಪ್‌ಡೇಟ್‌ಗಳು ಹಾಗೂ ಸೆಕ್ಯೂರಿಟಿ ಅಪ್‌ಡೇಟ್‌ಗಳನ್ನು ಒದಗಿಸುವುದಾಗಿ ಜಿಯೋ ಹೇಳಿಕೊಂಡಿದೆ. 

ಗೂಗಲ್ ಕ್ಯಾಮೆರಾ ಆಪ್ ಇರುವ ಕಾರಣದಿಂದ ಇದರ ಕ್ಯಾಮೆರಾ ಬಗ್ಗೆ ಬಹಳ ಕುತೂಹಲ ಇತ್ತು. ಇದರಲ್ಲಿರುವುದು ಅದರ ಲೈಟ್ ಆವೃತ್ತಿಯಾದ 'ಕ್ಯಾಮೆರಾ ಗೋ'. ಉತ್ತಮ ಬೆಳಕಿನಲ್ಲಿ ಇದು ಉತ್ತಮ ಫೋಟೋಗಳನ್ನು ಸೆರೆಹಿಡಿಯುತ್ತದೆ. ಎಚ್‌ಡಿಆರ್ ಹಾಗೂ ನೈಟ್ ಮೋಡ್ ಫಲಿತಾಂಶವೂ ತೃಪ್ತಿಕರವಾಗಿದೆ. ಆದರೆ ಹೆಚ್ಚು ಉತ್ತಮ ಕ್ಯಾಮೆರಾ ಯಂತ್ರಾಂಶವಿರುವ ಫೋನಿನಲ್ಲಿ ಗೂಗಲ್ ಕ್ಯಾಮೆರಾ ಆಪ್ ಬಳಸುವ ಅನುಭವದೊಂದಿಗೆ ಇದನ್ನು ಹೋಲಿಸುವಂತಿಲ್ಲ.  


ಈ ಫೋನಿನ ಸ್ಪೀಕರ್ ಹಿಂಬದಿಯಲ್ಲಿರುವುದು ಕೊಂಚ ಕಿರಿಕಿರಿಯೆನಿಸಿದ ವಿಷಯ. ಮೊದಲೇ ಸ್ವಲ್ಪ ಕಡಿಮೆ ಎನ್ನಿಸುವ ಧ್ವನಿ, ಮೇಜಿನ ಮೇಲೋ ಹಾಸಿಗೆಯ ಮೇಲೋ ಇಟ್ಟಾಗ ಈ ಕಾರಣದಿಂದಾಗಿ ಇನ್ನಷ್ಟು ಕಡಿಮೆಯಾಗಿ ಕೇಳುತ್ತದೆ. ಮೊಬೈಲ್ ಸ್ಟಾಂಡ್ ಅಥವಾ ಇಯರ್ ಫೋನ್ ಬಳಸುವವರಿಗೆ ಇದು ಸಮಸ್ಯೆಯೇನಲ್ಲ.

ಒಟ್ಟಾರೆಯಾಗಿ ಈ ಫೋನನ್ನು ಸುಮಾರು ಅರ್ಧ ದಿನ ಬಳಸಿದ ಅನುಭವದ ಆಧಾರದ ಮೇಲೆ, ಪ್ರಾರಂಭಿಕ ಬಳಕೆದಾರರಿಗೆ ಇದು ನಿಜಕ್ಕೂ ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಸಂಸ್ಥೆಯೇ ಹೇಳಿರುವಂತೆ ಇದು ಮೊದಲ ಬಾರಿ ಸ್ಮಾರ್ಟ್‌ಫೋನ್ ಬಳಸುವವರಿಗೆಂದು ರೂಪಿಸಿರುವ ಫೋನು. ನೀವು ಈಗಾಗಲೇ ಹೆಚ್ಚು ಸಾಮರ್ಥ್ಯದ ಫೋನ್ ಬಳಸಿದವರಾಗಿದ್ದರೆ ಮುಂದಿನ ಆಯ್ಕೆಯಾಗಿ ಈ ಫೋನ್ ಪರಿಗಣಿಸುವುದು ಬೇಡ. ಫೀಚರ್ ಫೋನಿನಿಂದ ಸ್ಮಾರ್ಟ್‌ಫೋನಿಗೆ ಬದಲಾಗುವಂತಿದ್ದರೆ, ಅಥವಾ ಪ್ರಾಥಮಿಕ ಉದ್ದೇಶಗಳಿಗಷ್ಟೇ ಸ್ಮಾರ್ಟ್‌ಫೋನ್ ಬಳಸುವ ಇರಾದೆಯಿದ್ದರೆ ಖಂಡಿತವಾಗಿಯೂ ಇದನ್ನು ಪರಿಗಣಿಸಬಹುದು.

ಇನ್ನೇನಾದರೂ ಪ್ರಶ್ನೆಗಳಿವೆಯೇ? ಕಮೆಂಟ್ ಮಾಡಿ, ಈ ಪೋಸ್ಟ್ ಅನ್ನು ಅಪ್‌ಡೇಟ್ ಮಾಡಲು ಪ್ರಯತ್ನಿಸುತ್ತೇನೆ, ಧನ್ಯವಾದಗಳು!

You Might Also Like

0 Responses

Popular Posts

Like us on Facebook