ಕೇಂದ್ರ ಸರಕಾರದ ಆನ್‌ಲೈನ್ ದೂರು ವ್ಯವಸ್ಥೆ - ನನ್ನ ಅನುಭವ

10:43 PM


ಕೆಲವು ದಿನಗಳ ಹಿಂದೆ ಮಗಳ ಸುಕನ್ಯಾ ಸಮೃದ್ಧಿ ಖಾತೆಗೆ ಹಣ ಹಾಕಲು ಬ್ಯಾಂಕಿಗೆ ಹೋಗಿದ್ದೆ. ಆನ್‌ಲೈನ್ ಟ್ರಾನ್ಸ್‌ಫರ್ ಮಾಡುವಂತಿಲ್ಲ ಎಂದಿದ್ದ ಕಾರಣ ಚೆಕ್ ತೆಗೆದುಕೊಂಡು ಹೋದೆ. ನನ್ನ ಕೈಯಲ್ಲಿ ಬೇರೆ ಬ್ಯಾಂಕಿನ ಚೆಕ್ ನೋಡಿದ ತಕ್ಷಣ ಕೌಂಟರಿನಲ್ಲಿದ್ದ ಅಧಿಕಾರಿ "ನಮ್ಮ ಬ್ಯಾಂಕಿನ ಚೆಕ್ ಇಲ್ಲದಿದ್ದರೆ ಖಾತೆಗೆ ಹಣ ಹಾಕುವಂತಿಲ್ಲ" ಎಂದರು. ಮೂರ್ನಾಲ್ಕು ವರ್ಷಗಳಿಂದ ಇಲ್ಲದ ಈ ನಿಯಮ ಈಗೇಕೆ ಎನ್ನುವುದಕ್ಕೆ ಅವರು ಸರಿಯಾಗಿ ಉತ್ತರಿಸದೆ ನಮ್ಮಲ್ಲೇ ಒಂದು ಅಕೌಂಟು ತೆರೆದು ಆಮೇಲೆ ಹಣ ಹಾಕಿ ಎಂದುಬಿಟ್ಟರು.

ಉಪಯೋಗಿಸುವುದಿಲ್ಲ ಎಂದು ಗೊತ್ತಿದ್ದೂ ಇನ್ನೊಂದು ಅಕೌಂಟನ್ನು ತೆರೆಯುವುದು ಸಮಯ-ಶ್ರಮ ಎರಡೂ ವ್ಯರ್ಥಮಾಡಿದ ಹಾಗೆ ಎಂದು ಅವರಿಗೆ ವಿವರಿಸಲು ಪ್ರಯತ್ನಿಸಿದ್ದು ವಿಫಲವಾದಮೇಲೆ ಆ ಶಾಖೆಯ ಹಿರಿಯ ಅಧಿಕಾರಿಯ ಹತ್ತಿರ ಹೋದೆ. ಅವರು ಸಮಾಧಾನ ಹಾಗೂ ಸೌಜನ್ಯದಿಂದಲೇ ಮಾತನಾಡಿದರೂ "ಸಿಸ್ಟಂ ಪ್ರಾಬ್ಲಂ" ಎಂದು ಹೇಳಿ ಚೆಕ್ ತೆಗೆದುಕೊಳ್ಳಲು ಒಪ್ಪಲಿಲ್ಲ. ಆ ವೇಳೆಗಾಗಲೇ ಸಾಕಷ್ಟು ಕಿರಿಕಿರಿಯಾಗಿದ್ದರಿಂದ ಹೊಸ ಖಾತೆ ತೆರೆಯಲು, ಅದರ ಮೂಲಕ ಮಗಳ ಖಾತೆಗೆ ಹಣ ಹಾಕಲು ನಾನೂ ಸಿದ್ಧನಿರಲಿಲ್ಲ.

ಬ್ಯಾಂಕಿಂಗ್ ವ್ಯವಹಾರ ಸುಲಭಗೊಳಿಸಲು ಹಲವು ಕಸರತ್ತುಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಹಣ ಹಾಕಲು ಹೊಸ ಖಾತೆ ತೆರೆಯಬೇಕೆನ್ನುವುದು ತಪ್ಪು ಎನ್ನುವುದು ನನ್ನ ವಾದವಾಗಿತ್ತು. ಇದು ಸರಿಯೋ ತಪ್ಪೋ ತಿಳಿಯಲು ಏನು ಮಾಡಬಹುದು ಎಂದು ಯೋಚಿಸಿದಾಗ ನನ್ನ ಮನಸ್ಸಿಗೆ ಬಂದಿದ್ದು ಕೇಂದ್ರ ಸರಕಾರದ Centralized Public Grievance Redress And Monitoring System (CPGRAMS) - ಸಾರ್ವಜನಿಕರ ಸಮಸ್ಯೆಗಳನ್ನು ಅಂತರಜಾಲದ ಮೂಲಕ ಸಂಬಂಧಪಟ್ಟವರ ಗಮನಕ್ಕೆ ತರುವ ವ್ಯವಸ್ಥೆ.

ಹಿಂದೆ ಯಾವಾಗಲೂ ಈ ವ್ಯವಸ್ಥೆ ಬಳಸಿರಲಿಲ್ಲವಾದ್ದರಿಂದ ಮೊದಲಿಗೆ ಇದರ ಜಾಲತಾಣದಲ್ಲಿ (pgportal.gov.in) ಒಂದು ಖಾತೆ ತೆರೆದೆ. ವೈಯಕ್ತಿಕ ವಿವರಗಳನ್ನು (ವಿಳಾಸ, ದೂರವಾಣಿ ಹಾಗೂ ಇಮೇಲ್) ಕೊಟ್ಟ ನಂತರ ದೂರು ಯಾವ ವಿಷಯಕ್ಕೆ ಸಂಬಂಧಿಸಿದ್ದು ಎಂದು ದಾಖಲಿಸಬೇಕಿತ್ತು. ಸೂಕ್ತ ವಿಭಾಗವನ್ನು (Central Government > Financial Services - Banking Division) ಆರಿಸಿ ವಿವರಗಳನ್ನು ಬರೆದ ತಕ್ಷಣವೇ ನನ್ನ ದೂರು ದಾಖಲಾಗಿ ಅದಕ್ಕೆ ಇಮೇಲ್ ಹಾಗೂ ಎಸ್ಸೆಮ್ಮೆಸ್ ಮೂಲಕ ಸ್ವೀಕೃತಿಯೂ ಬಂತು.

ಬ್ಯಾಂಕಿನವರು ಹೇಳುತ್ತಿರುವುದು ಸರಿಯೇ ಎಂದು ತಿಳಿಸಿ, ಹಾಗೊಮ್ಮೆ ಸರಿಯಿಲ್ಲದಿದ್ದರೆ ಅವರಿಗೆ ನನ್ನ ಚೆಕ್ ಸ್ವೀಕರಿಸಲು ಹೇಳಿ - ಇದು ನನ್ನ ದೂರಿನ ಸಾರಾಂಶ. ಶನಿವಾರ ಸಂಜೆಯ ವೇಳೆಗೆ ದೂರು ದಾಖಲಿಸಿದ ನಾನು ಅದರ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನೇನೂ ಇಟ್ಟುಕೊಳ್ಳದೆ ಪರ್ಯಾಯ ಆಯ್ಕೆಗಳ ಬಗ್ಗೆಯೂ ಯೋಚಿಸಲು ಶುರುಮಾಡಿದ್ದೆ. ಆ ಬ್ಯಾಂಕಿನ ಫೇಸ್‌ಬುಕ್ ಪುಟದಿಂದ "We will forward your concern with the relevant team" ಎನ್ನುವುದಕ್ಕಿಂತ ಹೆಚ್ಚಿನ ಸಹಾಯ ಸಿಗಲಿಲ್ಲ.

ಈ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದ್ದು ಸೋಮವಾರ. ಮಧ್ಯಾಹ್ನ ಮೀಟಿಂಗಿನಲ್ಲಿದ್ದಾಗ ಯಾವುದೋ ಲ್ಯಾಂಡ್‌ಲೈನ್ ಸಂಖ್ಯೆಯಿಂದ ಒಂದೇ ಸಮನೆ ಕರೆಗಳು ಬರಲು ಪ್ರಾರಂಭವಾಯಿತು. ಮೀಟಿಂಗಿನಿಂದ ಹೊರಬಂದು ಆ ಕರೆಗೆ ಉತ್ತರಿಸಿದಾಗ ಮಾತನಾಡಿದವರು ಶನಿವಾರ ಭೇಟಿಮಾಡಿದ್ದ ಬ್ಯಾಂಕಿನ ಅದೇ ಹಿರಿಯ ಅಧಿಕಾರಿ. ನಿಮ್ಮ ದೂರು ಸಿಕ್ಕಿದೆ, ನಿಮ್ಮ ಸಮಸ್ಯೆ ಬಗೆಹರಿಸಲು ಒಂದು ಮಾರ್ಗ ಹುಡುಕಿದ್ದೇವೆ, ನಾಳೆ ಚೆಕ್ ತನ್ನಿ, ಖಾತೆಗೆ ಹಾಕೋಣ ಎಂದ ಅವರ ಮಾತು ಕೇಳಿ ನನಗೆ ಒಂದು ನಿಮಿಷ ಏನು ಹೇಳಬೇಕೆಂದೇ ತೋಚಲಿಲ್ಲ.

ಅವರ ಕರೆಗೆ ಧನ್ಯವಾದ ತಿಳಿಸಿ, ದೂರಿನ ಹಿಂದೆ ಇದ್ದ ನನ್ನ ಕಾಳಜಿಯನ್ನೂ ವಿವರಿಸಿದೆ. ಮಾರನೆಯ ದಿನ (ಮಂಗಳವಾರ) ಬ್ಯಾಂಕಿಗೆ ಹೋಗಿ ಅವರನ್ನು ಭೇಟಿಮಾಡಿದೆ. ಶನಿವಾರದ ಹಾಗೆಯೇ ಸೌಜನ್ಯದಿಂದ ವ್ಯವಹರಿಸಿದ ಅವರು ಚೆಕ್ ತೆಗೆದುಕೊಂಡು ಸ್ವೀಕೃತಿ ಕೊಟ್ಟರು. ಕೆಲವೇ ದಿನಗಳಲ್ಲಿ ಹಣವನ್ನು ಖಾತೆಗೆ ಜಮಾ ಮಾಡುವುದಾಗಿಯೂ ತಿಳಿಸಿದರು. ಅವರ ಸಹಾಯಕ್ಕೆ ಕೃತಜ್ಞತೆ ತಿಳಿಸಿದ ನಾನು ದೂರನ್ನು ಮುಕ್ತಾಯಗೊಳಿಸಬಹುದು ಎಂದು ಇಮೇಲ್ ಕಳುಹಿಸಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ನನ್ನ ದೂರನ್ನು ಮುಕ್ತಾಯಗೊಳಿಸಿದ ಮಾಹಿತಿಯೂ ಎಸ್ಸೆಮ್ಮೆಸ್ ಮೂಲಕ ಬಂತು.

ನನ್ನ ಸಮಸ್ಯೆ ಸಣ್ಣದೇ ಇರಬಹುದು. ಆದರೆ ಅದನ್ನು ಹೇಗೆ ಬಗೆಹರಿಸಿಕೊಳ್ಳುವುದೆಂದು ತಿಳಿಯದ ಸಂದರ್ಭದಲ್ಲಿ CPGRAMS ವ್ಯವಸ್ಥೆ ನೀಡಿದ ನೆರವು ಅತ್ಯಂತ ಸಂತೋಷ ಹಾಗೂ ಆಶ್ಚರ್ಯಗಳನ್ನು ಮೂಡಿಸಿದ್ದಂತೂ ನಿಜ. ಕೇವಲ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ (ನಡುವೆ ಬಂದ ಭಾನುವಾರ ಹೊರತುಪಡಿಸಿ) ನಮ್ಮ ದೂರು ಕೇಂದ್ರ ಸರಕಾರದಿಂದ ಬ್ಯಾಂಕಿನ ವಿಭಾಗೀಯ ಕಚೇರಿಗೆ, ಅಲ್ಲಿಂದ ನಮ್ಮ ಶಾಖೆಗೆ ತಲುಪಿ ಪರಿಹಾರವನ್ನೂ ಪಡೆದುಕೊಳ್ಳುವುದೆಂದರೆ ಅದೇನು ತಮಾಷೆಯ ವಿಷಯವೇ? ಇಂಥದ್ದೊಂದು ಅದ್ಭುತ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಕೇಂದ್ರ ಸರಕಾರದ Ministry Of Personnel, Public Grievances & Pensionsನ ಸಚಿವರು ಹಾಗೂ ಅಧಿಕಾರಿಗಳು ನಿಜಕ್ಕೂ ಅಭಿನಂದನಾರ್ಹರು.

[CPGRAMS ವ್ಯವಸ್ಥೆ ಬಳಸಿದ ನನ್ನ ಅನುಭವವನ್ನು ಹಂಚಿಕೊಳ್ಳುವುದಷ್ಟೇ ಈ ಬರಹದ ಉದ್ದೇಶ. ಬ್ಯಾಂಕಿನ ಹಾಗೂ ಶಾಖೆಯ ಹೆಸರನ್ನು ಬರೆದಿಲ್ಲದಿರುವುದು ಉದ್ದೇಶಪೂರ್ವಕ. ಅವರಿಗೆ ತೊಂದರೆಯಾಗುವುದಾದರೆ ಮಗಳ ಖಾತೆಯನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸಿಕೊಳ್ಳಲು ಸಿದ್ಧ ಎಂದು ಶಾಖೆಯ ಅಧಿಕಾರಿಗಳಿಗೆ ಈಗಾಗಲೇ ತಿಳಿಸಿದ್ದೇನೆ.]

You Might Also Like

0 Responses

Popular Posts

Like us on Facebook