ಕಳೆಗಟ್ಟುತ್ತಿರುವ ಮೊಬೈಲ್ ಜಗತ್ತು

12:02 AM

ನಮ್ಮ ಮನೆಗೆ ನನ್ನದೇ ಆದ ಕಂಪ್ಯೂಟರ್ ಬಂದದ್ದು ಸುಮಾರು ೧೫ ವರ್ಷಗಳ ಹಿಂದೆ. ಆ ಕಂಪ್ಯೂಟರಿನಲ್ಲಿದ್ದದ್ದು ೮೦೦ ಮೆಗಾಹರ್ಟ್ಸ್ ಸಾಮರ್ಥ್ಯದ ಪ್ರಾಸೆಸರ್, ಮತ್ತು ೧೨೮ ಮೆಗಾಬೈಟ್ ರ್‍ಯಾಮ್! ಅಂದಿನ ಕಾಲಕ್ಕೆ ಅದು ತಕ್ಕಮಟ್ಟಿಗೆ ಒಳ್ಳೆಯ ಕಂಪ್ಯೂಟರೇ ಆಗಿತ್ತು. ಬರವಣಿಗೆ ಪ್ರಾರಂಭಿಸಿದ ದಿನಗಳ ಉತ್ತಮ ಮಿತ್ರನಾಗಿದ್ದ ಆ ಕಂಪ್ಯೂಟರ್ ನನ್ನಿಂದ ಕನಿಷ್ಠ ೧೫೦ ಲೇಖನಗಳನ್ನೂ ಎರಡು ಪುಸ್ತಕಗಳನ್ನೂ ಬರೆಸಿತ್ತು.

ಈಗ, ಒಂದೂವರೆ ದಶಕಗಳ ನಂತರ, ಆ ಕಂಪ್ಯೂಟರಿನ ತಾಂತ್ರಿಕ ವಿವರಗಳನ್ನು ನೆನೆಸಿಕೊಂಡರೆ ನಗು ಬರುತ್ತದೆ. ಇಂದಿನ ಹುಡುಗರಿಗೆ ಅಂಥದ್ದೊಂದು ಕಂಪ್ಯೂಟರ್ ಇತ್ತು ಎಂದು ಹೇಳಿದರೆ "ಯಾವ ಮ್ಯೂಸಿಯಮ್ಮಿನಲ್ಲಿ?" ಎಂದು ಕೇಳುತ್ತಾರೋ ಏನೋ!

ಕಂಪ್ಯೂಟರುಗಳು ಹಾಗಿರಲಿ, ನನ್ನ ಹಳೆಯ ಮಿತ್ರನಲ್ಲಿದ್ದುದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಪ್ರಾಸೆಸರ್ ಹಾಗೂ ರ್‍ಯಾಮ್ ಇಂದಿನ ಫೋನುಗಳಲ್ಲೇ ಇದೆ. ಎರಡು ಗಿಗಾಹರ್ಟ್ಸ್ ಪ್ರಾಸೆಸರ್ - ಎರಡು ಗಿಗಾಬೈಟ್ ರ್‍ಯಾಮ್ ಇರುವ ಫೋನು - ಇಂದಿನ ಪರಿಸ್ಥಿತಿಯಲ್ಲಿ - ವಿಶೇಷವೆಂದು ಅನ್ನಿಸುವುದೇ ಇಲ್ಲ.

ನಮ್ಮ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದೂ ಇದಕ್ಕೆ ಕಾರಣವಿರಬಹುದು. ಆ ನಿರೀಕ್ಷೆಯ ಮಟ್ಟವನ್ನು ಮುಟ್ಟಲು ಸತತ ಪ್ರಯತ್ನಗಳು ಒಂದರ ಹಿಂದೊಂದರಂತೆ ನಡೆಯುತ್ತಲೂ ಇರುತ್ತವಲ್ಲ!

ಇಂತಹ ಪ್ರಯತ್ನಗಳಲ್ಲಿ ಎಲ್ಲವೂ ಸಫಲವಾಗುತ್ತವೆ ಎಂದೇನೂ ಇಲ್ಲ. ಹಲವು ಪ್ರಯತ್ನಗಳು ನೀರಸವಾಗಿ ಸೋತುಹೋದರೆ ಕೆಲವು ಮಾತ್ರ ನಮ್ಮ ಗಮನ ಸೆಳೆಯುವಲ್ಲಿ ಸಫಲವಾಗುತ್ತವೆ.



ಹೀಗೆ ನಮ್ಮ ಗಮನ ಸೆಳೆಯುವ ಪ್ರಯತ್ನವೊಂದರ ಹೆಸರೇ ಆಸುಸ್ ಸಂಸ್ಥೆಯ 'ಜೆನ್‌ಫೋನ್ ೨'. ಸದ್ಯದಲ್ಲೇ ನಮ್ಮ ದೇಶದ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಈ ಸ್ಮಾರ್ಟ್‌ಫೋನಿನಲ್ಲಿ ೨.೩ ಗಿಗಾಹರ್ಟ್ಸಿನ (೬೪-ಬಿಟ್) ಪ್ರಾಸೆಸರ್ ಹಾಗೂ ೪ ಗಿಗಾಬೈಟ್ ರ್‍ಯಾಮ್‌ ಇರಲಿದೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದ ಇನ್ನಿತರ ಫೋನುಗಳಂತೆ ಇದನ್ನು ಕೊಳ್ಳಲು ಯಾವ ಆಮಂತ್ರಣವಾಗಲಿ 'ಸೇಲ್'ಗಾಗಿ ಕಾಯುವುದಾಗಲಿ ಬೇಡ ಎನ್ನುವುದು ಇನ್ನೊಂದು ವಿಶೇಷ.

ಕೈಗೆಟುಕುವ ಬೆಲೆಯ 'ಜೆನ್‌ಫೋನ್ ೫' ಸರಣಿಯಿಂದ ಗಮನಸೆಳೆದಿರುವ ಆಸುಸ್ ಸಂಸ್ಥೆ ಈ ಹೊಸ ಮಾದರಿಯೊಡನೆ ಇನ್ನಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ ಎನ್ನುವುದಂತೂ ನಿಜ. ತೈವಾನ್ ಹಾಗೂ ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಜೆನ್‌ಫೋನ್ ೨ ಕುರಿತು ಒಳ್ಳೆಯ ವಿಮರ್ಶೆಯೂ ಕೇಳಿಬಂದಿರುವುದು ಗಮನಾರ್ಹ.

ಜೆನ್‌ಫೋನ್ ೨ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ

You Might Also Like

0 Responses

Popular Posts

Like us on Facebook