ಕನ್ನಡ ತಂತ್ರಾಂಶ: ಪರಿಸ್ಥಿತಿ ಬದಲಾಯಿಸುವುದು ಸಾಧ್ಯ!
10:38 AMಮಾರ್ಚ್ ೪, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಅಭಿಪ್ರಾಯಕನ್ನಡ ತಂತ್ರಾಂಶ ಕ್ಷೇತ್ರದ ಸ್ಥಿತಿಗತಿಗಳನ್ನು ಒಬ್ಬ ಬಳಕೆದಾರನಾಗಿ ನೋಡಿದರೆ ಸದ್ಯದ ಸನ್ನಿವೇಶ ನಿರಾಶಾದಾಯಕವಾಗೇನೂ ಇಲ್ಲ. ಬೆರಳಚ್ಚಿಸುವ ತಂತ್ರಾಂಶಗಳಿಂದ ಮುದ್ರಿತ ಅಕ್ಷರಗಳನ್ನು ಗುರುತಿಸುವ (ಓಸಿಆರ್), ಪಠ್ಯವನ್ನು ಧ್ವನಿರೂಪಕ್ಕೆ ಪರಿವರ್ತಿಸುವ (ಟೆಕ್ಸ್ಟ್ ಟು ಸ್ಪೀಚ್) ತಂತ್ರಾಂಶದವರೆಗೆ ಅನೇಕ ಬಗೆಯ ಸವಲತ್ತುಗಳು ಇದೀಗ ಕನ್ನಡದಲ್ಲಿವೆ. ಆದರೆ ಇಂಗ್ಲಿಷ್ ಮತ್ತಿತರ ಭಾಷೆಗಳ ಹೋಲಿಕೆಯಲ್ಲಿ ನಾವು ಇನ್ನೂ ಬಹುದೂರ ಸಾಗಬೇಕಿದೆ ಎನ್ನುವುದೂ ನಿಜವೇ.
ಈಗಾಗಲೇ ಆಗಿರುವ ಕೆಲಸಗಳಲ್ಲಿ ಬಹಳಷ್ಟರ ಹಿಂದೆ ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವೈಯಕ್ತಿಕ ಶ್ರಮವನ್ನು ನಾವು ಕಾಣಬಹುದು: ಶ್ರೀ ಕೆ. ಪಿ. ರಾಯರ 'ಸೇಡಿಯಾಪು' ತಂತ್ರಾಂಶ ಬಂದ ಕಾಲದಿಂದ ಪ್ರಾರಂಭಿಸಿ ಇಂದಿನ ಮೊಬೈಲ್ ಆಪ್‌ಗಳವರೆಗೂ ಇದು ಸತ್ಯವೇ. ಸಂಸ್ಥೆಗಳಿಂದ, ಸರಕಾರದಿಂದಲೂ ಕೆಲಸ ಆಗಿದೆ; ಆದರೆ ಅದರ ಪ್ರಮಾಣವಾಗಲಿ ಪರಿಣಾಮವಾಗಲಿ - ಕೆಲವು ಉದಾಹರಣೆಗಳನ್ನು ಹೊರತುಪಡಿಸಿ - ಹೇಳಿಕೊಳ್ಳುವಷ್ಟಿಲ್ಲ. ಈ ಕ್ಷೇತ್ರದ ಆಸಕ್ತರೆಲ್ಲ ಒಟ್ಟಾಗಿ ಕೆಲಸಮಾಡದ್ದರಿಂದಲೋ ಏನೋ ಕನ್ನಡ ತಂತ್ರಾಂಶಗಳ ಅಭಿವೃದ್ಧಿಯಾಗಲಿ ಬಳಕೆಯಾಗಲಿ ಈವರೆಗೂ ಒಂದು ಚಳವಳಿಯ ರೂಪ ಪಡೆದುಕೊಂಡಿಲ್ಲ.
ವೈಯಕ್ತಿಕ ಮಟ್ಟದ ಭಿನ್ನಾಭಿಪ್ರಾಯ-ಪ್ರತಿಷ್ಠೆಗಳನ್ನೆ ಲ್ಲ ಬದಿಗೊತ್ತಿ ಕನ್ನಡ ತಂತ್ರಾಂಶ ಆಸಕ್ತರು ಒಂದು ಸಮುದಾಯವಾಗಿ ಬೆಳೆದರೆ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿಯನ್ನು ಬದಲಾಯಿಸುವುದು ಸಾಧ್ಯ. ತಂತ್ರಾಂಶ ಅಭಿವೃದ್ಧಿಯಲ್ಲಷ್ಟೇ ಅಲ್ಲ, ತಂತ್ರಾಂಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವಲ್ಲಿ - ಬಳಕೆದಾರರಿಗೆ ಪರಿಚಯಿಸುವಲ್ಲಿಯೂ ಸಮುದಾಯದ ನೆರವು ಉಪಯುಕ್ತ.
ಸರಕಾರವೂ ಅಷ್ಟೆ, ಹೊಸ ತಂತ್ರಾಂಶಗಳ ತಯಾರಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಕ್ಕಿಂತ ಆ ಕ್ಷೇತ್ರದ ಪರಿಣತರಿಗೆ ಅಗತ್ಯ ಪ್ರೋತ್ಸಾಹ ನೀಡುವುದು ಒಳ್ಳೆಯದು. ಈಗಾಗಲೇ ಕನ್ನಡ ತಂತ್ರಾಂಶ ತಯಾರಿಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು, ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು - ಅಗತ್ಯ ನೆರವನ್ನು ಒದಗಿಸಿಕೊಡುವುದು ಈ ನಿಟ್ಟಿನಲ್ಲಿ ಆಗಬಹುದಾದ ಮೊದಲ ಕೆಲಸ.
0 Responses