ಮನೆಯಂಗಳದಲ್ಲಿ ನಾಗೇಶ ಹೆಗಡೆ, ಮನದಂಗಳದಲ್ಲಿ ನಾಗೇಶ ಹೆಗಡೆ!

12:58 AM


ಪರಿಸರಪ್ರೇಮಿ ಎನ್ನಿ, ವಿಜ್ಞಾನ ಲೇಖಕರೆನ್ನಿ, ಪತ್ರಕರ್ತರೆನ್ನಿ, ತಂತ್ರಜ್ಞಾನ ಆಸಕ್ತರೆನ್ನಿ, ಕಿರಿಯ ಬರಹಗಾರರ ಗುರುಗಳೆನ್ನಿ - ಎಲ್ಲ ವಿಶೇಷಣಗಳೂ ನಾಗೇಶ ಹೆಗಡೆಯವರಿಗೆ ಹೊಂದುತ್ತವೆ. ಛಾಯಾಗ್ರಾಹಕರು, ಕೃಷಿಕರು, ಚಿತ್ರಕಾರರು, ಹಾಸ್ಯ ಬರಹಗಾರರು ಎನ್ನುವಂತಹ ಇನ್ನೂ ಹಲವಾರು ಸಫಿಕ್ಸುಗಳನ್ನೂ ನಾವು ಅವರಿಗೆ ಫಿಕ್ಸ್ ಮಾಡಬಹುದು.

ಹೀಗಾಗಿಯೇ ನಾಗೇಶ ಹೆಗಡೆಯವರೊಡನೆ ಮಾತನಾಡುವುದೆಂದರೆ ಅದೊಂದು ವಿಶಿಷ್ಟ ಅನುಭವ. ಅಂತಹುದೊಂದು ಅನುಭವ ತಪ್ಪಿಸಿಕೊಳ್ಳಬಾರದು ಎಂದಿದ್ದರೆ ನಾಳೆ ಶನಿವಾರ (ಏಪ್ರಿಲ್ ೨೨, ೨೦೧೭) ಬೆಂಗಳೂರಿನ ಕನ್ನಡ ಭವನ ಆವರಣದಲ್ಲಿರುವ ನಯನ ಸಭಾಂಗಣಕ್ಕೆ ಬನ್ನಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುವ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದ ಈ ತಿಂಗಳ ಅತಿಥಿಯಾಗಿ ನಾಗೇಶ ಹೆಗಡೆ ಅಲ್ಲಿರುತ್ತಾರೆ, ನಮ್ಮೊಡನೆ ಮಾತನಾಡುತ್ತಾರೆ.

ಶನಿವಾರ ಸಂಜೆಯ ಈ ಮಾತುಕತೆಯನ್ನು ಮತ್ತಷ್ಟು ಸ್ಮರಣೀಯವಾಗಿಸುವ ಇನ್ನೊಂದು ಕಾರ್ಯಕ್ರಮವೂ ಇದೆ. ಅದು ನಾಗೇಶ ಹೆಗಡೆಯವರ ಹೊಚ್ಚಹೊಸ ಕೃತಿ 'ಭೂಮಿಯೆಂಬ ಗಗನನೌಕೆ'ಯ ಬಿಡುಗಡೆ. ಹೆಸರಾಂತ ಕತೆಗಾರ ವಸುಧೇಂದ್ರ ಈ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ, ಅದರ ಕುರಿತು ಮಾತನಾಡುತ್ತಾರೆ ಎನ್ನುವುದು ಇನ್ನೊಂದು ವಿಶೇಷ.

ಪರಿಸರ ಪ್ರೇಮಿ ನಾಗೇಶ ಹೆಗಡೆಯವರಿಗೂ 'ಭೂಮಿ'ಗೂ ಬಹಳ ಹತ್ತಿರದ ನಂಟು. ಪರಿಸರ-ವಿಜ್ಞಾನ ಕುರಿತು ಕನ್ನಡದಲ್ಲಿ ಹೀಗೂ ಬರೆಯಬಹುದು ಎಂದು ತೋರಿಸಿಕೊಟ್ಟ ಅವರ ಜನಪ್ರಿಯ ಕೃತಿ 'ಇರುವುದೊಂದೇ ಭೂಮಿ'. ಈಗ ಅವರ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶನ ಸಂಸ್ಥೆಯ ಹೆಸರೂ ಭೂಮಿ.

ನಾಳೆ ಬಿಡುಗಡೆಯಾಗುತ್ತಿರುವ ಪುಸ್ತಕವೂ ಭೂಮಿಯನ್ನು ಕುರಿತದ್ದೇ. ಅದರಲ್ಲಿ ಪ್ರಸ್ತಾಪವಾಗಿರುವ ವಿಷಯ ಎಷ್ಟು ಮಹತ್ವದ್ದೆಂದು ತಿಳಿಯಲು ಈ ಕೆಲವೇ ಸಾಲುಗಳನ್ನು ಓದಿದರೆ ಸಾಕು: "ಬಾಹ್ಯಾಕಾಶದಲ್ಲಿ ವರ್ಷಗಟ್ಟಲೆ ಸತತವಾಗಿ ಚಲಿಸಬೇಕಾದ ಗಗನನೌಕೆಯಲ್ಲಿ ನೀರು, ಗಾಳಿ, ಆಹಾರ ದ್ರವ್ಯ ಎಲ್ಲವೂ ಸೀಮಿತ ಪ್ರಮಾಣದಲ್ಲೇ ಇರುತ್ತದೆ. ಅದು ಮುಗಿದುಹೋದರೆ ಹೊರಗಿನಿಂದ ತರುವಂತಿಲ್ಲ. ಈ ನಮ್ಮ ಭೂಮಿಯೂ ಗಗನನೌಕೆಯ ಹಾಗೇ. ಇಲ್ಲೂ ನೀರು, ಖನಿಜ, ಇಂಧನ - ಯಾವುದು ಮುಗಿದರೂ ಹೊರಗಿನಿಂದ ತರುವಂತಿಲ್ಲ..."

ನಾಗೇಶ ಹೆಗಡೆಯವರ ಮಾತುಗಳಲ್ಲೇ ಹೇಳುವುದಾದರೆ "ತುಣುಕು ಭೂಮಿಗಾಗಿ ಬಡಿದಾಡುವ ಕೋಟ್ಯಂತರ ಜನರ ನಡುವೆ, ಇಡಿಯಾಗಿ ಯಾರಿಗೂ ಬೇಡವಾದ ಅನಾಥ ಗ್ರಹದ" ಇಂದಿನ ಪರಿಸ್ಥಿತಿಯ ಚಿತ್ರಣ ಈ ಪುಸ್ತಕದಲ್ಲಿದೆ. ಗಮನಿಸಿ, ೧೮೦ ರೂಪಾಯಿ ಮುಖಬೆಲೆಯ ಈ ಕೃತಿ ನಾಳೆ ರೂ. ೧೫೦ಕ್ಕೆ ನಮ್ಮ ಕೈಸೇರಲಿದೆ.

ತಪ್ಪದೇ ಬನ್ನಿ, ಶನಿವಾರ ಭೇಟಿಯಾಗೋಣ; ನಾಗೇಶ ಹೆಗಡೆಯವರೊಡನೆ ಮಾತನಾಡೋಣ, ಹೊಸ ವಿಷಯಗಳನ್ನು ತಿಳಿದುಕೊಳ್ಳೋಣ!

ಕಾರ್ಯಕ್ರಮ: ಏಪ್ರಿಲ್ ೨೨, ೨೦೧೭ರ ಶನಿವಾರ ಸಂಜೆ ೪ ಗಂಟೆಗೆ
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆಸಿ ರಸ್ತೆ, ಬೆಂಗಳೂರು

You Might Also Like

0 Responses

Popular Posts

Like us on Facebook