ಮ್ಯಾಕ್ಸ್ ಜೊತೆ ಮೂರು ವಾರ!

12:29 AM


ಗ್ಯಾಜೆಟ್‌ಗಳನ್ನು ಪರೀಕ್ಷಿಸುವವರು, ಅದರ ಬಗ್ಗೆ ಬರೆಯುವವರಿಗೆ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಕಳುಹಿಸಿಕೊಡುತ್ತವೆ. ಅಪರೂಪದ ಕೆಲ ಉದಾಹರಣೆಗಳನ್ನು ಹೊರತುಪಡಿಸಿದರೆ ಈ ಗ್ಯಾಜೆಟ್‌ಗಳನ್ನು ಬಳಸಲು ಸಿಗುವ ಸಮಯ ಕೆಲವೇ ದಿನಗಳು ಮಾತ್ರ. ಈ ಅವಧಿ ಮುಗಿಯುತ್ತಿದ್ದಂತೆ ಪರೀಕ್ಷೆಯಲ್ಲಿದ್ದ ಗ್ಯಾಜೆಟ್ ಮರಳಿ ತನ್ನ ಪೆಟ್ಟಿಗೆಸೇರುವುದು, ಸಂಸ್ಥೆಯತ್ತ ಹೊರಡುವುದು ಅನಿವಾರ್ಯ (ವಿಮರ್ಶಿಸುವವರಿಗೆ ಎಲ್ಲ ಗ್ಯಾಜೆಟ್‌ಗಳೂ ಉಚಿತವಾಗಿ ದೊರಕುತ್ತವೆ ಎಂದುಕೊಂಡವರು ಈ ಸಾಲನ್ನು ಇನ್ನೊಮ್ಮೆ ಓದಿ; ಎಲ್ಲೋ ಅಪರೂಪಕ್ಕೊಮ್ಮೆ ಈ ಲೋಕದಲ್ಲಿರುವ ಕೆಲವೇ ಕೆಲವು ಮಂದಿಗೆ ದುಬಾರಿ ಉಡುಗೊರೆಗಳು ಸಿಗಬಹುದು ಅಷ್ಟೇ).

ಗ್ಯಾಜೆಟ್‌ನ ಬಹುತೇಕ ವೈಶಿಷ್ಟ್ಯಗಳನ್ನು ಪರೀಕ್ಷಿಸಲು ಇಷ್ಟು ಸಮಯ ಸಾಕು, ನಿಜ. ಆದರೆ ಮೊಬೈಲ್ ಫೋನಿನಂತಹ ಸಾಧನಗಳ ಗುಣಾವಗುಣಗಳು ನಿಖರವಾಗಿ ಗೊತ್ತಾಗುವುದು ಅವನ್ನು ಹೆಚ್ಚು ಕಾಲ ಬಳಸಿದಾಗಲೇ. ಏಸಸ್ ಸಂಸ್ಥೆ ಕೆಲತಿಂಗಳ ಹಿಂದೆ ಪರಿಚಯಿಸಿದ 'ಜೆನ್‌ಫೋನ್ ೩ ಮ್ಯಾಕ್ಸ್' (ZC553KL) ಮೊಬೈಲ್ ಫೋನನ್ನು ಹೀಗೆ ಮೂರು ವಾರಗಳ ಕಾಲ ಬಳಸುವ ಅವಕಾಶ ಈಚೆಗೆ ಸಿಕ್ಕಿತ್ತು.


ತೈವಾನ್ ಮೂಲದ ತಂತ್ರಜ್ಞಾನ ಸಂಸ್ಥೆ ಏಸಸ್ ರೂಪಿಸುತ್ತಿರುವ ಜೆನ್‌ಫೋನ್ ಸರಣಿಯ ಸ್ಮಾರ್ಟ್‌ಫೋನುಗಳು ಕಳೆದ ಕೆಲವರ್ಷಗಳಿಂದ ನಮ್ಮ ದೇಶದಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡಿವೆ. ಈ ಜನಪ್ರಿಯತೆಗೆ ಮಹತ್ವದ ಕೊಡುಗೆ ನೀಡಿರುವುದು ಜೆನ್‌ಫೋನ್ ಮ್ಯಾಕ್ಸ್ ಸರಣಿಯ ಹೆಗ್ಗಳಿಕೆ. ಹೆಚ್ಚಿನ ಬ್ಯಾಟರಿ ಸಾಮರ್ಥ್ಯದಿಂದಲೇ ಗುರುತಿಸಿಕೊಂಡಿರುವ ಈ ಸರಣಿಯ ಫೋನುಗಳು ಬೇರೆ ಮೊಬೈಲುಗಳನ್ನು ಚಾರ್ಜ್ ಮಾಡುವ ತಮ್ಮ ವೈಶಿಷ್ಟ್ಯದಿಂದಲೂ ಸಾಕಷ್ಟು ಹೆಸರುಮಾಡಿವೆ. ಈ ಸರಣಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವ ಮಾದರಿಗಳಲ್ಲಿ ಜೆನ್‍ಫೋನ್ ೩ ಮ್ಯಾಕ್ಸ್ ಕೂಡ ಒಂದು.

ಈ ಸರಣಿಯ ಹಿಂದಿನ ಎರಡು ಮಾದರಿಗಳಂತೆ ಹೆಚ್ಚು ಸಾಮರ್ಥ್ಯದ ಬ್ಯಾಟರಿಯೇ ಜೆನ್‍ಫೋನ್ ೩ ಮ್ಯಾಕ್ಸ್‌ನ ಮುಖ್ಯಾಂಶವೂ ಹೌದು. ಈ ಸರಣಿಯ ಇತರ ಫೋನುಗಳಲ್ಲಿ ೫೦೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದ್ದರೆ ಈ ಮಾದರಿಯಲ್ಲಿರುವುದು ೪೧೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ. ಒಮ್ಮೆ ಚಾರ್ಜ್ ಮಾಡಿದರೆ ಸಾಕಷ್ಟು ದೀರ್ಘಕಾಲ ಬಾಳುವ ಈ ಬ್ಯಾಟರಿ ಸುಮಾರು ೧೭ ಗಂಟೆಗಳ ಕಾಲದ ಥ್ರೀಜಿ ಸಂಭಾಷಣೆಗೆ ಸಾಕು ಎನ್ನುವುದು ಏಸಸ್‌ನ ಹೇಳಿಕೆ. ಮೂರು ವಾರದ ಪರೀಕ್ಷೆಯ ಅವಧಿಯಲ್ಲಿ ಇಷ್ಟೆಲ್ಲ ಮಾತನಾಡಲಿಲ್ಲವಾದರೂ ಫೋನನ್ನು ಪದೇಪದೇ ಚಾರ್ಜ್ ಮಾಡಬೇಕಾದ ಅಗತ್ಯ ಬರಲಿಲ್ಲ ಎನ್ನುವುದು ಖುಷಿಕೊಟ್ಟ ಸಂಗತಿ. ಮ್ಯಾಕ್ಸ್ ಸರಣಿಯ ಇತರ ಮಾದರಿಗಳಂತೆ ಈ ಫೋನನ್ನೂ ಪವರ್‍‍ಬ್ಯಾಂಕ್ ಆಗಿ ಬಳಸುವುದು, ಬೇರೆ ಮೊಬೈಲನ್ನು ಚಾರ್ಜ್ ಮಾಡುವುದು ಸಾಧ್ಯ. ಇದಕ್ಕೆ ಬೇಕಾಗುವ ಓಟಿಜಿ ಕೇಬಲ್ ಅನ್ನು ಫೋನಿನ ಜೊತೆಯಲ್ಲೇ ಕೊಟ್ಟಿದ್ದಾರೆ.


ಜೆನ್‌ಫೋನ್ ೩ ಮ್ಯಾಕ್ಸ್‌ನ ಎರಡು ಆವೃತ್ತಿಗಳು - ೫.೨ ಇಂಚು ಪರದೆಯದೊಂದು, ೫.೫ ಇಂಚು ಪರದೆಯದೊಂದು - ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಪೈಕಿ ಮೂರುವಾರದ ಪರೀಕ್ಷೆಯಲ್ಲಿ ಜೊತೆಯಾಗಿದ್ದದ್ದು ೫.೫ ಇಂಚು ಪರದೆಯ ZC553KL. ೧.೪ ಗಿಗಾಹರ್ಟ್ಸ್ (ಕ್ವಾಲ್‍ಕಾಮ್ ಎಸ್೪೩೦) ಪ್ರಾಸೆಸರ್, ೩ ಜಿಬಿ ರ್‍ಯಾಮ್ ಹಾಗೂ ೩೨ ಜಿಬಿ ಶೇಖರಣಾ ಸಾಮರ್ಥ್ಯ ಈ ಆವೃತ್ತಿಯ ವೈಶಿಷ್ಟ್ಯ.

ಜೆನ್‍ಫೋನ್ ೩ ಮ್ಯಾಕ್ಸ್‌ನಲ್ಲಿ ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಫೋನಿನ ಆಕರ್ಷಕ ರಚನೆ. ಹಿಂದಿನ ಆವೃತ್ತಿಯಲ್ಲಿದ್ದ ಪ್ಲಾಸ್ಟಿಕ್ ಕವಚದ ಬದಲು ಈ ಮಾದರಿಯಲ್ಲಿ ಲೋಹವನ್ನು ಬಳಸಲಾಗಿದೆ. ಅಷ್ಟೇ ಅಲ್ಲ, ಅಂಚುಗಳಲ್ಲಿ ಬಾಗಿರುವ (ಕಾಂಟೂರ್ಡ್) ೨.೫ಡಿ ಗಾಜಿನ ಟಚ್ ಸ್ಕ್ರೀನ್ ಕೂಡ ಈ ಫೋನಿನ ಮೆರುಗನ್ನು ಹೆಚ್ಚಿಸಿದೆ. ೫.೫ ಇಂಚಿನ ಫುಲ್ ಎಚ್‍ಡಿ ಪರದೆಯಲ್ಲಿ ಚಿತ್ರಗಳು ಬಹಳ ಸ್ಪಷ್ಟವಾಗಿ ಮೂಡುತ್ತವೆ. ಪರದೆಯ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಹೆಚ್ಚಿನ ಸ್ಥಳ ವ್ಯರ್ಥವಾಗಿಲ್ಲದಿರುವುದೂ ವಿಶೇಷವೇ.

ಜೆನ್‌ಫೋನ್ ೩ ಸರಣಿಯ ಇತರೆಲ್ಲ ಫೋನುಗಳಂತೆ ಜೆನ್‌ಫೋನ್ ೩ ಮ್ಯಾಕ್ಸ್‌ನ ಕ್ಯಾಮೆರಾ ಕೂಡ ಚೆನ್ನಾಗಿದೆ. ೧೬ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ ೮ ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳಲ್ಲಿ ಚೆಂದದ ಚಿತ್ರ ಹಾಗೂ ವೀಡಿಯೋಗಳನ್ನು ಸೆರೆಹಿಡಿಯಬಹುದು. ಸಹಾಯಕ್ಕೆ ಎಲ್ಇಡಿ ಫ್ಲಾಶ್ ಹಾಗೂ ಲೇಸರ್ ಫೋಕಸ್ ಕೂಡ ಇದೆ. ಎಚ್‍ಡಿಆರ್ ಚಿತ್ರಗಳು ಹಿಂದಿನ ಮಾದರಿಗಳಿಗಿಂತ ಬಹಳ ಸೊಗಸಾಗಿ ಮೂಡುತ್ತವೆ. ಪೂರ್ವನಿರ್ಧಾರಿತ ಮೋಡ್‍ಗಳಷ್ಟೇ ಅಲ್ಲ, ಮ್ಯಾನ್ಯುಯಲ್ ಮೋಡ್ ಕಾರ್ಯಾಚರಣೆಯೂ ಉತ್ತಮವಾಗಿದೆ.


ಫಿಂಗರ್ ಪ್ರಿಂಟ್ ಸ್ಕ್ಯಾನರ್ ಫೋನಿನ ಹಿಂಭಾಗದಲ್ಲಿದೆ. ಫೋನಿನ ಹಿಂಭಾಗದ ಕವಚ ತೆರೆಯುವಂತಿಲ್ಲ, ಹಾಗಾಗಿ ಸಿಮ್ ಟ್ರೇ ಹೊರತೆರೆಯಲು ಪಿನ್ ಬಳಸಬೇಕು. ಹೈಬ್ರಿಡ್ ಸಿಮ್ ಸ್ಲಾಟ್ ಇರುವುದರಿಂದ ಮೆಮೊರಿ ಕಾರ್ಡ್ ಬಳಸುವುದಾದರೆ ಒಂದೇ ಸಿಮ್ ಉಪಯೋಗಿಸುವುದು ಸಾಧ್ಯ. ಇತರ ಜೆನ್‍ಫೋನ್‌ಗಳಂತೆ ಇಲ್ಲೂ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ಹಾಗೂ ಜೆನ್ ಯುಐ ಮೇಲುಹೊದಿಕೆ ಬಳಕೆಯಾಗಿದೆ. ಸತತವಾಗಿ ಬಳಸಿದಾಗ ಫೋನ್ ಕೊಂಚ ಬೆಚ್ಚಗಾದಂತೆ ಅನಿಸುತ್ತದೆ.

ಒಟ್ಟಾರೆಯಾಗಿ ನೋಡಲು, ಕೈಲಿ ಹಿಡಿಯಲು, ಬಳಸಲು ಉತ್ತಮವಾದ ಫೋನ್ ಆದರೂ ಅದರಲ್ಲಿರುವ ಸೌಲಭ್ಯಗಳಿಗೆ ಬೆಲೆ (ಮುಖಬೆಲೆ ರೂ. ೧೮,೯೯೯) ಕೊಂಚ ಜಾಸ್ತಿಯಾಯಿತು ಎನಿಸುತ್ತದೆ. ಇಷ್ಟೆಲ್ಲ ಉತ್ತಮ ಫೋನುಗಳನ್ನು ತಯಾರಿಸುವ ಏಸಸ್ ಸಂಸ್ಥೆ ಅವುಗಳ ಬೆಲೆಯನ್ನು ಕೊಂಚ ಕಡಿಮೆಮಾಡಿದರೆ ಏಸಸ್ ಉತ್ಪನ್ನಗಳ ಜನಪ್ರಿಯತೆ ಇನ್ನಷ್ಟು ಹೆಚ್ಚುವುದು ಸಾಧ್ಯ.

You Might Also Like

0 Responses

Popular Posts

Like us on Facebook