ಹಂಪೆಯ ಮೇಲೆ ಹಾರಾಡುತ್ತ...
2:27 PMನೋಡಿದಷ್ಟೂ ಮುಗಿಯದ ವೈಶಿಷ್ಟ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವುದು ಹಂಪೆ. ಹತ್ತಾರುಬಾರಿ ನೋಡಿದ ನಂತರವೂ, ಬಿಸಿಲಲ್ಲಿ ತಿರುಗಿ ತಿರುಗಿ ಸುಸ್ತಾದ ಗಳಿಗೆಯಲ್ಲೂ "ಸಾಕಪ್ಪ ಹಂಪೆಯ ಸಹವಾಸ!" ಎಂದು ಒಮ್ಮೆ ಕೂಡ ಅನ್ನಿಸದಿರಲು ಕಾರಣ ಇದೇ ಇರಬೇಕು.
ಹೀಗೆ ಹಂಪೆಯ ಹೆಗ್ಗುರುತುಗಳನ್ನೆಲ್ಲ ಹಲವು ಸಲ ನೋಡಿದ್ದಾದಮೇಲೆ ಅವೆಲ್ಲ ಏಕೋ ಬಿಡಿ ದೃಶ್ಯಗಳಂತೆ ಕಾಣಲು ಶುರುವಾಯಿತು. ಹಂಪೆಯ ಇಡೀ ಪ್ರದೇಶದ ಚಿತ್ರಣವನ್ನು ಒಟ್ಟಾಗಿ ನೋಡುವ ಅವಕಾಶ ಸಿಗಬಾರದೇಕೆ ಎನ್ನುವ ಪ್ರಶ್ನೆಯೂ ಮನಸಿನಲ್ಲಿ ಮೂಡಿತು. ಇದೇ ಪ್ರಶ್ನೆಯನ್ನು ಹೊತ್ತು ಮತಂಗ ಪರ್ವತ, ಅಂಜನಾದ್ರಿ ಬೆಟ್ಟಗಳನ್ನು ಹತ್ತಿದ್ದಾಯಿತು. ಅಲ್ಲಿಂದ ಸಾಕಷ್ಟು ದೊಡ್ಡ ಪ್ರದೇಶಗಳ ವಿಹಂಗಮ ನೋಟ ಒಂದೇ ಬಾರಿಗೆ ಕಾಣಲು ದೊರಕಿತಾದರೂ ಅದೇಕೋ ಹಂಪೆಯ ಪೂರ್ಣರೂಪ ಎನ್ನುವ ಭಾವನೆ ತಂದುಕೊಡಲಿಲ್ಲ.
ಈ ಯೋಚನೆಯಲ್ಲಿದ್ದ ಸಂದರ್ಭದಲ್ಲೇ ಕೇಳಸಿಕ್ಕಿದ್ದು ಹಂಪೆ ಮೇಲೆ ಹಾರಾಡುವ ಅವಕಾಶ ಸೃಷ್ಟಿಯಾದ ಸುದ್ದಿ. ಲಂಕೆಯಿಂದ ಸೀತಾದೇವಿಯೊಡನೆ ಮರಳುವಾಗ ಭಗವಾನ್ ಶ್ರೀರಾಮನ ಪುಷ್ಪಕ ವಿಮಾನ ಕಿಷ್ಕಿಂಧೆ, ಅಂದರೆ ಇಂದಿನ ಹಂಪೆಗೂ ಬಂದಿತ್ತಂತೆ. ಈಗ ಪುಷ್ಪಕವಿಮಾನ ಇಲ್ಲದಿರುವುದರಿಂದ ನಮ್ಮಂತಹ ಹುಲುಮಾನವರನ್ನೂ ಹಾರಿಸಲು ಹಂಪೆಯತ್ತ ಬಂದಿಳಿದದ್ದು ಹೆಲಿಕಾಪ್ಟರು.
ಮಕ್ಕಳಿಂದ ದೊಡ್ಡವರ ತನಕ ಹೆಲಿಕಾಪ್ಟರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ವಿಮಾನದ ಹೋಲಿಕೆಯಲ್ಲಿ ಅಷ್ಟು ಚಿಕ್ಕದಾಗಿರುವ ಯಂತ್ರ ಹಾರುತ್ತದೆಂದೋ, ವಿಮಾನಯಾನದಷ್ಟು ಸುಲಭಲಭ್ಯವಲ್ಲವೆಂದೋ - ಯಾವುದೋ ಒಂದು ಕಾರಣದಿಂದ ನಮ್ಮ ಮನಸಿನಲ್ಲಿ ವಿಮಾನಕ್ಕೂ ಇಲ್ಲದ ವಿಶೇಷ ಸ್ಥಾನ ಹೆಲಿಕಾಪ್ಟರುಗಳಿಗೆ ದೊರೆತಿದೆ.
ಹೆಲಿಕಾಪ್ಟರ್ ಹಾರಾಟದ ಅನುಭವ ಪಡೆಯುವುದು, ಆಕಾಶದಿಂದ ಹಂಪೆ ಹೇಗೆ ಕಾಣುತ್ತದೆಂದು ನೋಡುವುದು ಮತ್ತು ಆ ಅನುಭವದ ಕೆಲಭಾಗವನ್ನಾದರೂ ಛಾಯಾಚಿತ್ರಗಳಲ್ಲಿ ಸೆರೆಹಿಡಿಯುವುದು - ಇಷ್ಟು ಉದ್ದೇಶ ಇಟ್ಟುಕೊಂಡು ನಾನೂ ಹೆಲಿಕಾಪ್ಟರ್ ಹತ್ತುವ ಯೋಚನೆ ಮಾಡಿದೆ.
ಇಷ್ಟೆಲ್ಲ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಆಲೋಚನೆಗಿದ್ದ ಅಡ್ಡಿ ಒಂದೇ - ಅದು ಸಮಯ. ವಿಮಾನಯಾನದಂತೆ ಹೆಲಿಕಾಪ್ಟರ್ ಪ್ರಯಾಣವೂ ಸಾಕಷ್ಟು ದುಬಾರಿ; ಹೀಗಾಗಿ ಕೈಗೆಟುಕುವ ಬೆಲೆಯಲ್ಲಿ (ಸುಮಾರು ಎರಡು ಸಾವಿರ ರೂಪಾಯಿ) ಅದರ ಅನುಭವ ಒದಗಿಸಲು ಆಯೋಜಕರು ಪ್ರಯಾಣದ ಅವಧಿಯನ್ನು ಕಡಿಮೆಮಾಡುವುದು ಸಾಮಾನ್ಯ. ಇದರ ಪರಿಣಾಮ - ಹಂಪೆಯಲ್ಲಿ ಹೆಲಿಕಾಪ್ಟರ್ ಪ್ರಯಾಣಕ್ಕೆ ದೊರೆತ ಸಮಯ ಬರೀ ಹತ್ತು ನಿಮಿಷ!
ಹೆಲಿಕಾಪ್ಟರ್ ಹಾರಾಟದ ಅನುಭವ ಪಡೆಯಲು, ಹಂಪೆ ಆಕಾಶದಿಂದ ಹೇಗೆ ಕಾಣುತ್ತದೆಂದು ನೋಡಲು ಇಷ್ಟು ಸಮಯ ಸಾಕು. ಇವೆರಡರ ಜೊತೆಗೆ ಫೋಟೋ ತೆಗೆಯುವ ಕೆಲಸವೂ ಸೇರಿದಾಗ ಮಾತ್ರ ಗೊಂದಲ ಶುರುವಾಗುತ್ತದೆ. ಹೆಲಿಕಾಪ್ಟರ್ ಒಳಗೆ ಏನೆಲ್ಲ ಇದೆಯೆಂದು ನೋಡುವುದು, ಕಿಟಕಿಯಿಂದಾಚೆಗಿನ ದೃಶ್ಯಗಳನ್ನು ನೋಡುವುದೋ, ಅದರ ಫೋಟೋ ತೆಗೆಯಲು ಪ್ರಯತ್ನಿಸುವುದೋ?
ಸರಿಸುಮಾರು ಸಮತಟ್ಟಾಗಿರುವ ಯಾವುದೇ ಜಾಗದಿಂದ ಹೆಲಿಕಾಪ್ಟರ್ ಹಾರಬಲ್ಲದು. ಅಲ್ಲದೆ ಒಮ್ಮೆಗೆ ಹೆಲಿಕಾಪ್ಟರಿನಲ್ಲಿ ಹಾರಬಹುದಾದ ಪ್ರಯಾಣಿಕರ ಸಂಖ್ಯೆಯೂ ಕಡಿಮೆ. ಹೀಗಾಗಿ ಹೆಲಿಕಾಪ್ಟರ್ ಹತ್ತುವುದು ಏರೋಪ್ಲೇನ್ ಹತ್ತುವುದಕ್ಕಿಂತ ಸುಲಭ. ಇನ್ನು ನನ್ನ ಕ್ಯಾಮೆರಾ ನೋಡಿಯೋ ಏನೋ ಸಹಪ್ರಯಾಣಿಕರು ಕಿಟಕಿಬದಿಯ ಸೀಟು ಬಿಟ್ಟುಕೊಟ್ಟಿದ್ದರಿಂದ ಫೋಟೋ ತೆಗೆಯಲು ಆಗುತ್ತೋ ಇಲ್ಲವೋ ಎಂಬ ಆತಂಕವೂ ಕೊನೆಯಾಯಿತು. ಜೊತೆಯಲ್ಲಿದ್ದ ಗೆಳೆಯನಿಗಂತೂ ಪೈಲಟ್ ಪಕ್ಕದ ಸೀಟೇ ಸಿಕ್ಕಿಬಿಟ್ಟಿತ್ತು!
ವಿಮಾನದ ಟೇಕ್ ಆಫ್ ಹೋಲಿಕೆಯಲ್ಲಿ ಹೆಲಿಕಾಪ್ಟರ್ ಟೇಕ್ ಆಫ್ ಬಹಳ ಕ್ಷಿಪ್ರ. ಒಳಗೆ ಕುಳಿತು ಆಚೀಚೆ ನೋಡುವುದರೊಳಗೆ ಜೋರು ಶಬ್ದದೊಡನೆ ನಮ್ಮ ಹೆಲಿಕಾಪ್ಟರ್ ಆಕಾಶಕ್ಕೆ ಏರಿಯೇಬಿಟ್ಟಿತ್ತು. ಮೊದಲೇ ರಮಣೀಯವಾದ ಹಂಪೆಯ ಪರಿಸರ ಆಕಾಶದಿಂದ ಇನ್ನೂ ಚೆಂದಕ್ಕೆ ಕಾಣುತ್ತಿತ್ತು. ಅಲ್ಲಲ್ಲಿ ಚದುರಿದಂತಿದ್ದ ಅವಶೇಷಗಳು, ದೇವಾಲಯಗಳು, ರಸ್ತೆ-ಮನೆಗಳು, ಹಸಿರು ತೋಟಗಳು, ಬೆಟ್ಟಗುಡ್ಡಗಳು, ಹಿನ್ನೆಲೆಯಲ್ಲಿ ತುಂಗಭದ್ರೆ ಎಲ್ಲವೂ ಸೇರಿ ಹೊಸದೊಂದು ಜಗತ್ತೇ ನಮ್ಮೆದುರು ತೆರೆದುಕೊಂಡಿದ್ದು ನಿಜಕ್ಕೂ ಮರೆಯಲಾಗದ ಅನುಭವ.
ಹಂಪೆಯ ಹಲವು ಹೆಗ್ಗುರುತುಗಳ ಸುತ್ತ ರೂಪಿಸಲಾಗಿರುವ ಹೂದೋಟ ಹಾಗೂ ಹುಲ್ಲುಹಾಸುಗಳಂತೂ ನೆಲದ ಮೇಲೆ ಯಾರೋ ಕಾರ್ಪೆಟ್ ಹಾಸಿ ಹೋದಂತೆ ಕಾಣುತ್ತಿತ್ತು. ಹಿಂದೊಮ್ಮೆ ಕಷ್ಟಪಟ್ಟು ಹತ್ತಿದ್ದ ಅಂಜನಾದ್ರಿ ಬೆಟ್ಟ ಮೇಲಿನಿಂದ ಪುಟಾಣಿಯಾಗಿ ಕಂಡಿದ್ದು ತಮಾಷೆಯೆನಿಸಿತು. ನೆಲದ ಮೇಲಿಂದ ಈಗಲೂ ಭವ್ಯವಾಗಿಯೇ ಕಾಣುವ ವಿಜಯವಿಠಲ ದೇಗುಲ ಆವರಣದ ಕಟ್ಟಡಗಳಿಗೆ ನಿಜಕ್ಕೂ ಎಷ್ಟು ಹಾನಿಯಾಗಿದೆ ಎನ್ನುವುದು ಆಕಾಶದಿಂದ ಕಂಡು ವಿಷಾದವೂ ಆಯಿತು.
ಇದನ್ನೆಲ್ಲ ನೋಡುತ್ತಿರುವಂತೆಯೇ ಫೋಟೋ ತೆಗೆಯುವ ಪ್ರಯತ್ನಗಳೂ ಚಾಲ್ತಿಯಲ್ಲಿದ್ದವು. ಚಲಿಸುವ ವಾಹನದಿಂದ ಫೋಟೋ ತೆಗೆಯುವುದು ಯಾವತ್ತಿಗೂ ಸವಾಲಿನ ಕೆಲಸ. ಕಾರು ಬಸ್ಸುಗಳಲ್ಲಿ ಕಾಡುವ ರಸ್ತೆ ಗುಂಡಿಯ ಸಮಸ್ಯೆ ಇರಲಿಲ್ಲ ಎನ್ನುವುದೊಂದೇ ಈ ಬಾರಿ ಗಮನಕ್ಕೆ ಬಂದ ವ್ಯತ್ಯಾಸ. ಪರಿಣತ ಛಾಯಾಗ್ರಾಹಕರು ಇಂತಹ ಸಂದರ್ಭಗಳಲ್ಲೂ ತಮಗೆ ಬೇಕಾದ ಹೊಂದಾಣಿಕೆಗಳನ್ನು (ಮ್ಯಾನ್ಯುಯಲ್ ಸೆಟ್ಟಿಂಗ್ಸ್) ಮಾಡಿಕೊಳ್ಳುತ್ತಾರೋ ಏನೋ, ಆದರೆ ನಾನು ಮಾತ್ರ ರಿಸ್ಕ್ ತೆಗೆದುಕೊಳ್ಳದೆ 'ಆಟೋ' ಆಯ್ಕೆಯ ಮೊರೆಹೊಕ್ಕೆ.
ಪಟಪಟನೆ ಕ್ಲಿಕ್ಕಿಸುತ್ತ ಹೋದಂತೆ ಚಿತ್ರಗಳು ಕ್ಯಾಮೆರಾ ಮೆಮೊರಿಯಲ್ಲಿ ಸೆರೆಯಾಗುತ್ತಲೇ ಹೋದವು. ಕಿಟಕಿ ಗಾಜಿನ ಪ್ರತಿಫಲನದಿಂದ ಒಂದಷ್ಟು, ಫ್ರೇಮಿನೊಳಕ್ಕೆ ಅತಿಕ್ರಮ ಪ್ರವೇಶ ಮಾಡಿದ ಹೆಲಿಕಾಪ್ಟರ್ ರೆಕ್ಕೆಗಳಿಂದ ಒಂದಷ್ಟು ಚಿತ್ರಗಳು ಹಾಳಾದವಾದರೂ ಪ್ರಯಾಣ ಮುಗಿಸಿ ಮತ್ತೆ ನೆಲಮುಟ್ಟುವಷ್ಟರಲ್ಲಿ ಅಂದು ಕಂಡ ಬಹುತೇಕ ದೃಶ್ಯಗಳು ಕ್ಯಾಮೆರಾ ಮೆಮೊರಿಯಲ್ಲಿ ಸೆರೆಯಾದವು.
ಆದರೂ ಇವೆಲ್ಲದಕ್ಕಿಂತ ಮನಸಿನ ಕ್ಯಾಮೆರಾನೇ ವಾಸಿ ಬಿಡಿ. ಅದರಲ್ಲಿ ಸೆರೆಯಾಗುವ ಚಿತ್ರಗಳಿಗೆ ಯಾವ ಗಾಜೂ ಅಡ್ಡಿಯಾಗದು, ಯಾವ ಹೆಲಿಕಾಪ್ಟರ್ ರೆಕ್ಕೆಗೂ ಆ ದೃಶ್ಯಗಳನ್ನು ಕೆಡಿಸುವ ಧೈರ್ಯ ಬಾರದು!
ನವೆಂಬರ್ ೪, ೨೦೧೭ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
0 Responses