ಬರಿಯ ಸವಾರಿಯಲ್ಲ, ಇದು ಬಲೂನ್ ಸಫಾರಿ!

3:29 PM


ಅರಣ್ಯ ಪ್ರದೇಶಗಳಿಗೆ ಹೋದಾಗ ಪ್ರಾಣಿಪಕ್ಷಿಗಳ ವೀಕ್ಷಣೆಗಾಗಿ ತೆರಳುವುದು ನಮಗೆಲ್ಲ ಪರಿಚಯವಿರುವ ಅಭ್ಯಾಸ. ಹೀಗೆ ಕಾಡುಪ್ರಾಣಿಗಳನ್ನು ನೋಡಲು ಪ್ರಯಾಣಿಸುತ್ತೇವಲ್ಲ, ಇದನ್ನು 'ಸಫಾರಿ' ಎಂದು ಕರೆಯುತ್ತಾರೆ. ಜೀಪು, ವ್ಯಾನು, ದೋಣಿ ಸೇರಿದಂತೆ ವಿವಿಧ ಬಗೆಯ ವಾಹನಗಳಲ್ಲಿ ಸಫಾರಿಗಾಗಿ ತೆರಳುವುದು ಸಾಮಾನ್ಯ ಅಭ್ಯಾಸ. ಕೆಲವು ಕಡೆಗಳಲ್ಲಿ ಪ್ರಾಣಿವೀಕ್ಷಣೆಗೆಂದು ಆನೆ ಮೇಲೇರಿ ತೆರಳುವ ಅವಕಾಶವೂ ಉಂಟು.

ನೀರಿನ - ನೆಲದ ಮೇಲೆ ಚಲಿಸುವ ಈ ಆಯ್ಕೆಗಳ ಬದಲು ಪ್ರಾಣಿ-ಪಕ್ಷಿಗಳನ್ನು ಆಕಾಶದಿಂದ ನೋಡುವಂತಿದ್ದರೆ? ಹಲವು ದೇಶಗಳಲ್ಲಿ ಈ ಸೌಲಭ್ಯವೂ ಉಂಟು. ಈಚೆಗೆ ಕೀನ್ಯಾ ಪ್ರವಾಸಕ್ಕೆ ಹೋದಾಗ ಅಲ್ಲಿನ ಮಾಸೈ ಮಾರಾ ಅರಣ್ಯಪ್ರದೇಶದಲ್ಲಿ ಅಂಥದ್ದೊಂದು ಹಾರುಸಫಾರಿಯ ಅನುಭವ ಪಡೆದುಕೊಳ್ಳುವ ಅವಕಾಶ ನನಗೆ ದೊರೆತಿತ್ತು.

ನನ್ನ ಈ ಸಫಾರಿಗೆ ವಾಹನವಾಗಿ ಒದಗಿದ್ದು ಹಾಟ್ ಏರ್ ಬಲೂನ್, ಅರ್ಥಾತ್ ಬಿಸಿಗಾಳಿ ತುಂಬಿದ ಆಕಾಶಬುಟ್ಟಿ!

ಹಾರಾಟಕ್ಕೆ ಮುನ್ನ
ನೋಡಲು ಮಕ್ಕಳಾಟದ ಬಲೂನಿನಂತೆಯೇ ಕಾಣುವ ಈ ಆಕಾಶಬುಟ್ಟಿ ಹತ್ತಾರು ಜನರನ್ನು ಹೊತ್ತುಕೊಂಡು ಹಾರುವುದು ಹೇಗೆ ಎನ್ನುವುದೇ ಕೌತುಕದ ಸಂಗತಿ. ಈ ಕೌತುಕಕ್ಕೆ ಕಾರಣ 'ಬಿಸಿಗಾಳಿ ತಣ್ಣನೆಯ ಗಾಳಿಗಿಂತ ಬೇಗನೆ ಮೇಲೇರುತ್ತದೆ' ಎನ್ನುವ ವಿಜ್ಞಾನದ ಸರಳ ತತ್ವ. ಬಿಸಿಗಾಳಿಯ ಸಾಂದ್ರತೆ ತಂಪು ಗಾಳಿಯದಕ್ಕಿಂತ ಕಡಿಮೆಯಿರುವುದು ಈ ಪ್ರಕ್ರಿಯೆಗೆ ಕಾರಣವಾಗುವ ಅಂಶ.

ಹಾಟ್‌ ಏರ್ ಬಲೂನುಗಳಲ್ಲಿರುವ ಪ್ರಮುಖ ಭಾಗಗಳು ಮೂರು. ಬಟ್ಟೆಯಿಂದ ಮಾಡಿದ ದೊಡ್ಡ ಬಲೂನು ಈ ಪೈಕಿ ಮೊದಲನೆಯದು. ಅಗತ್ಯಬಿದ್ದಾಗ ಗಾಳಿಯನ್ನು ಹೊರಬಿಡಲು ಬೇಕಾದ ವ್ಯವಸ್ಥೆಯೂ ಈ ಬಲೂನಿನಲ್ಲಿರುತ್ತದೆ. ಎರಡನೆಯದು, ಪ್ರಯಾಣಿಕರನ್ನು ಕೊಂಡೊಯ್ಯಲೆಂದು ಬಲೂನಿಗೆ ಕಟ್ಟಿರುವ ಬುಟ್ಟಿ. ಮೂರನೆಯದು, ಬಲೂನ್ ಒಳಗಿನ ಗಾಳಿಯನ್ನು ಬಿಸಿಮಾಡುವ ಒಲೆ. ಈ ಒಲೆ ಪ್ರೋಪೇನ್ ಅನಿಲವನ್ನು ಇಂಧನವನ್ನಾಗಿ ಬಳಸುತ್ತದೆ.


ಹಾರುಸಫಾರಿಯ ಈ ವಾಹನ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಪ್ರಕೃತಿಯ ಶಕ್ತಿಯನ್ನೇ ನಂಬಿಕೊಂಡಿರುವುದರಿಂದ ಪ್ರಯಾಣದ ಪ್ರಾರಂಭ ಹಾಗೂ ಮುಕ್ತಾಯ (ಟೇಕ್-ಆಫ್ ಮತ್ತು ಲ್ಯಾಂಡಿಂಗ್) ವಿಮಾನಯಾನದಷ್ಟು ಸರಾಗವಲ್ಲ. ಬುಟ್ಟಿ ನೇರವಾಗಿ ನಿಲ್ಲುವುದು ಬಲೂನಿನೊಳಗೆ ಬಿಸಿ ಗಾಳಿ ತುಂಬಿದ ನಂತರವೇ ಆದ್ದರಿಂದ ಪ್ರಾರಂಭದಲ್ಲಿ ಬುಟ್ಟಿ ನೆಲದ ಮೇಲೆ ಒಂದು ಬದಿಗೆ ಮಗುಚಿಕೊಂಡಂತೆಯೇ ಇರುತ್ತದೆ. ಬಹುಪಾಲು ಹಾರಾಟಗಳ ಸಂದರ್ಭದಲ್ಲಿ ಪ್ರಯಾಣಿಕರು ಹಾಗೆಯೇ ಅದರೊಳಗೆ ತೂರಿಕೊಳ್ಳಬೇಕು. ಪ್ರಯಾಣ ಮುಗಿದ ನಂತರವೂ ಅಷ್ಟೇ, ಬಹಳಷ್ಟು ಬಾರಿ ಬುಟ್ಟಿ ಒಂದು ಬದಿಗೆ ಮಗುಚಿಕೊಳ್ಳುತ್ತದೆ; ಆನಂತರವೇ ಪ್ರಯಾಣಿಕರು ಹೊರಬರುವುದು ಸಾಧ್ಯ!

ಹಾರಾಟದ ನಂತರ ಬುಟ್ಟಿಯೊಳಗೆ
ವಿಮಾನದಲ್ಲಿರುವಂತೆ ಹಾಟ್‌ ಏರ್ ಬಲೂನುಗಳಲ್ಲೂ ಒಬ್ಬರು ಪೈಲಟ್ ಇರುತ್ತಾರೆ. ಬಲೂನ್ ಒಳಗಿನ ಗಾಳಿಯ ತಾಪಮಾನವನ್ನು ಹೆಚ್ಚು-ಕಡಿಮೆ ಮಾಡುತ್ತ ಅದನ್ನು ತನ್ನ ಗಮ್ಯದತ್ತ ಕೊಂಡೊಯ್ಯಲು ಪ್ರಯತ್ನಿಸುವುದು ಈ ವ್ಯಕ್ತಿಯ ಕೆಲಸ. "ಪ್ರಯತ್ನಿಸುವುದು" ಏಕೆ ಎಂದಿರಾ? ವಿಮಾನದಂತೆ ಬಲೂನು ಇಂಥ ಸ್ಥಳದಲ್ಲೇ ಇಳಿಯುತ್ತದೆ ಎನ್ನುವಂತಿಲ್ಲ. ಒಂದೇ ಮಾರ್ಗದಲ್ಲಿ ಸಂಚರಿಸುವ ಬಲೂನು ಕೂಡ ಗಾಳಿಯ ವೇಗ, ಅದು ಬೀಸುತ್ತಿರುವ ದಿಕ್ಕು ಇತ್ಯಾದಿಗಳಿಗೆ ಅನುಗುಣವಾಗಿ ಪ್ರತಿಬಾರಿಯೂ ಬೇರೆಬೇರೆ ಕಡೆ ನೆಲಮುಟ್ಟುವುದು ಸಾಧ್ಯ. ಅದು ತನ್ನ ಉದ್ದೇಶಿತ ಗಮ್ಯಸ್ಥಾನದ ಆಸುಪಾಸಿನಲ್ಲೇ ಇರುವಂತೆ ನೋಡಿಕೊಳ್ಳುವುದು ಪೈಲಟ್ ಕೆಲಸ.ನೆಲಕ್ಕೆ ಸಮಾನಾಂತರವಾಗಿರುವ ಬುಟ್ಟಿಯೊಳಗೆ ಪ್ರಯಾಣಿಕರೆಲ್ಲ ತೂರಿಕೊಂಡಮೇಲೆ ಬಲೂನಿನೊಳಗೆ ಗಾಳಿ ತುಂಬಿಸುವ ಕೆಲಸ ಪ್ರಾರಂಭವಾಗುತ್ತದೆ. ಮಕ್ಕಳಾಟಿಕೆಯ ಬಲೂನಿಗೆ ಗಾಳಿ ಊದಿದಷ್ಟು ಸುಲಭದ ಕೆಲಸವೇನಲ್ಲ ಇದು. ಒಂದೆರಡು ದೊಡ್ಡದೊಡ್ಡ ಫ್ಯಾನುಗಳು ಬಲೂನಿಗೆ ಗಾಳಿ ತುಂಬಿಸಲು ಶುರುಮಾಡುತ್ತಿದ್ದಂತೆಯೇ ಒಲೆಯ ಸಹಾಯದಿಂದ ಆ ಗಾಳಿಯನ್ನು ಬಿಸಿಮಾಡುವ ಪ್ರಕ್ರಿಯೆಯೂ ಶುರುವಾಗುತ್ತದೆ. ಬಿಸಿಗಾಳಿ ತುಂಬುತ್ತಿದ್ದಂತೆ ಬಲೂನು ಮೈತುಂಬಿಕೊಂಡು ನೆಲಬಿಟ್ಟು ಮೇಲೇಳುತ್ತದೆ, ಬುಟ್ಟಿಯನ್ನು ನೆಟ್ಟಗೆ ನಿಲ್ಲಿಸುತ್ತದೆ.

ಹಾರಾಟಕ್ಕೆ ಮುನ್ನ
ಬಲೂನಿನ ಹಾರಾಟ ಶುರುವಾಗುವುದು, ಅರ್ಥಾತ್ ಅದು ಟೇಕ್ ಆಫ್ ಆಗುವುದು ಇಷ್ಟು ಕೆಲಸ ಆದನಂತರವೇ. ವಿಮಾನದಂತೆ ಅಷ್ಟು ದೂರ ನೆಲದಮೇಲೆಯೇ ಸಾಗಿ, ಆನಂತರ ಹಾರಿ-ಏರಿ ಮಾಡಬೇಕಾದ ಅಗತ್ಯವೆಲ್ಲ ಇಲ್ಲಿಲ್ಲ. ಪೈಲಟ್ ಓಕೆ ಮಾಡಿದ ಕೂಡಲೇ ಬಲೂನನ್ನೂ ಬುಟ್ಟಿಯನ್ನೂ ಹಿಡಿದಿರುವ ಹಗ್ಗಗಳನ್ನು ಬಿಚ್ಚಲಾಗುತ್ತದೆ, ಬಲೂನಿನ ಟೇಕ್ ಆಫ್ ಆಗಿಬಿಡುತ್ತದೆ!

ಮೇಲೇರಿದ ಬಲೂನು ಭೂಮಿಯಿಂದ ಎಷ್ಟು ಎತ್ತರದಲ್ಲಿ ಹಾರಬೇಕು ಎನ್ನುವುದನ್ನು ಅದರ ಪೈಲಟ್ ಗಾಳಿಯ ತಾಪಮಾನದಲ್ಲಿ ಹೆಚ್ಚು-ಕಡಿಮೆ ಮಾಡುವ ಮೂಲಕ ನಿರ್ಧರಿಸುತ್ತಾರೆ. ಬಲೂನು ಹಾರಾಟದ ಹಾದಿಯನ್ನು ಅಷ್ಟಿಷ್ಟು ನಿಯಂತ್ರಿಸುವುದೂ ಅವರ ಕೆಲಸವೇ. ಗಾಳಿಯ ದಿಕ್ಕು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಅಷ್ಟೇ.


ಆಫ್ರಿಕಾದ ಕಾಡುಗಳೆಂದರೆ ಅವು ನಮ್ಮ ಬಂಡೀಪುರ-ನಾಗರಹೊಳೆಗಳಂತೆ ದಟ್ಟವಾಗಿರುವುದಿಲ್ಲ. ಹಾಗಾಗಿ ಅಲ್ಲಿನ ಅರಣ್ಯಗಳ ಮೇಲೆ ಹಾರಾಡುವುದೊಂದು ವಿಶೇಷ ಅನುಭವ. ಬಲೂನು ನೆಲ ಬಿಟ್ಟು ಮೇಲೆದ್ದ ಕೆಲವೇ ಕ್ಷಣಗಳಲ್ಲಿ ವಿಲ್ಡೆಬೀಸ್ಟ್, ಜೀಬ್ರಾ, ಗೆಜೆಲ್‌, ಕಾಡೆಮ್ಮೆ ಮುಂತಾದ ಪ್ರಾಣಿಗಳ ಹಿಂಡುಗಳೇ ನಮಗೆ ಕಾಣಲು ದೊರೆತವು. ಕತ್ತೆಕಿರುಬ, ಜಿರಾಫೆ, ಆಸ್ಟ್ರಿಚ್, ಆನೆಗಳೂ ಕಂಡವು. ಹೈವೇಗಳಲ್ಲಿ ಸಾಗುವ ಕಾರುಗಳಂತೆ ಒಂದರ ಹಿಂದೊಂದು ವೇಗವಾಗಿ ಓಡುತ್ತಿದ್ದ ವಿಲ್ಡೆಬೀಸ್ಟ್‌ಗಳ ಸಾಲನ್ನು ನೋಡಿದ್ದಂತೂ ಮರೆಯಲಾಗದ ಅನುಭವ. ಮುಂದೆ ದೂರದಲ್ಲಿ ಕಾಣುತ್ತಿದ್ದ ಪ್ರದೇಶದತ್ತ ಕೈತೋರಿದ ನಮ್ಮ ಪೈಲಟ್ ಅದೇ ತಾಂಜಾನಿಯಾ ದೇಶ ಎಂದೂ ಹೇಳಿದರು.


ಪಯಣ ಮುಂದುವರೆದಂತೆ ಕಾಡಿನೊಳಗೆ ಹಾಗೂ ಅದರ ಸುತ್ತಮುತ್ತ ಮನುಷ್ಯರ ಹಸ್ತಕ್ಷೇಪ ಯಾವ ಪ್ರಮಾಣದಲ್ಲಿದೆ ಎನ್ನುವುದೂ ನಮ್ಮ ಗಮನಕ್ಕೆ ಬಂತು. ಕಾಡಿನೊಳಗೆ ಎಲ್ಲೆಂದರಲ್ಲಿ ಸಂಚರಿಸುವ ಸಫಾರಿ ಜೀಪುಗಳು (ಹಾಗೂ ಅದರೊಳಗಿನ - ನಮ್ಮಂಥವರೇ - ಪ್ರವಾಸಿಗರು), ಕಾಡಿನ ಸುತ್ತಲೂ ಇರುವ ಸಾವಿರಾರು ಜನಗಳು-ದನಗಳು ಅಲ್ಲಿನ ವನ್ಯಜೀವನಕ್ಕೆ ಕೊಡುತ್ತಿರುವ ತೊಂದರೆ ಅಷ್ಟಿಷ್ಟಲ್ಲ!

ಇಷ್ಟೆಲ್ಲ ಗಮನಿಸಿ ಕೆಲ ಚಿತ್ರಗಳನ್ನೂ ಕ್ಲಿಕ್ಕಿಸಿಕೊಳ್ಳುವಷ್ಟರಲ್ಲಿ ಪ್ರಯಾಣ ಮುಕ್ತಾಯದ ಹಂತಕ್ಕೆ ಬಂದಿತ್ತು. ನಮ್ಮ ಪೈಲಟ್ ಅದರೊಳಗಿನ ಗಾಳಿಯನ್ನು, ಅದರ ತಾಪಮಾನವನ್ನು ನಿಧಾನಕ್ಕೆ ಕಡಿಮೆಮಾಡುತ್ತ ಬಂದರು.


ಬಲೂನು ಹಾರಾಡುತ್ತಿರುವಾಗ ಪ್ರಯಾಣಿಕರೆಲ್ಲ ನಿಂತಿರಬಹುದಾದರೂ ಅದು ಇಳಿಯುವಾಗ ಬುಟ್ಟಿಯೊಳಗಿನ ಆಧಾರಗಳನ್ನು ಭದ್ರವಾಗಿ ಹಿಡಿದುಕೊಂಡು ಕುಳಿತುಕೊಳ್ಳಬೇಕಾದ್ದು ಕಡ್ಡಾಯ. ಹೀಗೆ ನಾವೆಲ್ಲ ಕುಳಿತ ಕೆಲವೇ ಕ್ಷಣಗಳಲ್ಲಿ ಬಲೂನು ಕೊಂಚ ಒರಟಾಗಿಯೇ ಭೂಸ್ಪರ್ಶ ಮಾಡಿತು, ಮುಂದಿನ ನಿಮಿಷದೊಳಗೆ ನಾವು ಕುಳಿತಿದ್ದ ಬುಟ್ಟಿ ಮತ್ತೆ ಒಂದುಬದಿಗೆ ಮಗುಚಿಕೊಂಡಿತು.

ಪ್ರಯಾಣದ ನೆನಪಿಗೆ ಪ್ರಮಾಣಪತ್ರ
ನಾವು ಬಲೂನಿನಿಂದ ಹೊರಬರುವಷ್ಟರಲ್ಲೇ ಅಲ್ಲಿಗೆ ತಲುಪಿದ್ದ ಪ್ರವಾಸ ಸಂಸ್ಥೆಯ ತಂಡದವರು ಕೆಲವೇ ನಿಮಿಷಗಳಲ್ಲಿ ಬಲೂನನ್ನು ಮಡಚಿ ಲಾರಿಯೊಳಗೆ ತುಂಬಿದ್ದು ವಿಶೇಷ. ಅಲ್ಲಿಗೆ ಬಂದಿದ್ದ ಜೀಪುಗಳಲ್ಲಿ ಹೊರಟವರಿಗೆ ಕೊಂಚವೇ ದೂರದಲ್ಲಿ - ಕಾಡಿನೊಳಗೇ - ಬೆಳಗಿನ ಉಪಾಹಾರ ಏರ್ಪಡಿಸಲಾಗಿತ್ತು. ಅದನ್ನು ಮುಗಿಸಿ, ದಾರಿಯಲ್ಲಿ ಇನ್ನಷ್ಟು ಪ್ರಾಣಿಗಳನ್ನು ನೋಡಿಕೊಂಡು ಹೋಟಲಿಗೆ ಮರಳುವಷ್ಟರಲ್ಲಿ ಕ್ಯಾಮೆರಾದ ಮೆಮೊರಿ ಕಾರ್ಡು, ನಮ್ಮ ನೆನಪಿನ ಬುತ್ತಿ ಎರಡೂ ಭರ್ತಿಯಾಗಿತ್ತು!


[ಡಿಸೆಂಬರ್ ೯, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ. ಮೊದಲು ವಿದೇಶಗಳಲ್ಲಷ್ಟೇ ಪ್ರಚಲಿತದಲ್ಲಿದ್ದ ಈ ಬಗೆಯ ಪ್ರವಾಸಗಳು ಇದೀಗ ಭಾರತದಲ್ಲೂ ಪ್ರಾರಂಭವಾಗಿವೆ.]

You Might Also Like

0 Responses

Popular Posts

Like us on Facebook