ಪುಸ್ತಕಗಳ ನೆಪದಲ್ಲಿ ಬಾಲ್ಯದ ನೆನಪು

10:35 PM


ಬಹಳ ಹಿಂದಿನಿಂದಲೂ ಮೈಸೂರು ಅಪ್ರತಿಮ ಪ್ರಕಾಶನ ಸಂಸ್ಥೆಗಳ ತವರು. ಎಲ್ಲ ಬಗೆಯ ಓದುಗರಿಗೂ ಮೆಚ್ಚುಗೆಯಾಗುವಂತಹ ಕೃತಿಗಳು ಈ ಸಂಸ್ಥೆಗಳಿಂದ ಹೊರಬರುತ್ತಿದ್ದವು ಎನ್ನುವುದಕ್ಕೆ ನಾವು ಚಿಕ್ಕಂದಿನಲ್ಲಿ ಓದುತ್ತಿದ್ದ ಮಕ್ಕಳ ಪುಸ್ತಕಗಳೇ ಸಾಕ್ಷಿ. ಎಂ. ಎಸ್. ರಾಮರಾವ್, ಭಾರತೀಸುತ, ಎಸ್. ಅನಂತನಾರಾಯಣ, ನಾ. ಕಸ್ತೂರಿ ಮುಂತಾದ ಹಿರಿಯ ಲೇಖಕರು ಬರೆದ ಈ ಪುಟ್ಟ ಪುಸ್ತಕಗಳು ಸಾಲುಸಾಲಾಗಿ ನಮ್ಮ ಓದಿನ ಹಸಿವನ್ನು ತಣಿಸುತ್ತಿದ್ದವು.

ಇಂತಹ ಪುಸ್ತಕಗಳ ಪೈಕಿ ಥಟ್ಟನೆ ನೆನಪಾಗುವ ಹೆಸರು ಎಂ. ಎಸ್. ರಾಮರಾಯರು ಬರೆದ, ಡಿ. ವಿ. ಕೆ. ಮೂರ್ತಿಯವರು ಪ್ರಕಟಿಸಿದ 'ನಡಿ ಕುಂಬಳವೇ ಟರ್‍ರಾ ಪುರ್‍ರಾ'! ಜಾಣ ಅಜ್ಜಿಯೊಬ್ಬಳು ತನ್ನನ್ನು ತಿನ್ನಬಯಸುವ ಕಾಡುಪ್ರಾಣಿಗಳಿಗೆ ತನ್ನ ಸಮಯಪ್ರಜ್ಞೆಯಿಂದ ಚಳ್ಳೆಹಣ್ಣು ತಿನ್ನಿಸುವ ಈ ಕತೆ ನಮ್ಮನ್ನು ಬಿದ್ದೂಬಿದ್ದೂ ನಗುವಂತೆ ಮಾಡುತ್ತಿತ್ತು.

ಸುಮಾರು ಐವತ್ತು ವರ್ಷಗಳ ಹಿಂದೆ ಮುದ್ರಣವಾಗಿರಬಹುದಾದ ಈ ಕೃತಿ 2011ರಲ್ಲಿ ಪ್ರಕಟವಾದ ಸಂಕಲನವೊಂದರ ಭಾಗವಾಗಿ ಮತ್ತೆ ಬೆಳಕು ಕಂಡಿತ್ತು ಎನ್ನುವುದು ಇವತ್ತು ನವಕರ್ನಾಟಕ ಪುಸ್ತಕ ಪ್ರದರ್ಶನಕ್ಕೆ ಹೋದಾಗ ಗೊತ್ತಾಯಿತು. ತಕ್ಷಣ ಕೊಂಡುತಂದು ಓದಿದ ಪುಸ್ತಕ ಹಿಂದಿನಷ್ಟೇ ಖುಷಿ ಕೊಟ್ಟಿತು, ಹಿಂದಿನದೆಲ್ಲವನ್ನೂ ನೆನಪಿಸಿತು.

ಇದರ ಜೊತೆ ಕೈಗೆ ಸಿಕ್ಕಿದ ಇನ್ನಷ್ಟು ಹಳೆಯ ಪುಸ್ತಕಗಳನ್ನು, ಅದರೊಳಗಿನ ಹಳೆಯ ಕತೆಗಳನ್ನು ಇನ್ನಷ್ಟೇ ಓದಬೇಕು. ಜಗಜೆಟ್ಟಿ ಜವರಣ್ಣನನ್ನೂ ಕೊಳಲನು ಊದಿದ ಸಂತೋಷಿಯನ್ನೂ ಮತ್ತೆ ನೆನಪಿಸಿಕೊಳ್ಳಬೇಕು. ಅರೆಬರೆ ಮರೆತಂತಾಗಿರುವ ಇನ್ನು ಕೆಲ ಪುಸ್ತಕಗಳೂ ಕೈಗೆ ಸಿಗುವಂತಾಗಲಿ ಎಂದು ಹಾರೈಸಿಕೊಳ್ಳಬೇಕು.

ಅಂದಹಾಗೆ ರೈಲುಸವಾರಿ ಮಾಡಿದ ಪೆದ್ದಚೆನ್ನ ನಿಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು? ☺

You Might Also Like

0 Responses

Popular Posts

Like us on Facebook