ಮುದ್ದು ಇಲಿ ಮಿಕಿಮೌಸ್
12:00 AMಕೆಂಪು ಬಣ್ಣದ ಚೆಡ್ಡಿ, ಹಳದಿ ಬೂಟು, ಬಿಳಿಯ ಕೈಚೀಲ, ದೊಡ್ಡ ಕಿವಿ, ಉದ್ದನೆಯ ಬಾಲ - ಇಷ್ಟು ಹೇಳುತ್ತಿದ್ದಂತೆಯೇ ಮುದ್ದು ಇಲಿ ಮಿಕಿಮೌಸ್ ಚಿತ್ರ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ಮಿಕಿಯ ಚೇಷ್ಟೆಗಳನ್ನೆಲ್ಲ ನೆನಪಿಸಿಕೊಂಡವರ ತುಟಿಯಂಚಿನಲ್ಲೊಂದು ಸುಳಿನಗೆಯೂ ಮೂಡುತ್ತದೆ. ಅಮೆರಿಕಾದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಒಮ್ಮೆ ಹೇಳಿದಂತೆ "ಭಾಷೆ - ಸಂಸ್ಕೃತಿಗಳ ಮಿತಿಗಳನ್ನೆಲ್ಲ ಮೀರಿ ನಿಲ್ಲುವ ಮಿಕಿ, ಸದ್ಭಾವನೆಯ ಪ್ರತೀಕ. ಮಿಕಿಯನ್ನು ನೋಡುವುದೆಂದರೆ ಅದು ಸಂತೋಷವನ್ನೇ ನೋಡಿದಂತೆ!"
ನಿಜ, ಮಿಕಿಮೌಸ್ ಎಂಬ ಪುಟಾಣಿ ಮಾಂತ್ರಿಕ ನಮ್ಮ ಮೇಲೆ ಮಾಡಿರುವ ಮೋಡಿಯೇ ಅಂಥದ್ದು. ಎರಡು ವರ್ಷದ ಮೈತ್ರಿಯಿಂದ ಹಿಡಿದು ಅವರ ತಾತನವರೆಗೆ ಎಲ್ಲರಿಗೂ ಮಿಕಿಮೌಸ್ ಅಚ್ಚುಮೆಚ್ಚು.
ಹೀಗೊಂದು ದಿನ ಮನೆಯಲ್ಲಿ ಎಲ್ಲರೂ ಕುಳಿತು ಟೀವಿ ನೋಡುತ್ತಿದ್ದಾಗ ಯಥಾಪ್ರಕಾರ ಯಾವ ಚಾನೆಲ್ ನೋಡಬೇಕು ಎನ್ನುವ ವಿಷಯದ ಕುರಿತು ಸಣ್ಣದೊಂದು ಚರ್ಚೆ ಶುರುವಾಯಿತು. ಕನ್ನಡ ಸಿನಿಮಾ, ಹಿಂದಿ ಸೀರಿಯಲ್ಲು, ಕ್ರಿಕೆಟ್ ಮ್ಯಾಚು ಎಂದೆಲ್ಲ ವಾದ ನಡೆಯುವಾಗ "ಕಾರ್ಟೂನು!" ಎಂದು ಮಕ್ಕಳ ಡಿಮ್ಯಾಂಡು ಶುರುವಾಯಿತು. ಚೆನ್ನಾಗಿರುವ ಕಾರ್ಟೂನು ಯಾವುದೂ ಬರುತ್ತಿಲ್ಲ ಎಂದು ನಂಬಿಸುವ ಪ್ರಯತ್ನದಲ್ಲಿ ಒಂದೆರಡು ಚಾನೆಲ್ ಬದಲಿಸುವಷ್ಟರಲ್ಲಿ ಒಂದು ಕಡೆ ಮಿಕಿಮೌಸ್ ಕಂಡುಬಿಡುವುದೇ? ಸರಿ, ವಾದವಿವಾದಗಳೆಲ್ಲ ತಣ್ಣಗಾಗಿ ಎಲ್ಲರೂ ಮಿಕಿಮೌಸ್ ನೋಡುವುದರಲ್ಲಿ ಮಗ್ನರಾದರು.
ಕೆಲಹೊತ್ತಿನ ನಂತರ ಆ ಕಾರ್ಯಕ್ರಮ ಮುಗಿದು ಬೇರೆಯದೇನೋ ಶುರುವಾದರೂ ಎಲ್ಲರೂ ಮಿಕಿಮೌಸ್ ಗುಂಗಿನಲ್ಲೇ ಇದ್ದರು ಅನ್ನಿಸುತ್ತದೆ. ಸುಹಾಸನ ಕಡೆಯಿಂದ ಪ್ರಶ್ನೆ ಬಂತು: "ಮಿಕಿಮೌಸ್ ಕಾರ್ಟೂನುಗಳು ಇಷ್ಟೆಲ್ಲ ಚೆನ್ನಾಗಿರುತ್ತವಲ್ಲ, ಇದನ್ನು ರೂಪಿಸಿದ್ದು ಯಾರು?"
ಮೈತ್ರಿಯ ತಾತ ಅಲ್ಲೇ ಇದ್ದರಲ್ಲ, ಅವರು ಹೇಳಿದರು, "ಮಿಕಿ ಮೌಸ್ ಪಾತ್ರ ಸೃಷ್ಟಿಸಿದ್ದು ಖ್ಯಾತ ಕಾರ್ಟೂನ್ ರಚನೆಕಾರ ವಾಲ್ಟ್ ಡಿಸ್ನಿ. ಕಾರ್ಟೂನ್ ಚಿತ್ರಗಳಲ್ಲಿ ಮಿಕಿಮೌಸ್ ಮೊದಲಿಗೆ ಕಾಣಿಸಿಕೊಂಡದ್ದು ೧೯೨೮ರಲ್ಲಿ"
ಸುಹಾಸನಿಗೆ ಆಶ್ಚರ್ಯ, "ಮಿಕಿಮೌಸ್ ಹುಟ್ಟಿ ಅಷ್ಟೊಂದು ವರ್ಷ ಆಗಿದೆಯಾ?"
ತಾತ ಹೇಳಿದರು, "ಹೌದು, ಮಿಕಿ ಮೊದಲಸಲ ಕಾಣಿಸಿಕೊಂಡಿದ್ದು ೧೯೨೮ರ ನವೆಂಬರ್‌ನಲ್ಲಿ ತೆರೆಕಂಡ ಸ್ಟೀಮ್‌ಬೋಟ್ ವಿಲ್ಲಿ ಎನ್ನುವ ಕಾರ್ಟೂನ್ ಚಿತ್ರದಲ್ಲಿ. ಈ ಚಿತ್ರಕ್ಕೂ ಮೊದಲು ಪ್ಲೇನ್ ಕ್ರೇಜಿ ಹಾಗೂ ದ ಗ್ಯಾಲಪಿನ್' ಗೌಚೋ ಎನ್ನುವ ಎರಡು ಚಿತ್ರಗಳಲ್ಲಿ ಮಿಕಿ ಕಾಣಿಸಿಕೊಂಡಿತ್ತಾದರೂ ಅವು ಸಾರ್ವಜನಿಕವಾಗಿ ಬಿಡುಗಡೆಯಾಗಿರಲಿಲ್ಲ"
ಸುಹಾಸನ ಜೊತೆಗೆ ಆದಿತ್ಯನೂ ಅಲ್ಲೇ ಇದ್ದನಲ್ಲ. ಅವನು ಸುಹಾಸನ ತಮ್ಮನಾದರೂ ಪ್ರಶ್ನೆ ಕೇಳುವುದರಲ್ಲಿ ಅಣ್ಣನನ್ನೂ ಮೀರಿಸಿದವನಲ್ಲವೇ, ಕೇಳಿಯೇಬಿಟ್ಟ, "ತಾತ, ಕಾರ್ಟೂನಿನಲ್ಲಿ ಇಲಿಯನ್ನೇ ಉಪಯೋಗಿಸಬೇಕು ಅಂತ ಡಿಸ್ನಿಗೆ ಐಡಿಯಾ ಹೇಗೆ ಬಂತು?"
"ಹೇಗೂ ಇಂಟರ್‌ನೆಟ್ ಬಳಸಲು ಕಲಿತಿದ್ದೀಯಲ್ಲ, ಮಿಕಿಮೌಸ್ ಕತೆ ನೀನೇ ಹುಡುಕಿಕೊಂಡು ಓದು ನೋಡೋಣ. ಆಮೇಲೆ ನಮಗೂ ಹೇಳುವೆಯಂತೆ," ತಾತ ಹೇಳಿದರು.
ಸರಿ, ಸುಹಾಸ - ಆದಿತ್ಯ ಇಬ್ಬರೂ ಟ್ಯಾಬ್ಲೆಟ್ ತೆರೆದು ಮಿಕಿ ಬಗ್ಗೆ ಮಾಹಿತಿ ಹುಡುಕಲು ಶುರುಮಾಡಿದರು. ಒಂದುಕಡೆ ಸಿಕ್ಕ ಮಾಹಿತಿ ಹೀಗಿತ್ತು:
ಮಿಕಿಮೌಸ್‌ಗಿಂತ ಮೊದಲು ವಾಲ್ಟ್ ಡಿಸ್ನಿ 'ಓಸ್ವಾಲ್ಡ್ ದಿ ಲಕಿ ರ್‍ಯಾಬಿಟ್' ಎನ್ನುವ ಕಾರ್ಟೂನ್ ಪಾತ್ರವನ್ನು ಸೃಷ್ಟಿಸಿದ್ದ. ಆದರೆ ಯಾವುದೋ ಮನಸ್ತಾಪದ ಹಿನ್ನೆಲೆಯಲ್ಲಿ ಆ ಕಾರ್ಟೂನ್ ಸರಣಿಯ ನಿರ್ಮಾಪಕರು ಅದರ ಹಕ್ಕುಗಳನ್ನೆಲ್ಲ ಡಿಸ್ನಿಯಿಂದ ಹಿಂದಕ್ಕೆ ಪಡೆದುಕೊಂಡುಬಿಟ್ಟರು. ಓಸ್ವಾಲ್ಡ್ ಬದಲಿಗೆ ಯಾವ ಪಾತ್ರವನ್ನು ಸೃಷ್ಟಿಸಬಹುದು ಎಂದು ಯೋಚಿಸುತ್ತಿದ್ದ ಡಿಸ್ನಿ ಕುದುರೆ, ಹಸು ಮುಂತಾದ ಹಲವು ಪ್ರಾಣಿಗಳ ಯೋಚನೆ ಬಂದರೂ ಅವು ಯಾವುವೂ ಅವನಿಗೆ ಪೂರ್ತಿ ಸಮಾಧಾನ ತಂದುಕೊಡಲಿಲ್ಲ (ಹೀಗೆ ರೂಪುಗೊಂಡಿದ್ದ ಹಸುವಿನ ಪಾತ್ರ ಕ್ಲಾರಾಬೆಲ್ ಕೌ ಎಂದು, ಕುದುರೆಯ ಪಾತ್ರ ಹೊರೇಸ್ ಹಾರ್ಸ್‌ಕಾಲರ್ ಎಂದು ಮುಂದಿನ ಕಾರ್ಟೂನುಗಳಲ್ಲಿ ಕಾಣಿಸಿಕೊಂಡವು). ಕೊನೆಗೊಂದು ದಿನ ಪುಟಾಣಿ ಇಲಿಯನ್ನು ಸೃಷ್ಟಿಸಿದರೆ ಹೇಗೆ ಎಂದು ಯೋಚಿಸಿದಾಗ ರೂಪುಗೊಂಡದ್ದೇ ಮಿಕಿ.
ಮಿಕಿ ರೂಪುಗೊಂಡಾಗ ಅದಕ್ಕೆ 'ಮಾರ್ಟಿಮರ್ ಮೌಸ್' ಎಂದು ಹೆಸರಿಡಬೇಕೆಂದು ಡಿಸ್ನಿ ಬಯಸಿದ್ದ. ಆದರೆ ಆ ಹೆಸರು ಆತನ ಪತ್ನಿಗೆ ಇಷ್ಟವಾಗಲಿಲ್ಲ. ಆಕೆ 'ಮಾರ್ಟಿಮರ್' ಬದಲಿಗೆ 'ಮಿಕಿ' ಎನ್ನುವ ಹೆಸರೇ ಚೆನ್ನಾಗಿರುತ್ತದೆ ಎಂದು ಹೇಳಿದಮೇಲೆ ಡಿಸ್ನಿ ಆ ಹೆಸರನ್ನೇ ಅಂತಿಮಗೊಳಿಸಿದ.
ಮಿಕಿಯ ಕಾರ್ಟೂನುಗಳನ್ನು ರೂಪಿಸುವಲ್ಲಿ ಡಿಸ್ನಿಯ ಜೊತೆಗಿದ್ದದ್ದು ಉಬ್ ಇವರ್ಕ್ಸ್. ಮೂಕಿ ಚಿತ್ರಗಳ ಕಾಲ ಹೋಗಿ ಚಲನಚಿತ್ರಗಳಿಗೆ ಧ್ವನಿಯೂ ಸೇರಿಕೊಂಡಾಗ ಕೆಲಸಮಯ ಸ್ವತಃ ಡಿಸ್ನಿಯೇ ಮಿಕಿಯ ಧ್ವನಿಯಾಗಿದ್ದದ್ದುಂಟು. ನಂತರದ ದಿನಗಳಲ್ಲಿ ಈ ಜವಾಬ್ದಾರಿ ಜಿಮ್ಮಿ ಮೆಕ್‌ಡೊನಾಲ್ಡ್, ವೇಯ್ನ್ ಆಲ್‌ಬ್ರೈಟ್ ಹಾಗೂ ಬ್ರೆಟ್ ಇವಾನ್‌ರ ಪಾಲಿಗೆ ಬಂತು.
ಮಿಕಿಯ ಜನಪ್ರಿಯತೆ ಹೆಚ್ಚಿದಂತೆ ಕಾರ್ಟೂನ್ ಚಿತ್ರಗಳಲ್ಲಿ ಆತನ ಜತೆಗಾರರಾಗಿ ಡೊನಾಲ್ಡ್ ಡಕ್, ಗೂಫಿ ಮುಂತಾದ ಪಾತ್ರಗಳೂ ಹುಟ್ಟಿಕೊಂಡವು. ಹಾಗೆಯೇ ಮಿಕಿಯ ಗೆಳತಿಯಾಗಿ ಮಿನ್ನಿಮೌಸ್, ಕುಟುಂಬದ ಸದಸ್ಯರಾಗಿ ಮಾರ್ಟಿ ಹಾಗೂ ಫೆರ್ಡಿ ಮತ್ತು ನೆಚ್ಚಿನ ನಾಯಿಯಾಗಿ ಪ್ಲೂಟೋ ಕೂಡ ಸೇರ್ಪಡೆಯಾದವು.
ಮಿಕಿ ಕಾರ್ಟೂನುಗಳು ಪತ್ರಿಕೆಗಳಲ್ಲೂ ಕಾಣಿಸಿಕೊಳ್ಳಲು ಶುರುವಾದದ್ದು ೧೯೩೦ರಲ್ಲಿ. ಅದೇ ವರ್ಷ ಮಿಕಿಯ ಮೊದಲ ಕಾಮಿಕ್ ಪುಸ್ತಕ 'ಲಾಸ್ಟ್ ಆನ್ ಎ ಡೆಸರ್ಟ್ ಐಲೆಂಡ್' ಕೂಡ ಪ್ರಕಟವಾಯಿತು. ಮಿಕಿ ಪಾತ್ರವಿದ್ದ ಟೀವಿ ಕಾರ್ಯಕ್ರಮಗಳೂ ಪ್ರಾರಂಭವಾದವು. ಮಿಕಿ ಆಟಿಕೆಗಳು, ವೀಡಿಯೋ ಗೇಮ್‌ಗಳು, ಗಡಿಯಾರಗಳೂ ಬಂದವು. ವಿವಿಧೆಡೆಗಳಲ್ಲಿ ಡಿಸ್ನಿಲ್ಯಾಂಡ್ ಪ್ರಾರಂಭವಾದಾಗ, ಸಹಜವಾಗಿಯೇ, ಮಿಕಿಗೆ ಪ್ರಮುಖ ಸ್ಥಾನ ದೊರಕಿತು.
ಇಷ್ಟೆಲ್ಲ ಜನಪ್ರಿಯತೆಯಿಂದಾಗಿ ವಾಲ್ಟ್ ಡಿಸ್ನಿಯ ಸಂಸ್ಥೆಯನ್ನು ಜನ ಮುಖ್ಯವಾಗಿ ಮಿಕಿಮೌಸ್‌ನಿಂದಲೇ ಗುರುತಿಸಲು ಪ್ರಾರಂಭಿಸಿದರು. ಹಾಗಾಗಿ ಡಿಸ್ನಿ ಸಂಸ್ಥೆ ಹಲವು ಸಂದರ್ಭಗಳಲ್ಲಿ (ಉದಾ: ಡಿಸ್ನಿ ಚಾನೆಲ್) ಮಿಕಿಯ ಮುಖದ ಆಕಾರವನ್ನೇ ತನ್ನ ಲಾಂಛನವಾಗಿ ಬಳಸಿತು.
ಮಿಕಿಗೆ ದೊರೆತ ಪ್ರಶಸ್ತಿಗಳೂ ಅನೇಕ. ಮಿಕಿ ಮೌಸ್‌ನಂತಹ ಅಪೂರ್ವ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ ೧೯೩೨ರಲ್ಲಿ ವಾಲ್ಟ್ ಡಿಸ್ನಿಗೆ ವಿಶೇಷ ಆಸ್ಕರ್ ಪ್ರಶಸ್ತಿ ಕೂಡ ದೊರಕಿತು.
ಇಷ್ಟು ಓದುವಷ್ಟರಲ್ಲಿ ತಾತ "ಇನ್ನೊಂದು ಚಾನಲ್ಲಿನಲ್ಲಿ ಡೊನಾಲ್ಡ್ ಡಕ್ ಕಾರ್ಟೂನು ಬರುತ್ತಿದೆ ನೋಡ್ತೀರಾ" ಅಂತ ಕೇಳಿದರು. ಅಷ್ಟು ಕೇಳಿಸಿದ್ದೇ ತಡ, ಆದಿತ್ಯ ಸುಹಾಸನನ್ನೂ ಕರೆದುಕೊಂಡು ಟೀವಿಯ ಕಡೆಗೆ ಓಡಿದ!
(ವಿಜಯವಾಣಿ ಪತ್ರಿಕೆಗಾಗಿ ೨೦೧೪ರಲ್ಲಿ ಬರೆದಿದ್ದು)
0 Responses