ಪುಸ್ತಕ ಸಂಖ್ಯೆ ಹತ್ತು, ಇನ್ನೇನು ಬರುವ ಹೊತ್ತು!

10:57 PM

ಬರುವ ಸೆಪ್ಟೆಂಬರ್ ೨೨ರ ಭಾನುವಾರ ಬೆಳಿಗ್ಗೆ ನನ್ನ ಹತ್ತನೆಯ ಪುಸ್ತಕದ ಬಿಡುಗಡೆ. ಪುಸ್ತಕದ ಹೆಸರು: 'ಕ್ಲಿಕ್ ಮಾಡಿ ನೋಡಿ!', ಡಿಜಿಟಲ್ ಫೋಟೋಗ್ರಫಿ ಕುರಿತ ಪುಸ್ತಕ ಇದು.

ನವಕರ್ನಾಟಕ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿ ಛಾಯಾಗ್ರಹಣ ನಡೆದುಬಂದ ದಾರಿಯ ಪರಿಚಯದಿಂದ ಡಿಜಿಟಲ್ ಕ್ಯಾಮೆರಾ ತಂತ್ರಜ್ಞಾನದ ಪಕ್ಷಿನೋಟದವರೆಗೆ, ಛಾಯಾಗ್ರಹಣಕ್ಕೆ ಸಂಬಂಧಪಟ್ಟ ಪರಿಕಲ್ಪನೆಗಳ ಪರಿಚಯದಿಂದ ಕ್ಯಾಮೆರಾ ಕೊಳ್ಳುವಾಗ ನೆನಪಿಟ್ಟುಕೊಳ್ಳಬೇಕಾದ ಅಂಶಗಳವರೆಗೆ ಅನೇಕ ವಿಷಯಗಳತ್ತ ಗಮನಹರಿಸುತ್ತದೆ. ಫೋಟೋ ಎಡಿಟಿಂಗ್ ಸುಲಭಸೂತ್ರಗಳು, ಮೆಮೊರಿ ಕಾರ್ಡ್ ಕೈಕೊಟ್ಟಾಗ ನಮ್ಮ ಚಿತ್ರಗಳನ್ನು ಮರಳಿ ಪಡೆಯಲು ಅನುಸರಿಸಬೇಕಾದ ಕ್ರಮಗಳು, ಛಾಯಾಗ್ರಹಣದ ಅನೇಕ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸುವ ಉದಾಹರಣೆಗಳು - ಹೀಗೆ ಇನ್ನೂ ಹಲವಾರು ಅಂಶಗಳು ಈ ಕೃತಿಯಲ್ಲಿವೆ. ವಿವಿಧ ಬಗೆಯ ಕ್ಯಾಮೆರಾಗಳಷ್ಟೇ ಅಲ್ಲದೆ ಎಚ್‌ಡಿ, ಥ್ರೀಡಿ ಮುಂತಾದ ತಂತ್ರಜ್ಞಾನಗಳನ್ನೂ ಈ ಕೃತಿ ಪರಿಚಯಿಸುತ್ತದೆ. ದೊಡ್ಡಗಾತ್ರದ (೧/೪ ಡೆಮಿ) ಈ ಕೃತಿಯ ಎಲ್ಲ ಪುಟಗಳೂ ಬಹುವರ್ಣದಲ್ಲಿ ಮುದ್ರಿತವಾಗಿವೆ.

ಪುಸ್ತಕ ಬಿಡುಗಡೆಯ ಬಗ್ಗೆ ಹೇಳಲೇಬೇಕಾದ ಅಂಶಗಳು ಹಲವಾರು. ಮೊದಲನೆಯದಾಗಿ ನನ್ನ ತಂದೆ ಶ್ರೀ ಟಿ. ಎಸ್. ಗೋಪಾಲ್ ಅವರ 'ಕಾಡು ಕಲಿಸುವ ಪಾಠ' ಕೃತಿಯೂ ಅದೇ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುತ್ತಿದೆ ಎನ್ನುವುದು ಅತ್ಯಂತ ಸಂಭ್ರಮದ ವಿಷಯ. ಇಷ್ಟರಮೇಲೆ ಕೃತಿಗಳನ್ನು ಅನಾವರಣ ಮಾಡುತ್ತಿರುವವರು ನನ್ನ ಅಚ್ಚುಮೆಚ್ಚಿನ ಶ್ರೀ ನಾಗೇಶ ಹೆಗಡೆಯವರು. ಇನ್ನೂ ಖುಷಿ ಎಂದರೆ 'ಕಾಡಿನೊಳಗೊಂದು ಜೀವ' ಶ್ರೀ ಕೆ. ಎಂ. ಚಿಣ್ಣಪ್ಪನವರು ಅಂದಿನ ಮುಖ್ಯ ಅತಿಥಿ. ಜೊತೆಗೆ ನಾನು ಗೌರವಿಸುವ ಹಿರಿಯ ವಿಜ್ಞಾನ ಸಂವಹನಕಾರರಾದ ಶ್ರೀ ಟಿ. ಆರ್. ಅನಂತರಾಮು ಹಾಗೂ ಡಾ. ಬಿ. ಎಸ್. ಶೈಲಜಾ ಅವರೂ ಆ ದಿನ ವೇದಿಕೆಯಲ್ಲಿರುತ್ತಾರೆ: ಅವರ ಪುಸ್ತಕಗಳೂ ಅಂದು ಬಿಡುಗಡೆಯಾಗುತ್ತಿವೆ.

ಇಷ್ಟೆಲ್ಲ ಖುಷಿಗೆ ಕಾರಣರಾದವರು ನವಕರ್ನಾಟಕದ ಹಿರಿಯರಾದ ಶ್ರೀ ಆರ್. ಎಸ್. ರಾಜಾರಾಮ್ ಅವರು. ಅವರಿಗೆ, ಶ್ರೀ ಉಡುಪ ಅವರಿಗೆ ಹಾಗೂ ನವಕರ್ನಾಟಕ ಕುಟುಂಬದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಸೆಪ್ಟೆಂಬರ್ ೨೨ರ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಜೆ. ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಕಾರ್ಯಕ್ರಮ. ದಯವಿಟ್ಟು ಬನ್ನಿ.


You Might Also Like

0 Responses

Popular Posts

Like us on Facebook