ಆರ್‌ಬಿಐ ಮಾನೆಟರಿ ಮ್ಯೂಸಿಯಂ: ಹಣದ ವಿಶ್ವರೂಪದರ್ಶನ

10:57 AM

ಟಿ. ಜಿ. ಶ್ರೀನಿಧಿ

ಹಣ, ಯಾವುದೇ ಸಂಸ್ಕೃತಿಯ ಅವಿಭಾಜ್ಯ ಅಂಗ. ಅರ್ಧಮೂಟೆ ಜೋಳ ಕೊಟ್ಟು ಒಂದು ಡಜನ್ ತೆಂಗಿನಕಾಯಿ ತರುತ್ತಿದ್ದ ವಿನಿಮಯ ವ್ಯವಸ್ಥೆಯ (ಬಾರ್ಟರ್) ಕಾಲದಿಂದ ಇಂದಿನ ಕ್ರೆಡಿಟ್ ಕಾರ್ಡುಗಳವರೆಗೆ ಹಣದ ಪರಿಕಲ್ಪನೆ ಬದಲಾಗಿರುವ ರೀತಿ ಅನನ್ಯವಾದದ್ದು. ನಾಗರಿಕತೆಯ ವಿಕಾಸದೊಡನೆ ಹಣದ ಸ್ವರೂಪ ಬದಲಾಗುತ್ತ ಬಂದ ರೀತಿಯನ್ನು ಗಮನಿಸಿದರೆ ಅದು ಕಾಲಕೋಶದಲ್ಲಿ ಕುಳಿತು ಭೂತಕಾಲಕ್ಕೆ ಹೋಗಿಬಂದಂಥ ಅನುಭವವನ್ನೇ ನೀಡುತ್ತದೆ.

ಆದರೆ ಇಂತಹ ಅನುಭವ ಪಡೆಯುವುದಾದರೂ ಹೇಗೆ ಎಂದು ನೀವು ಕೇಳಬಹುದು. ಅರ್ಥಶಾಸ್ತ್ರದ ತಜ್ಞರಿಗೆ, ಬ್ಯಾಂಕಿಂಗ್ ಕ್ಷೇತ್ರದ ವಿಶೇಷಜ್ಞರಿಗೆ ಈ ಮಾಹಿತಿಯೆಲ್ಲ ಸಿಗಬಹುದು, ಆದರೆ ನಮ್ಮಂತಹವರು ಏನು ಮಾಡಬೇಕು? ಹಣದ ವಿಕಾಸವನ್ನು ನಮ್ಮಂತಹ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವ ಆಕರ್ಷಕ ಶೈಲಿಯಲ್ಲಿ ನಿರೂಪಿಸಿರುವ ಸಂಗ್ರಹಾಲಯವೊಂದು ನಮ್ಮ ದೇಶದಲ್ಲೇ ಇದೆ. ಅಷ್ಟೇ ಅಲ್ಲ, ಆ ಸಂಗ್ರಹಾಲಯಕ್ಕೆ ಯಾವ ಪ್ರವೇಶ ಶುಲ್ಕವೂ ಇಲ್ಲ!

ಭಾರತದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇಂತಹ ಅಪೂರ್ವ ಸಂಗ್ರಹಾಲಯವೊಂದನ್ನು ರೂಪಿಸಿರುವ ಸಾಧನೆ ಭಾರತೀಯ ರಿಸರ್ವ್ ಬ್ಯಾಂಕಿನದು. ಅಲ್ಲಿನ ಫೋರ್ಟ್ ಪ್ರದೇಶದಲ್ಲಿ, ರಿಸರ್ವ್ ಬ್ಯಾಂಕ್ ಮುಖ್ಯ ಕಟ್ಟಡದ ಸಮೀಪದಲ್ಲೇ ಇರುವ ಈ ಸಂಗ್ರಹಾಲಯವೇ 'ಆರ್‌ಬಿಐ ಮಾನೆಟರಿ ಮ್ಯೂಸಿಯಂ'.

ಮ್ಯೂಸಿಯಂ ಎಲ್ಲಿದೆ?
ರಿಸರ್ವ್ ಬ್ಯಾಂಕ್ ಮುಖ್ಯ ಕಟ್ಟಡದ ಸಮೀಪ, ಫೋರ್ಟ್, ಮುಂಬಯಿ
ಪ್ರವೇಶ ಯಾವಾಗ?
ಮಂಗಳವಾರದಿಂದ ಭಾನುವಾರ, ಬೆಳಿಗ್ಗೆ ೧೦:೪೫ರಿಂದ ಸಂಜೆ ೫:೧೫
ಸೋಮವಾರ ಹಾಗೂ ಬ್ಯಾಂಕ್ ರಜಾದಿನಗಳಂದು ತೆರೆದಿರುವುದಿಲ್ಲ
ಪ್ರವೇಶ ಉಚಿತ
ಮಾನವನ ಇತಿಹಾಸದಲ್ಲಿ ಹಣದ ಪರಿಕಲ್ಪನೆ ವಿಕಾಸವಾದ ಬಗೆಯನ್ನು ಈ ಸಂಗ್ರಹಾಲಯ ಅನೇಕ ಉದಾಹರಣೆಗಳೊಡನೆ ವಿವರಿಸುತ್ತದೆ. ಅಷ್ಟೇ ಅಲ್ಲ, ವಿಭಿನ್ನ ಕಾಲಘಟ್ಟಗಳಲ್ಲಿ ವಿಶ್ವದ ವಿವಿಧೆಡೆ ಚಾಲ್ತಿಯಲ್ಲಿದ್ದ ಹಣದ ಉದಾಹರಣೆಗಳೂ ಇಲ್ಲಿವೆ - ಕ್ರಿ.ಶ. ೧ನೇ ಶತಮಾನದಷ್ಟು ಹಿಂದೆ ಇಂದಿನ ಕರ್ನಾಟಕ-ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಬಳಕೆಯಲ್ಲಿದ್ದ ಸೀಸದ ನಾಣ್ಯಗಳಿಂದ ೧೬ನೇ ಶತಮಾನದ ಸುಮಾರಿನಲ್ಲಿ ಆಗ್ನೇಯ ಏಷ್ಯಾದಲ್ಲಿ ಬಳಸಲಾಗುತ್ತಿದ್ದ ಕಡಗದ ರೂಪದ ಹಣದವರೆಗೆ ಹಣದ ವಿಶ್ವರೂಪವೇ ಇಲ್ಲಿ ಪ್ರದರ್ಶಿತವಾಗಿದೆ. ಕ್ರಿ.ಪೂ. ೬ನೇ ಶತಮಾನದಲ್ಲಿ ಚಲಾವಣೆಯಲ್ಲಿದ್ದ ಕೆಲ ನಾಣ್ಯಗಳೂ ಇಲ್ಲಿರುವುದು ವಿಶೇಷ.

ವಿಜಯನಗರ ಸೇರಿದಂತೆ ಹಲವಾರು ಭಾರತೀಯ ಸಂಸ್ಥಾನಗಳ ನಾಣ್ಯಪರಂಪರೆ, ಹೊರಗಿನಿಂದ ಬಂದು ಭಾರತದ ಮೇಲೆ ಅಧಿಕಾರ ಸ್ಥಾಪಿಸಿದವರು ಹೊರತಂದ ನಾಣ್ಯಗಳು, ಸ್ವಾತಂತ್ರ್ಯಾನಂತರ ಭಾರತದಲ್ಲಿ ಬಳಕೆಯಾದ-ಆಗುತ್ತಿರುವ ನಾಣ್ಯಗಳ ವಿಸ್ತೃತ ಪರಿಚಯ ಅರ್ಥಶಾಸ್ತ್ರದ ಜೊತೆಗೆ ಇತಿಹಾಸದ ಪಾಠವನ್ನೂ ಹೇಳುತ್ತದೆ. ವಿವಿಧ ಸಂದರ್ಭಗಳ ಸ್ಮರಣಾರ್ಥ ರಿಸರ್ವ್ ಬ್ಯಾಂಕ್ ಹೊರತಂದಿರುವ ನಾಣ್ಯಗಳ ಸಂಗ್ರಹ ಕೂಡ ಇಲ್ಲಿದೆ.

ನಾಣ್ಯಗಳಷ್ಟೇ ಅಲ್ಲ, ಇಲ್ಲಿ ನಮಗೆ ಕಾಗದರೂಪದ ಹಣದ ಪರಿಚಯವೂ ಆಗುತ್ತದೆ. ಕಾಗದರೂಪವೆಂದರೆ ನೋಟುಗಳಷ್ಟೇ ಅಲ್ಲ: ಪ್ರಾಮಿಸರಿ ನೋಟ್, ಬಿಲ್ ಆಫ್ ಎಕ್ಸ್‌ಚೇಂಜ್, ಹುಂಡಿ, ಚೆಕ್ ಮುಂತಾದ ಹಲವು ಮಾಧ್ಯಮಗಳ ಕುರಿತ ವಿವರಣೆ ಹಾಗೂ ಅದರ ಹಲವು ಮಾದರಿಗಳನ್ನು ಈ ಸಂಗ್ರಹಾಲಯ ನಮ್ಮ ಮುಂದಿಡುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್, ಪೋರ್ಚುಗೀಸ್ ಹಾಗೂ ನಿಜಾಮನ ಆಳ್ವಿಕೆಯ ಪ್ರದೇಶಗಳಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ದರ್ಶನ ಕೂಡ ಆಗುತ್ತದೆ. ಆ ಪೈಕಿ ಅನೇಕ ನೋಟುಗಳಲ್ಲಿ ಕನ್ನಡ (ಹಾಗೂ ಹಿಂದಿ ಹೊರತುಪಡಿಸಿ ಇನ್ನಿತರ ಭಾರತೀಯ ಭಾಷೆಗಳ) ಅಕ್ಷರಗಳಿಗಿದ್ದ ಸ್ಥಾನ ಇಂದಿನ ನೋಟುಗಳಲ್ಲಿರುವುದಕ್ಕಿಂತ ಉತ್ತಮವಾಗಿತ್ತು ಎನ್ನುವುದು ಗಮನಾರ್ಹ.

ಸ್ವಾತಂತ್ರ್ಯಾನಂತರದ ಮೊದಲ ನೋಟುಗಳಿಂದ ಇಂದಿನವರೆಗೆ ಚಲಾವಣೆಗೆ ಬಂದಿರುವ ಎಲ್ಲ ನೋಟುಗಳ ಪರಿಚಯ ಕೂಡ ಇಲ್ಲಿದೆ. ಕಪ್ಪುಹಣ ತಡೆಯುವ ಉದ್ದೇಶದಿಂದ ನೂರು ರೂಪಾಯಿಗಿಂತ ಹೆಚ್ಚಿನ ಮುಖಬೆಲೆಯ (ಸಾವಿರ, ಐದುಸಾವಿರ ಹಾಗೂ ಹತ್ತುಸಾವಿರ) ಎಲ್ಲ ನೋಟುಗಳನ್ನೂ ಚಲಾವಣೆಯಿಂದ ಹಿಂದಕ್ಕೆ ಪಡೆದ ಸನ್ನಿವೇಶದ ವಿವರಣೆಯನ್ನೂ ಇಲ್ಲಿ ನೋಡಬಹುದು. ಸದ್ಯದ ವ್ಯವಸ್ಥೆಯಲ್ಲಿ ಹಳೆಯ, ಹರಿದ ನೋಟುಗಳ ನಿರ್ವಹಣೆಯ ಬಗೆಗೂ ಇಲ್ಲಿ ಮಾಹಿತಿಯಿದೆ. ನೋಟಿನ ಚೂರುಗಳಿಂದ ಮಾಡಿದ ಪೇಪರ್ ವೇಟ್, ಟ್ರೇ ಇತ್ಯಾದಿಗಳನ್ನೂ ಇಲ್ಲಿ ನೋಡಬಹುದು!

ನಾಣ್ಯಗಳು-ನೋಟುಗಳು ಪ್ರದರ್ಶಿತವಾಗಿದೆ ಎಂದಮಾತ್ರಕ್ಕೆ ಇದು ಸಾಮಾನ್ಯ ಸಂಗ್ರಹಾಲಯವೆಂದೇನೂ ಭಾವಿಸಬೇಕಿಲ್ಲ. ಈ ಸಂಗ್ರಹಾಲಯದಲ್ಲಿ ನಮಗೆ ಅನೇಕ ಕುತೂಹಲಕರ ಸಂಗತಿಗಳ ಪರಿಚಯವೂ ಆಗುತ್ತದೆ. ಹಣದ ರವಾನೆಗೆ ಸೂಕ್ತ ವ್ಯವಸ್ಥೆಗಳಿಲ್ಲದ ಕಾಲದಲ್ಲಿ ನೋಟುಗಳನ್ನು ಎರಡು ತುಂಡುಮಾಡಿ ಪ್ರತಿಯೊಂದು ತುಂಡನ್ನೂ ಪ್ರತ್ಯೇಕವಾಗಿ ಕಳುಹಿಸುತ್ತಿದ್ದುದರ ಕುರಿತ ವಿವರಣೆ ಇದಕ್ಕೊಂದು ಉದಾಹರಣೆಯಷ್ಟೆ. ಅಂತೆಯೇ ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಮೂರಕ್ಕೂ ಹೆಚ್ಚು ಬ್ಯಾಂಕುಗಳು ನೋಟು ಮುದ್ರಿಸುತ್ತಿದ್ದದ್ದು, ನಂತರ ಬಂದ ರಿಸರ್ವ್ ಬ್ಯಾಂಕಿನ ನೋಟುಗಳು ಬರ್ಮಾದಲ್ಲೂ ಬಳಕೆಯಾದದ್ದು, ಚಿಲ್ಲರೆ ಸಮಸ್ಯೆ ತಲೆದೋರಿದ ಕಾಲದಲ್ಲಿ ನಾಣ್ಯಗಳ ಬದಲು ಕಾಗದದ 'ಕ್ಯಾಶ್ ಕೂಪನ್' ಚಲಾವಣೆಗೆ ಬಂದದ್ದು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ತಕ್ಷಣದಲ್ಲಿ ಹೊಸ ನೋಟುಗಳ ಮೇಲೆ ಮಹಾತ್ಮಾ ಗಾಂಧಿಯ ಚಿತ್ರ ಮುದ್ರಿಸುವ ಯೋಜನೆ ಕಾರ್ಯರೂಪಕ್ಕೆ ಬರದೆ ಹೋದದ್ದು - ಇಲ್ಲಿ ಕಾಣಸಿಗುವ ಕತೆಗಳು ಒಂದೇ, ಎರಡೇ!


ಒಂದುಕಾಲದಲ್ಲಿ ಭಾರತದ ನೋಟುಗಳೆಲ್ಲ ವಿದೇಶದಲ್ಲಿ ಮುದ್ರಣವಾಗುತ್ತಿದ್ದವಂತೆ. ಆನಂತರದಲ್ಲಿ ಭಾರತದಲ್ಲೇ ಮುದ್ರಣ ಪ್ರಾರಂಭವಾದರೂ ಕಾಗದ ಮಾತ್ರ ವಿದೇಶಗಳಿಂದ ಬರಬೇಕಿತ್ತು. ಎರಡನೇ ವಿಶ್ವಸಮರದ ಸಮಯದಲ್ಲಿ ಹೀಗೆ ಕಾಗದವನ್ನು ಹೊತ್ತು ಭಾರತಕ್ಕೆ ಬರುತ್ತಿದ್ದ ಹಡಗೊಂದು ಜರ್ಮನ್ ಸೇನೆಯ ದಾಳಿಗೆ ಸಿಲುಕಿ ಮುಳುಗಿಹೋಗಿತ್ತು. ಇದಾದ ಐವತ್ತು ವರ್ಷಗಳ ನಂತರ ಆ ಹಡಗಿನಲ್ಲಿದ್ದ ವಸ್ತುಗಳನ್ನು ಮೇಲೆತ್ತಿ ನೋಡಿದರೆ ಆ ಕಾಗದದ ಹಾಳೆಗಳೆಲ್ಲ ಒಳ್ಳೆಯ ಸ್ಥಿತಿಯಲ್ಲೇ ಇದ್ದವಂತೆ! ಈ ಕತೆಯ ಜೊತೆಗೆ ಹಾಗೆ ಮೇಲೆತ್ತಲಾದ ಹಾಳೆಯೊಂದನ್ನು ನೋಡುವ ಅವಕಾಶವೂ ಈ ಸಂಗ್ರಹಾಲಯದಲ್ಲಿದೆ.

ನಾಣ್ಯ-ನೋಟುಗಳ ಜೊತೆಗೆ ರಿಸರ್ವ್ ಬ್ಯಾಂಕಿನ, ಹಾಗೂ ಆ ಮೂಲಕ ಭಾರತೀಯ ಅರ್ಥವ್ಯವಸ್ಥೆ ಬೆಳೆದುಬಂದ ರೀತಿಯ ಪರಿಚಯ ಮಾಡಿಕೊಡುವ ಪ್ರಯತ್ನವೂ ಇಲ್ಲಿದೆ. ರಿಸರ್ವ್ ಬ್ಯಾಂಕ್ ಇದೀಗ ಸರಕಾರಿ ಸ್ವಾಮ್ಯದ ಸಂಸ್ಥೆಯಾದರೂ ಒಂದುಕಾಲಕ್ಕೆ ಇತರರಿಗೂ ಅದರ ಶೇರುದಾರರಾಗುವ ಅವಕಾಶ ಇತ್ತಂತೆ. ಇಂದೋರಿನ ಮಹಾರಾಣಿಯವರು ರಿಸರ್ವ್ ಬ್ಯಾಂಕಿನಲ್ಲಿ ಹೊಂದಿದ್ದ ಶೇರುಗಳ ಪ್ರಮಾಣಪತ್ರ ನಿಜಕ್ಕೂ ಕುತೂಹಲಮೂಡಿಸುತ್ತದೆ. ೧೯೩೫ರಿಂದ ಇಂದಿನವರೆಗೂ ನೋಟಿನ ಮೇಲಿನ ಹಸ್ತಾಕ್ಷರದ ಮೂಲಕವಷ್ಟೇ ನಮಗೆ ಪರಿಚಿತರಾಗಿರುವ ರಿಸರ್ವ್ ಬ್ಯಾಂಕ್ ಗವರ್ನರುಗಳ ಭಾವಚಿತ್ರ ಹಾಗೂ ಪರಿಚಯ ಕೂಡ ಇಲ್ಲಿದೆ. ಕಂಪ್ಯೂಟರ್ ಬರುವ ಮುನ್ನ ಬ್ಯಾಂಕುಗಳು ಹೇಗಿದ್ದವು ಎಂದು ತಿಳಿಯದವರಿಗಾಗಿ ಬ್ಯಾಂಕಿನ ಹಳೆಯ ಲೆಡ್ಜರ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ. ಬ್ಯಾಂಕ್ ಕೆಲಸದಲ್ಲಿ ಯಂತ್ರಗಳ ಪರಿಚಯದ ಮೊದಲ ಹೆಜ್ಜೆಯಾಗಿ ಬಂದ ಕಾಂಪ್ಟೋಮೀಟರುಗಳೆಂಬ ಮೆಕ್ಯಾನಿಕಲ್ ಕ್ಯಾಲ್ಕ್ಯುಲೇಟರುಗಳ ಬಗೆಗೂ ಇಲ್ಲಿ ತಿಳಿದುಕೊಳ್ಳಬಹುದು; ಆ ಯಂತ್ರಗಳು ಹೇಗಿದ್ದವೆಂದು ನೋಡಲೂಬಹುದು!

ಜನವರಿ ೨೭, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

You Might Also Like

0 Responses

Popular Posts

Like us on Facebook