ಹೀಗೊಂದು ಪುಸ್ತಕ ಸಂಜೆ...

11:42 AM

ನಿನ್ನೆ ಸಂಜೆ ಬೆಂಗಳೂರಿನ ಹೋಟೆಲ್ ವುಡ್ ಲ್ಯಾಂಡ್ಸ್ ನಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ಏರ್ಪಾಡಾಗಿತ್ತು. ನವಕರ್ನಾಟಕ ಪ್ರಕಾಶನ ಹಾಗೂ ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿಯ ಜಂಟಿ ಆಶ್ರಯದಲ್ಲಿ ಹೊರತರಲಾದ ಮೂರು ಪುಸ್ತಕಗಳ ಬಿಡುಗಡೆ ಈ ಕಾರ್ಯಕ್ರಮದ ಉದ್ದೇಶ. ಡಾ ಉಲ್ಲಾಸ ಕಾರಂತರ ಅನುಭವಕಥನ 'ಹುಲಿರಾಯನ ಆಕಾಶವಾಣಿ', ಅವರದೇ ಇಂಗ್ಲಿಷ್ ಪುಸ್ತಕ 'ವೇ ಆಫ್ ದಿ ಟೈಗರ್'ನ ಕನ್ನಡಾನುವಾದ 'ಹುಲಿಯ ಬದುಕು' ಹಾಗೂ ಬಾನುಲಿ ಕಾರ್ಯಕ್ರಮವೊಂದರ ಪುಸ್ತಕ ರೂಪ 'ವನ್ಯಜೀವಿಗಳ ರಮ್ಯಲೋಕ' - ಇವು ನಿನ್ನೆ ಬಿಡುಗಡೆಯಾದ ಪುಸ್ತಕಗಳು. ಹುಲಿರಾಯನ ಆಕಾಶವಾಣಿಯ ನಿರೂಪಣೆ, ವನ್ಯಜೀವಿಗಳ ರಮ್ಯಲೋಕದ ಜಂಟಿ ಸಂಪಾದಕತ್ವ ಹಾಗೂ ನಿನ್ನೆಯ ಕಾರ್ಯಕ್ರಮದ ನಿರ್ವಹಣೆ - ಈ ಮೂರೂ ಜವಾಬ್ದಾರಿಗಳು ನನ್ನ ಅಪ್ಪ ಶ್ರೀ ಟಿ ಎಸ್ ಗೋಪಾಲ್ ಅವರದ್ದಾಗಿತ್ತು.

ನನ್ನ ಮಟ್ಟಿಗೆ ಈ ಕಾರ್ಯಕ್ರಮದ ಇನ್ನೊಂದು ವಿಶೇಷ ಎಂದರೆ ನನಗೆ ವಿಜ್ಞಾನ ಬರವಣಿಗೆ ಹೇಳಿಕೊಟ್ಟ ಮೇಷ್ಟ್ರು ಶ್ರೀ ನಾಗೇಶ ಹೆಗಡೆಯವರನ್ನು ನಾನು ನಿನ್ನೆ ಮೊದಲ ಬಾರಿಗೆ ಮುಖತಃ ಭೇಟಿಮಾಡಿದೆ. ದೂರವಾಣಿ, ಪತ್ರ, ಈಮೇಲುಗಳ ಮೂಲಕ ಹೆಚ್ಚೂಕಡಿಮೆ ಐದು ವರ್ಷಗಳಿಂದ ನಾಗೇಶ ಹೆಗಡೆಯವರು ನನಗೆ ಪರಿಚಿತರಾದರೂ ಕೂಡ ನಾನು ಇದುವರೆಗೆ ಅವರನ್ನು ಕಂಡಿರಲಿಲ್ಲ ಎನ್ನುವುದು ತಮಾಷೆಯ ವಿಷಯ. ಆದರೆ ನಿನ್ನೆಯ ಭೇಟಿ ಈ ಕೊರತೆಯನ್ನು ನೀಗಿದ್ದಷ್ಟೇ ಅಲ್ಲ, ನನಗೆ ಅವರ ಬಗೆಗಿದ್ದ ಗೌರವವನ್ನು ಇನ್ನೂ ಒಂದಷ್ಟು ಹೆಚ್ಚಿಸಿತು. ಅವರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂಬ ನನ್ನ ಹಳೇ ಆಸೆ ಕೂಡ ನಿನ್ನೆ ಪೂರೈಸಿತು :)

ಕನ್ನಡದ ಓದುಗರಿಗೆ ವಿಜ್ಞಾನ ವಿಷಯಗಳನ್ನು ಸರಳ-ಸ್ಪಷ್ಟ ರೀತಿಯಲ್ಲಿ ತಿಳಿಹೇಳುವ ಇನ್ನೊಬ್ಬ ಬರಹಗಾರ ಡಾ ಹೆಚ್ ಆರ್ ಕೃಷ್ಣಮೂರ್ತಿಯವರು ಕೂಡ ಈ ಸಮಾರಂಭಕ್ಕೆ ಬಂದಿದ್ದರು. ಕಾರಂತರ ವೇ ಆಫ್ ದಿ ಟೈಗರ್ ಅನ್ನು ಕನ್ನಡಕ್ಕೆ ತಂದದ್ದು ಹೆಚ್ ಆರ್ ಕೆಯವರೇ. ಎಷ್ಟೋ ವರ್ಷಗಳ ಹಿಂದೆ ಶ್ರೀಮಂಗಲದ ನಮ್ಮ ಮನೆಗೆ ಬಂದದ್ದನ್ನು ನೆನಪಿಸಿಕೊಂಡ ಹೆಚ್ ಆರ್ ಕೆಯವರು "ನಿನ್ನ ಬರಹಗಳನ್ನು ಓದುತ್ತಿರುತ್ತೇನೆ" ಎಂದು ಬೇರೆ ಹೇಳಿಬಿಟ್ಟರು (ಆ ನಿಮಿಷದಲ್ಲೇ ನನ್ನ ತಲೆಯ ಮೇಲೊಂದು ಕೋಡು ಬಂದಿತ್ತು ಅಂತ ಕಾಣ್ಸತ್ತೆ!)

ನಿನ್ನೆ ಬಿಡುಗಡೆಯಾದ ಈ ಮೂರೂ ಪುಸ್ತಕಗಳು "ಕನ್ನಡದ ಹೆಮ್ಮೆ" ಎಂದವರು ಡಾ ಚಿರಂಜೀವ್ ಸಿಂಗ್, ಸರ್ಕಾರಿ ಯಂತ್ರದೊಳಗಿದ್ದೂ ಪರಿಸರ-ವನ್ಯಜೀವನಗಳ ಬಗೆಗೆ ನಿಜವಾದ ಕಾಳಜಿ ಹೊಂದಿರುವ ಅಪರೂಪದ ವ್ಯಕ್ತಿ. ಇವರ ಹಿಂದಿ ಶೈಲಿಯ ಕನ್ನಡ ಭಾಷಣ ಕೇಳೋದಕ್ಕೆ ನಿಜಕ್ಕೂ ಸೊಗಸಾಗಿತ್ತು!

ಕಾರಂತರ ಸ್ಲೈಡ್ ಷೋ/ಉಪನ್ಯಾಸ ನೋಡಿ/ಕೇಳಿ, ನವಕರ್ನಾಟಕದ ಶ್ರೀ ರಾಜಾರಾಂ ಅವರನ್ನು ಮಾತನಾಡಿಸಿ, ಹುಲಿರಾಯನ ಆಕಾಶವಾಣಿಯ ಮೇಲೆ ಕಾರಂತರದೊಂದು ಹಸ್ತಾಕ್ಷರ ಗಿಟ್ಟಿಸಿಕೊಂಡು, ನಾಗೇಶ ಹೆಗಡೆಯವರೊಡನೆ ಇನ್ನೊಂದಷ್ಟು ಹೊತ್ತು ಮಾತನಾಡಿ ವಾಪಸ್ ಮೈಸೂರಿಗೆ ಬಂದು ತಲುಪಿದ್ದೇನೆ; ಈ ಮೂರೂ ಪುಸ್ತಕಗಳನ್ನು ಅವುಗಳ ಪ್ರಸ್ತುತ ರೂಪದಲ್ಲಿ ಓದುವ ಕೆಲಸ ಕೂಡ ಶುರುಮಾಡಿದ್ದೇನೆ. ಇದೇ ಕೆಲಸವನ್ನು ನೀವೂ ಮಾಡಿ (ಪ್ರತಿಗಳಿಗಾಗಿ ನಿಮ್ಮ ಸಮೀಪದ ನವಕರ್ನಾಟಕ ಮಳಿಗೆಯನ್ನು ಸಂಪರ್ಕಿಸಬಹುದು).

You Might Also Like

0 Responses

Popular Posts

Like us on Facebook