ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ!

1:25 PM


ಆಗ ನಾನು ಎರಡನೆ ತರಗತಿಯಲ್ಲಿದ್ದೆ, ಶ್ರೀಮಂಗಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ। ಮಳೆಗಾಲದಲ್ಲಿ ಶಾಲೆಗೇ ಹೋಗ್ತಿರಲಿಲ್ಲ, ಶಾಲೆಯಲ್ಲಿರಲು ಬೇಜಾರಾದಾಗ ಹೊಟ್ಟೆನೋವು, ಮನೇಗೆ ಹೋಗ್ತೀನಿ ಅಂತ ನಾಟಕ ಮಾಡ್ತಿದ್ದೆ. ಅಂತಹ ಸಂದರ್ಭಗಳಲ್ಲೆಲ್ಲ ನನ್ನನ್ನು ಸಮಾಧಾನ ಮಾಡ್ತಿದ್ದವರು, ತಮಾಷೆ ಮಾಡಿ ನಗಿಸುತ್ತಿದ್ದವರು ನಂಜಮ್ಮ ಟೀಚರ್ರು. ಅಂದು ನನ್ನ ಬಗ್ಗೆ, ನನ್ನ ಚಟುವಟಿಕೆಗಳ ಬಗ್ಗೆ ಎಷ್ಟು ಆಸಕ್ತಿ ವಹಿಸಿ ವಿಚಾರಿಸಿಕೊಳ್ಳುತ್ತಿದ್ದರೋ ಇಂದು ಕೂಡ ನನ್ನ ಬಗ್ಗೆ ಅಷ್ಟೇ ಪ್ರಮಾಣದ ಪ್ರೀತಿ ಉಳಿಸಿಕೊಂಡಿರುವ ಅಪರೂಪದ ಜೀವ ಅವರು.


ಮಮತ ಟೀಚರ್, ನಾನು ಎರಡು-ಮೂರನೆ ತರಗತಿಗಳಲ್ಲಿದ್ದಾಗ ಪಾಠಹೇಳಿದವರು. ಶಿಕ್ಷಕಿ ಅಂದರೆ ಕೋಲು ಹಿಡಿದುಕೊಂಡು ಪಾಠಹೇಳುವವರು, ಏಟುಕೊಡುವವರು ಅನ್ನುವಂತಹ ಭಾವನೆಗೆ ಜಾಗವೇ ಕೊಡದೆ ನನ್ನ ಹಿರಿಯ ಫ್ರೆಂಡಿನಂತಿದ್ದವರು ಅವರು.


ಮೂರು ನಾಲ್ಕನೇ ತರಗತಿಗೆ ಬರುತ್ತಿದ್ದ ಹಾಗೆ ಬ್ಯಾಂಕು, ಪೋಸ್ಟಾಫೀಸು ಮುಂತಾದ ಶಾಲೆಯ ಕೆಲಸಗಳಲ್ಲೆಲ್ಲ ನನ್ನನ್ನು ತೊಡಗಿಸಿ ಶಾಲೆಯ ಶಿಕ್ಷಣಕ್ಕೆ ಮೀರಿದ ಅನುಭವ ಒದಗಿಸಿಕೊಟ್ಟವರು ತಂಗಮ್ಮ ಟೀಚರ್ರು, ಪ್ರೇಮಕುಮಾರಿ ಮೇಡಮ್, ನೀಲಮ್ಮ ಟೀಚರ್ರು, ದಮಯಂತಿ ಟೀಚರ್ರು ಮೊದಲಾದವರು.


ಆರನೆಯ ತರಗತಿಯಲ್ಲಿದ್ದಾಗ ಒಂದು ಬಾರಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿಲ್ಲದಿದ್ದರೂ ನನಗೆ ಬೇಜಾರಾಗದಿರಲಿ ಅಂತ ಹೆಚ್ಚು ಅಂಕ ಕೊಟ್ಟು ಮುಂದಿನ ಸಲ ಸರಿಯಾಗಿ ಬರಿ ಅಂತ ತಿಳಿಹೇಳಿದವರು ಮಣಿ ಟೀಚರ್ರು.


ಏಳನೆಯ ತರಗತಿಯ ಕನ್ನಡ ಶಿಕ್ಷಕಿ ಬೊಳ್ಳಮ್ಮ ಟೀಚರ್, ನಮ್ಮ ಹಳ್ಳಿ ಊರಿನಲ್ಲಿ ಅಪರೂಪದ ಕೆಲ ಪದ್ಧತಿಗಳನ್ನು ಜಾರಿಗೆ ತಂದವರು. ಶಾಲೆಯ ಎದುರಿನ ಮರದ ಕೆಳಗೆ ಎಲ್ಲರನ್ನೂ ಕೂರಿಸಿ ಓದಿಸುವುದು, ಆಗಿಂದಾಗ್ಗೆ ನಮ್ಮಿಂದಲೇ ಸರ್ಪ್ರೈಸ್ ಟೆಸ್ಟುಗಳನ್ನು ನಡೆಸಿ ನಮ್ಮಿಂದಲೇ ಮೌಲ್ಯಮಾಪನ ಮಾಡಿಸುವುದು - ಇಂತಹ ವಿಶಿಷ್ಟ ಅನುಭವಗಳನ್ನೆಲ್ಲ ಕಟ್ಟಿಕೊಟ್ಟವರು ಅವರು.


ಬಾಲ್ಯದ ಹುಡುಗಾಟಿಕೆಯಲ್ಲಿ ನಾನೊಂದು ಪತ್ರಿಕೆ ನಡೆಸುತ್ತೇನೆ, ಕತೆ ಬರೆಯುತ್ತೇನೆ ಅಂತೆಲ್ಲ ಹೇಳಿದಾಗ ಬಾಯಿಮುಚ್ಚಿಕೊಂಡು ಓದೋದು ನೋಡು ಅನ್ನದೆ ನನ್ನ ಹುಚ್ಚಾಟಗಳನ್ನೆಲ್ಲ ಸಹಿಸಿಕೊಂಡು ಪ್ರೋತ್ಸಾಹಿಸಿದವರು ನನ್ನೆಲ್ಲ ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರು. ನನ್ನ ಜೀವನಕ್ಕೊಂದು ಸುಭದ್ರ ಅಡಿಪಾಯ ಹಾಕಿಕೊಟ್ಟವರು.


ಆಮೇಲೆ ಬಂದವರೂ ಅಷ್ಟೆ - ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಬಂದು ಪರದಾಡುತ್ತಿದ್ದ ನನ್ನಲ್ಲಿ ಧೈರ್ಯತುಂಬಿದವರು, ನನ್ನ ಪ್ರಗತಿಯಲ್ಲಿ ಸತತ ಆಸಕ್ತಿವಹಿಸಿ ಮಾರ್ಗದರ್ಶನ ನೀಡಿದವರು, ಎಲ್ಲ ಸಂದರ್ಭಗಳಲ್ಲೂ ನನ್ನ ಬೆಂಬಲಕ್ಕೆ ನಿಂತವರು ಹತ್ತಾರು ಜನ. ಹೈಸ್ಕೂಲಿನಲ್ಲಿ ಝಾನ್ಸಿ ಮಿಸ್, ರೀಟಾ ಮಿಸ್, ಅಣ್ಣಯ್ಯ ಸರ್, ಕಾವೇರಮ್ಮ ಮೇಡಮ್, ಕಾಲೇಜಿನಲ್ಲಿ ಎಸ್‌ಎಲ್‌ಎಂ, ಕೆಜಿಪಿ, ಎಲ್‌ಕೆ‌ಎಸ್, ಇಂಜಿನಿಯರಿಂಗ್‌ನಲ್ಲಿ ಶೈಲಜಾ ಮೇಡಮ್, ನಂದಾ ಮೇಡಮ್, ಉದಯಶಂಕರ್ ಸರ್ - ಇವರೆಲ್ಲ ನನಗೆ ಮಾಡಿರುವ ಸಹಾಯ ಮರೆಯಲಾರದ್ದು.


ಇಂದು ಶಿಕ್ಷಕರ ದಿನ. ಈ ಸಂದರ್ಭದಲ್ಲಿ ಇಲ್ಲಿ ಹೆಸರಿಸಿರುವ, ಹೆಸರಿಸಿಲ್ಲದ ಎಲ್ಲ ಗುರುಗಳಿಗೂ ನನ್ನ ಪ್ರಣಾಮಗಳು.

You Might Also Like

0 Responses

Popular Posts

Like us on Facebook