ಒಂದು ತೀರ್ಥಯಾತ್ರೆಯ ನೆನಪುಗಳು
11:54 PMಕಳೆದವಾರ ಪಿಲಾನಿಗೆ ಹೋಗಿದ್ದೆ. ರಾಜಾಸ್ಥಾನದ ಈ ಪುಟ್ಟ ಹಳ್ಳಿ ಅಲ್ಲಿರುವ ಬಿರ್ಲಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್‌ನಿಂದಾಗಿ ವಿಶ್ವವಿಖ್ಯಾತ. ಈ ವಿಶ್ವವಿದ್ಯಾನಿಲಯದಿಂದ ಎಂ.ಎಸ್. ಪದವಿ ಪಡೆಯುವ ಮುನ್ನ ನಿಯಮದಂತೆ ಮೌಖಿಕ ಪರೀಕ್ಷೆ ನೀಡುವುದು ನನ್ನ ಭೇಟಿಯ ಉದ್ದೇಶವಾಗಿತ್ತು. ಈ ಭೇಟಿಯ ಸಂದರ್ಭದಲ್ಲಿ ಕಣ್ಣಿಗೆ ಬಿದ್ದ ಕೆಲ ಸಂಗತಿಗಳು ಇಲ್ಲಿವೆ.
* * *
ಕಳೆದ ಎರಡು ಮೂರು ವರ್ಷಗಳಿಂದ ವರ್ಷಕ್ಕೆ ಒಂದೋ ಎರಡೋ ಸಲ ಮಾತ್ರ ವಿಮಾನ ಹತ್ತಿರುವ ನನಗೆ ಇದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲನೆಯ ಭೇಟಿ. ಅಲ್ಲಿನ ಸುವ್ಯವಸ್ಥೆ, ಅಚ್ಚುಕಟ್ಟುತನ ಎಲ್ಲ ಬಹಳ ಚೆನ್ನಾಗಿದೆ ಅನ್ನಿಸಿತು. ವಾಪಸ್ಸು ಬರುವಾಗ ವಿಮಾನ ಹತ್ತಿದ ಜೈಪುರ ವಿಮಾನ ನಿಲ್ದಾಣ ಬೆಂಗಳೂರಿನದಕ್ಕಿಂತ ಬಹಳ ಚಿಕ್ಕದಾಗಿದ್ದರೂ ಅಲ್ಲಿನ ಅಚ್ಚುಕಟ್ಟುತನ ಬೆಂಗಳೂರು ನಿಲ್ದಾಣದ ಮಟ್ಟದಲ್ಲೇ ಇದ್ದದ್ದು ಖುಷಿತಂದ ವಿಷಯ (ಜೈಪುರ ವಿಮಾನ ನಿಲ್ದಾಣ, ಮೈಸೂರು ಬಸ್ ನಿಲ್ದಾಣ ಎರಡೂ ಒಂದೇ ಸೈಜು ಅನ್ನುವುದು ನನ್ನ ತಲೆಗೆ ಹೊಳೆದ ತರಲೆ ಅಭಿಪ್ರಾಯ!). ವಾಪಸ್ ಬರುತ್ತ ಸ್ಪೈಸ್‌ಜೆಟ್ ವಿಮಾನದಲ್ಲಿ ಕುಡಿಯುವ ನೀರು ಸರಬರಾಜನ್ನೂ ಆಪ್ಷನಲ್ ಮಾಡಿದ್ದು ವಿಮಾನ ಸಂಸ್ಥೆಗಳ ಪರದಾಟಕ್ಕೆ ಹಿಡಿದ ಕನ್ನಡಿಯಂತಿತ್ತು.
* * *
ದೆಹಲಿಯಿಂದ ಪಿಲಾನಿಗೆ ಬಸ್ ವ್ಯವಸ್ಥೆ ಸಕತ್ತಾಗಿದೆ ಅಂತ ನಂಬಿಕೊಂಡು ಮೂರ್ಖರಾದ ಅನೇಕರಲ್ಲಿ ನಾನೂ ಇದ್ದೆ. ದೆಹಲಿಯಿಂದ ಹೊರರಾಜ್ಯಗಳಿಗೆ ಹೋಗುವ ಬಸ್ಸುಗಳು ಇಂಟರ್ ಸ್ಟೇಟ್ ಬಸ್ ಟರ್ಮಿನಸ್ ಅನ್ನುವ ಭರ್ಜರಿ ಹೆಸರಿನ ಜಾಗದಿಂದ ಹೊರಡುತ್ತವೆ. ಇದರ ಹೆಸರು ಕೇಳಿಕೊಂಡು ಒಳಗೆ ಹೋದವರು ನನ್ನಂತೆಯೇ ಆಶ್ಚರ್ಯಾನಂದಗಳಿಂದ ದಿಗ್ಮೂಢರಾಗುವುದು ಖಚಿತ! (ದಿಗ್ಮೂಢ ಸ್ಪೆಲ್ಲಿಂಗ್ ಸರೀನಾ??) ಚಾಮರಾಜಪೇಟೆ ಮೇಲುಸೇತುವೆ ಇಳಿದು ಬಲಕ್ಕೆ ತಿರುಗಿದರೆ ಸಿಗುವ ಗೋರೀಪಾಳ್ಯದ ರಸ್ತೆಗಳು ಈ 'ಐಎಸ್‌ಬಿಟಿ'ಗಿಂತ ಕನಿಷ್ಠ ನೂರು ಪಟ್ಟು ಸ್ವಚ್ಛವಾಗಿವೆ ಅಂದರೂ ಕಡಿಮೆಯೇ. ಇನ್ನು ಇಲ್ಲಿ ಸಿಕ್ಕ ಬಸ್ಸಂತೂ "ತುಂಬಾ" ಚೆನ್ನಾಗಿತ್ತು. ಪಿಲಾನಿಗಾ? ಹೋಗತ್ತೆ ಹತ್ತು ಅಂದ ಮನುಷ್ಯ ಅರ್ಧ ಘಂಟೆ ಆದಮೇಲೆ ಕಂಡಕ್ಟರ್ ವೇಷದಲ್ಲಿ ಬಂದು ಪಿಲಾನಿಗೆ ಹೋಗಲ್ಲ, ಭಿವಾನಿಯಲ್ಲೇ ಇಳ್ಕೋ ಅಂತ ಜೋರು ಹೊಡೆದ.
ಮಾರಲ್ ಆಫ್ ದಿ ಸ್ಟೋರಿ: ಯಾರ್ಯಾರದೋ ವರ್ಣನೆ ನಂಬಿಕೊಂಡ್ರೆ ಸುಮಾರು ಇನ್ನೂರೈವತ್ತು ಕಿಲೋಮೀಟರ್ ಕ್ರಮಿಸಲು ಒಂದಕ್ಕಿಂತ ಒಂದು ಕೆಟ್ಟದಾದ ಮೂರು ಬಸ್ಸುಗಳಲ್ಲಿ ಎಂಟು ಗಂಟೆ ಕಳೆಯುವ ಅಭೂತಪೂರ್ವ ಅನುಭವ ನಿಮ್ಮದಾಗುತ್ತದೆ!
* * *
ದೆಹಲಿ ಬಿಟ್ಟ ಮೇಲೆ ರೋಹಟಕ್, ಭಿವಾನಿ, ಲೋಹಾರು ಮಾರ್ಗವಾಗಿ ಪಿಲಾನಿ ತಲುಪುವ ಮೊದಲಿನ ಪ್ರಯಾಣದ ಬಹುಪಾಲು ಹರಿಯಾಣ ರಾಜ್ಯದ ಮೂಲಕವೇ ಸಾಗಬೇಕು. ಈ ಮಾರ್ಗ ನಾನು ಈವರೆಗೆ ನೋಡಿರುವ, ಸಾಗಿರುವ ಮಾರ್ಗಗಳಲ್ಲೆಲ್ಲ ನಿಸ್ಸಂದೇಹವಾಗಿ ಅತ್ಯಂತ ಕೆಟ್ಟದಾದದ್ದು. ಹರಿಯಾಣ ಸರಕಾರ ರಾಜ್ಯವನ್ನು ಹೇಗೆಲ್ಲ ಉದ್ಧಾರ ಮಾಡಿದೆ ಎಂದು ಭಾರಿಭಾರಿ ಕೊಚ್ಚಿಕೊಳ್ಳುವ ಬೋರ್ಡುಗಳನ್ನು ಹಾಕಲು ಮಾಡಿರುವ ಖರ್ಚಿನಲ್ಲಿ ಅರ್ಧಭಾಗ ರಸ್ತೆಗಳ ರಿಪೇರಿಗಾಗಿ ಖರ್ಚುಮಾಡಿದ್ದರೂ ಹರಿಯಾಣದ ರಸ್ತೆಗಳು ಲಲ್ಲೂ ಯಾದವ್ ಹೇಳಿದ ಹೇಮಮಾಲಿನಿ ಕೆನ್ನೆಗಳಾಗಿರುತ್ತಿದ್ದವೇನೋ. ಇಷ್ಟೆಲ್ಲ ಧೂಳು ಕೊಳಕುಗಳನ್ನು ಸಹಿಸಿಕೊಂಡಿರುವ, ಅದೇ ಧೂಳಿನಲ್ಲಿ ತಯಾರಾಗುವ ಬಗೆಬಗೆಯ "ಸ್ಪೆಷಲ್" ಪಕೋಡಾಗಳನ್ನು ಗುಳುಂ ಮಾಡಿ ಖುಷಿಯಾಗಿರುವ ಜನರ ಬಗ್ಗೆ ಒಂದು ಸಮಗ್ರ ತನಿಖೆ ಆಗಲೇಬೇಕು ಅಂತ ಇನ್ನೂ ಯಾರೂ ಬೇಡಿಕೆ ಸಲ್ಲಿಸಿಲ್ಲ.
* * *
ಭಿವಾನಿಯಿಂದ ಲೋಹಾರು ತನಕ ಹರಿಯಾಣ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುವ ಸುಯೋಗ ನನ್ನದಾಯಿತು. "ಸ್ಟೀರಿಯೋ ಎಫೆಕ್ಟ್", "ಸಾಲಿಡ್ ಕುಷನ್", "ಸರೌಂಡ್ ಸೌಂಡ್", "ಇನ್ ಹೌಸ್ ಲೈವ್ ಎಂಟರ್‍ಟೈನ್‌ಮೆಂಟ್" ಇತ್ಯಾದಿ ಇತ್ಯಾದಿಗಳನ್ನೆಲ್ಲ 'ವೇಗದೂತ ದರ'ದಲ್ಲೇ ಒದಗಿಸಿದ ಈ ಬಸ್ ಪ್ರಯಾಣದ ಖುಷಿಯನ್ನು ಮಾತಿನಲ್ಲಿ ಹೇಳಲಾರೆನು! ನೀವೇ ಒಮ್ಮೆ ಕುಳಿತು ಪ್ರಯಾಣಿಸಿ, ಆನಂದಿಸಿ!
* * *
ರಾಜಾಸ್ಥಾನ ಸಮೀಪಿಸುತ್ತಿದೆ ಅಂತ ಸಿಗ್ನಲ್ ಕೊಟ್ಟವು ನವಿಲುಗಳು. ರಸ್ತೆ ಬದಿಯ ಹಳ್ಳಿಗಳಲ್ಲಿ ನಮ್ಮಕಡೆ ಕೋಳಿಗಳು ಕಾಣಿಸುವಷ್ಟೇ ಸಾಮಾನ್ಯವಾಗಿ ನವಿಲುಗಳು ಕಾಣಸಿಕ್ಕಿದ್ದು ಚೆನ್ನಾಗಿತ್ತು. ಬಿಟ್ಸ್ ಪಿಲಾನಿ ಆವರಣದಲ್ಲೂ ಆರಾಮಾಗಿ ಓಡಾಡಿಕೊಂಡಿದ್ದ ನವಿಲುಗಳು ಕಣ್ಣಿಗೆ ಬಿದ್ದವು. ಇಷ್ಟೇ ಖುಷಿಕೊಟ್ಟದ್ದು ಒಂಟೆಗಾಡಿಗಳ ದರ್ಶನ. ಇಂತಹ ಗಾಡಿಯೊಂದರ ಸವಾರ ತನ್ನ ಒಂಟೆಯನ್ನು ವೇಗವಾಗಿ ಓಡಲು ಬಿಟ್ಟು ಥ್ರಿಲ್ಲಾಗುತ್ತಿದ್ದದ್ದು ನೋಡಿ ನನಗೂ ಖುಷಿಯಾಯ್ತು.
* * *
ರಾಜಾಸ್ಥಾನ ಬಂತು ಅಂತ ಖಚಿತವಾಗಿ ಗೊತ್ತುಮಾಡಿದ್ದು ಅಲ್ಲಿನ ಅತ್ಯುತ್ತಮ ರಸ್ತೆಗಳು. ರಾಜ್ಯದ ಮೂಲೆಮೂಲೆಗೂ ಅಷ್ಟೇ ಗುಣಮಟ್ಟದ ರಸ್ತೆಗಳ ಸಂಪರ್ಕ ಇದೆ ಅಂತ ನನ್ನನ್ನು ಪಿಲಾನಿಯಿಂದ ಜೈಪುರಕ್ಕೆ ಕರೆತಂದ ಟ್ಯಾಕ್ಸಿ ಚಾಲಕ ಹೇಳಿದ. ರಾಜ್ಯದ ಉದ್ದಗಲಕ್ಕೂ ಅಷ್ಟೆಲ್ಲ ಒಳ್ಳೆಯ ರಸ್ತೆಗಳ ಸಂಪರ್ಕ ಒದಗಿಸಲು ಸಾಕಷ್ಟು ರಾಜಕೀಯ ಇಚ್ಛಾಶಕ್ತಿ ಬೇಕು. ಅದು ನಿಜಕ್ಕೂ ಇದೆ ಅನ್ನುವುದಾದರೆ ರಾಜಾಸ್ಥಾನದ ಜನರೇ ಧನ್ಯರು!
1 Responses