ಇತಿಹಾಸ ಪುಟಗಳನ್ನು ತೆರೆದುನೋಡಲು ನಿಮ್ಮ ನೆರವು ಬೇಕು!

10:25 PM

ಮೈಸೂರು ಸಂಸ್ಥಾನದ ಹೆಸರಾಂತ ಅರಸರಲ್ಲೊಬ್ಬರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲಕ್ಕೆ ಸಂಬಂಧಿಸಿದ ಐತಿಹಾಸಿಕ ಕಾದಂಬರಿ 'ಶ್ರೀಕೃಷ್ಣ ಭೂಪಾಲ'. ಮಾ. ನಾ. ಚೌಡಪ್ಪ ಎಂಬ ಮಹನೀಯರು ಬರೆದ ಈ ಕೃತಿ ೧೯೫೮ರಲ್ಲಿ ಪ್ರಕಟವಾಗಿತ್ತು. ಈ ಕಾದಂಬರಿಯಲ್ಲಿ ಕರೂರು ಶ್ರೀನಿವಾಸಾಚಾರ್ಯರೆಂಬ ವಿದ್ವಾಂಸರ ಪ್ರಸ್ತಾಪ ಬರುತ್ತದೆ.

ಖಾಸಾ ಚಾಮರಾಜ ಒಡೆಯರ ನಿಧನಾನಂತರ ಯದುವಂಶದ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡು ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಅಧಿಕಾರ ಮರಳಿಸಿಗಲು ಪ್ರಮುಖ ಕಾರಣರಾಗಿದ್ದವರು ರಾಜಮಾತೆ ವಾಣೀವಿಲಾಸ ಸನ್ನಿಧಾನ. ರಾಜಮಾತೆಯವರ ಪ್ರಯತ್ನದಲ್ಲಿ ಜೊತೆಯಾಗಿದ್ದು ಪ್ರಧಾನಿಯಾಗಿ ಅವರ ಬೆಂಬಲಕ್ಕೆ ನಿಂತವರು ತಿರುಮಲರಾಯರು. ಕರೂರಿನ ಆಡಳಿತ ತಿರುಮಲರಾಯರ ಮೇಲ್ವಿಚಾರಣೆಯಲ್ಲಿದ್ದಾಗ ಶ್ರೀನಿವಾಸಾಚಾರ್ಯರು ಅವರ ಮನೆಯಲ್ಲಿ ದೇವತಾರ್ಚನೆ ಮಾಡುತ್ತಿದ್ದರಂತೆ. ನಂತರದ ದಿನಗಳಲ್ಲಿ ಶ್ರೀರಂಗಪಟ್ಟಣಕ್ಕೆ ಬಂದ ಶ್ರೀನಿವಾಸಾಚಾರ್ಯರು ಟಿಪ್ಪುವಿನ ಸಮೀಪದಲ್ಲಿದ್ದುಕೊಂಡೇ ಮೈಸೂರು ರಾಜಮನೆತನದ ಹಿತರಕ್ಷಣೆಗಾಗಿ ಶ್ರಮಿಸಿದರು ಎಂದು 'ಶ್ರೀಕೃಷ್ಣ ಭೂಪಾಲ' ಕಾದಂಬರಿ ಹೇಳುತ್ತದೆ.

ನಂತರದ ದಿನಗಳಲ್ಲಿ ಮೈಸೂರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆಗೆ ಒಳಪಟ್ಟಮೇಲೆ ಕರೂರು ಶ್ರೀನಿವಾಸಾಚಾರ್ಯರು ಅರಸರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ರಘುನಾಥಾಚಾರ್ಯರೆಂಬುವವರು ಇವರ ತಮ್ಮನ ಮಗ. ರಘುನಾಥಾಚಾರ್ಯರ ಪುತ್ರ ಚಿಕ್ಕ ಕರೂರು ಶ್ರೀನಿವಾಸಾಚಾರ್ಯ ಅಥವಾ 'ಸುಂದರ ಸುದರ್ಶನಾಚಾರ್ಯ'ರು ಕೂಡ ಮೈಸೂರು ಅರಸರ ಸೇವೆಯಲ್ಲಿದ್ದವರೇ.

ರಘುನಾಥಾಚಾರ್ಯರ ಇನ್ನೊಬ್ಬ ಮಗ ತಿರುಮಲಾಚಾರ್ಯರ ಪುತ್ರರೇ ಶ್ರೀನಿವಾಸರಂಗಾಚಾರ್ಯರು. ಮೈಸೂರು ಟ್ರೇನಿಂಗ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀನಿವಾಸರಂಗಾಚಾರ್ಯರು 'ಮೈಸೂರ ಮೈಸಿರಿ', 'ಕರ್ಣಾಟಕ ಮೂಲಾದರ್ಶ ಅಥವಾ ಕನ್ನಡದ ಕನ್ನಡಿ' ಮುಂತಾದ ಚರಿತ್ರಾರ್ಹ ಕೃತಿಗಳನ್ನು ರಚಿಸಿದ್ದರು. ಒಡೆಯರ ಕಾಲದ ಮೈಸೂರಿನ ಚಿತ್ರಣವನ್ನು 'ಮೈಸೂರ ಮೈಸಿರಿ' ಕಟ್ಟಿಕೊಡುತ್ತದೆ. ಇನ್ನು ಕರ್ಣಾಟಕ ಮೂಲಾದರ್ಶ, ಕನ್ನಡವು ಸಂಸ್ಕೃತಜನ್ಯ ಭಾಷೆ ಎಂಬ ವಾದವನ್ನು ಮುಂದಿಡುವ ಕೃತಿ.

ಶ್ರೀನಿವಾಸರಂಗಾಚಾರ್ಯರ ಪುತ್ರರೇ ಪಂಡಿತ ತಿರು ಶ್ರೀನಿವಾಸಾಚಾರ್ಯರು. ಹೊಸಗನ್ನಡ ವ್ಯಾಕರಣದ ಆದ್ಯ ಗ್ರಂಥಕರ್ತರಲ್ಲೊಬ್ಬರಾಗಿದ್ದ ತಿರುಶ್ರೀಯವರು ಪ್ರೌಢಶಾಲಾ ಕನ್ನಡ ವ್ಯಾಕರಣ, ಸಂಸ್ಕೃತಿ ಪ್ರದೀಪ ಮುಂತಾದ ಕೃತಿಗಳನ್ನು ರಚಿಸಿದ್ದರು. ಮಧುಗಿರಿ, ಹಾಸನ, ಆಯನೂರು, ಮೈಸೂರು ಮುಂತಾದೆಡೆಗಳಲ್ಲಿ ಪ್ರೌಢಶಾಲಾ ಕನ್ನಡ ಪಂಡಿತರಾಗಿ ಕೆಲಸಮಾಡಿದ್ದ ತಿರು ಶ್ರೀನಿವಾಸಾಚಾರ್ಯರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟರಾಗಿದ್ದರು. ೧೯೫೬ರಿಂದ ೫೯ರ ನಡುವೆ ಹಾಸನದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಅವರ ವಿದ್ಯಾರ್ಥಿಯಾಗಿದ್ದ ಮೈ. ಶ್ರೀ. ನಟರಾಜರು ತಿರುಶ್ರೀಯವರ ವ್ಯಾಕರಣ ಪಾಠ ಕೇಳಲು ವಿಶೇಷ ತರಗತಿಗಳಿಗೆ ಹೋಗುತ್ತಿದ್ದದ್ದು ಹಾಗೂ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಲು ಅವರೊಡನೆ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದದ್ದನ್ನು ಆಪ್ತವಾಗಿ ನೆನಪಿಸಿಕೊಳ್ಳುತ್ತಾರೆ. ಚರ್ಚಾಸ್ಪರ್ಧೆಗಳಿಗೆ ತಯಾರಿ ಮಾಡುವಾಗ ಹಾಗೂ ಆ ಸಂಬಂಧದಲ್ಲಿ ಪ್ರಯಾಣಮಾಡುವಾಗ ಅವರು ಶ್ರೀನಿವಾಸಾಚಾರ್ಯರೊಡನೆ ಸಾಕಷ್ಟು ರಸಘಳಿಗೆಗಳನ್ನು ಕಳೆದಿದ್ದರಂತೆ.

ಪಂಡಿತ ತಿರು ಶ್ರೀನಿವಾಸಾಚಾರ್ಯರು ಹಾಗೂ ಅವರ ಹಿರಿಯರ ಬಗ್ಗೆ, ಅವರ ಕೃತಿಗಳ ಬಗ್ಗೆ ಯಾವುದಾದರೂ ಮಾಹಿತಿ, ಅವರ ಒಡನಾಟದ ನೆನಪು ಅಥವಾ ಅವರ ಯಾವುದೇ ಕೃತಿಯ ಪ್ರತಿ ನಿಮ್ಮಲ್ಲಿದ್ದರೆ ದಯಮಾಡಿ ನಮ್ಮೊಡನೆ ಹಂಚಿಕೊಳ್ಳಬೇಕೆಂಬುದು ಅವರ ಕುಟುಂಬದವರೆಲ್ಲರ ಕೋರಿಕೆ. 

You Might Also Like

0 Responses

Popular Posts

Like us on Facebook