ಕಾಡಿನಲ್ಲಿ ನಾಡುಪ್ರಾಣಿ

10:34 AM

"ಕಾಡಲ್ಲಿ ಕಾರ್ ಓಡ್ಸೋದೇ ಒಂದು ಮಜಾ ಗೊತ್ತಾ?" ಅಂದ ಅವನು.

ಸರಿ ಅದೇನು ಮಜಾನೋ ನೋಡೇಬಿಡೋಣ ಅಂತ ಒಂದಿಬ್ಬರು ಗೆಳೆಯರೂ ಅವನ ಜೊತೆಗೇ ಹೊರಟರು. ಮ್ಯೂಸಿಕ್ ಸಿಸ್ಟಮ್ಮಿನ ಸಂಗೀತದ ಅಬ್ಬರವನ್ನೂ ಮೀರಿಸುವ ಸ್ಪೀಡಲ್ಲಿ ಕಾಡಿನತ್ತ ಓಡಿತು ಕಾರು.

* * *

ಬೇಸಿಗೆ ಶುರುವಾಗುತ್ತಿದ್ದ ಕಾಲ, ಎಲ್ಲೆಲ್ಲಿ ನೋಡಿದರೂ ಒಣಗಿದ ಎಲೆಗಳ ರಾಶಿ ಕಾಡಲ್ಲಿ ಇವರ ಕಾರನ್ನು ಸ್ವಾಗತಿಸಿತು. ವೇಗದ ಮಿತಿ, ಶಬ್ದ ಮಾಡದಂತೆ ನಿರ್ಬಂಧ, ಪ್ಲಾಸ್ಟಿಕ್ಕು ನಿಷೇಧ ಹಾಳೂಮೂಳುಗಳ ಕುರಿತು ಪ್ರವೇಶದ್ವಾರದ ಬಳಿಯಿದ್ದ ಎಚ್ಚರಿಕೆಯ ಫಲಕಗಳು ಕಾರಿನಲ್ಲಿದ್ದವರಿಗೆ ಕಾಣಲಿಲ್ಲ; ಕಾರಿನ ವೇಗ-ಸಂಗೀತದ ಅಬ್ಬರ ಕಡಿಮೆಯೂ ಆಗಲಿಲ್ಲ.

"ಇದೆಂಥಾ ಕಾಡು ಮಗಾ, ಹುಲಿ-ಸಿಂಹ ಇಲ್ದಿದ್ರೆ ಬೇಡ ಒಂದು ಆನೇನೂ ಕಾಣ್ತಾ ಇಲ್ಲ!?" ಎಂದವನಿಗೆ ಅವನ ಕಾರಿನ ಹಾರ್ನು ಕೇಳಿ ಬೆದರಿ ಓಡಿದ ಕಾಡುಕುರಿ ಕಾಣಲಿಲ್ಲ. ಕೊಂಚ ಎತ್ತರದಲ್ಲಿದ್ದ ಗಿಡದ ಸೊಪ್ಪು ತಿನ್ನಲು ಎರಡು ಕಾಲಿನಲ್ಲಿ ನಿಂತು ಸರ್ಕಸ್ ಮಾಡುತ್ತಿದ್ದ ಜಿಂಕೆ, ಮರದ ಮೇಲೆ ಕೂತಿದ್ದ ಮಂಗಟ್ಟೆ ಪಕ್ಷಿ, ಪಕ್ಕದ ರೆಂಬೆಯ ಮೇಲೆ ಟೆಡ್ಡಿಬೇರ್‌ನಂತೆ ಕುಳಿತಿದ್ದ ಕೆಂದಳಿಲು, ಅದೇ ಮರದ ಅಡಿಯಲ್ಲಿದ್ದ ನವಿಲು ಜೋಡಿ ಯಾವುದನ್ನೂ ಗಮನಿಸದ ಕಾರು ಓಡುತ್ತಲೇ ಇತ್ತು.

ಕೊಂಚ ಮುಂದೆ ಹೋಗುತ್ತಿದ್ದಂತೆ ಹಿಂದಿನ ಸೀಟಿನಲ್ಲಿದ್ದವನಿಗೆ ಅದೇನೋ ಜೋಶ್ ಬಂತು. "ಮಗಾ ಸ್ವಲ್ಪ ನಿಲ್ಸು, ಈ ಲೊಕೇಶನ್ ನೋಡ್ತಾ ಇದ್ರೆ ಎಣ್ಣೆ ಹೊಡೀಬೇಕು ಅನ್ನಿಸ್ತಾ ಇದೆ" ಅಂದ. ಕಾರು ನಿಂತಿತು. ಒಂದೆರಡು ಬಾಟಲಿ, ನಾಲ್ಕಾರು ಪ್ಲಾಸ್ಟಿಕ್ ಚೀಲ ಖಾಲಿಯಾದವು. ಖಾಲಿಯಾದ ಮೇಲೆ ಅವಕ್ಕೆ ಕಾರಿನಲ್ಲೇನು ಕೆಲಸ, ಸದ್ದಿಲ್ಲದೆ ಕಾಡುಪಾಲಾದವು.

ಇಷ್ಟು ಹೊತ್ತಿಗೆ ಕಾಡಿನ ಮಜಾ ಅನುಭವಿಸಿ ಮುಗಿಸಿದ್ದವನು ಕಾರನ್ನು ಹಿಂದಕ್ಕೆ ತಿರುಗಿಸಿದ. ಮ್ಯೂಸಿಕ್ ಸಿಸ್ಟಮ್ಮಿನ ಸಂಗೀತದ ಅಬ್ಬರದ ಜೊತೆಗೆ ರೇಸ್ ಮಾಡುತ್ತ ಕಾರು ವಾಪಸ್ ನಾಡಿನತ್ತ ಓಡಿತು. ಇನ್ನೇನು ಮುಗಿಯಲಿದ್ದ ಸಿಗರೇಟನ್ನು ಹಿಡಿದಿದ್ದವ ಅದನ್ನು ಥೇಟ್ ಸಿನಿಮಾ ಹೀರೋ ಸ್ಟೈಲಿನಲ್ಲೇ ಕಾರಿನಿಂದಾಚೆ ಚಿಮ್ಮಿಸಿದ.

* * *

"ಕಾಡ್ಗಿಚ್ಚಿನಿಂದ ಅಪಾರ ಹಾನಿ" ಎಂಬ ಸುದ್ದಿ ಟೀವಿ ಚಾನೆಲ್ಲಿನ ಸ್ಕ್ರಾಲಿನಲ್ಲಿ ಕೊಂಚಹೊತ್ತು ಓಡಾಡಿ ಮರೆಯಾಯಿತು. ಅಕಸ್ಮಾತ್ತಾಗಿ ಅದನ್ನು ನೋಡಿದವನು ತನ್ನ ಗೆಳೆಯನಿಗೆ ಫೋನು ಮಾಡಿ "ಮಗಾ ಕಾಡಲ್ಲಿ ಬೆಂಕಿ ಅಂತೆ, ಬೆಂಕಿ ಮಧ್ಯದಲ್ಲಿ ಕಾರ್ ಓಡ್ಸೋದೂ ಮಜಾನೇ ಇರ್ಬೇಕು ಅಲ್ವಾ?" ಅಂತ ಕೇಳಿದ.

ಹುಲ್ಲಿನ ಜೊತೆಗೆ ಪ್ಲಾಸ್ಟಿಕ್ ಚೀಲವನ್ನೂ ತಿಂದು ಸತ್ತ ಜಿಂಕೆಗೆ ಯಾವ ಪೇಪರಿನಲ್ಲೂ ಶ್ರದ್ಧಾಂಜಲಿ ಪ್ರಕಟವಾಗಲಿಲ್ಲ.

ಈಚೆಗೆ ಕೆಲದಿನಗಳಿಂದ ಎಲ್ಲೆಲ್ಲೂ ಕಾಡಿನ ಬೆಂಕಿಯದೇ ಸುದ್ದಿ. ನಮ್ಮ ದೇಶದಲ್ಲಿ ಕಾಡಿನ ಬೆಂಕಿ ಬಹುತೇಕ ಯಾವಾಗಲೂ ಮಾನವನ ಹಸ್ತಕ್ಷೇಪದಿಂದಲೇ ಪ್ರಾರಂಭವಾಗುತ್ತದೆ. ಮಾನವನ ದುಷ್ಕೃತ್ಯ ಮತ್ತು ಬೇಜವಾಬ್ದಾರಿಯೇ ಕಾಡ್ಗಿಚ್ಚಿಗೆ ನೇರ ಕಾರಣ ಎಂಬ ಬಗ್ಗೆ ಸಾರ್ವತ್ರಿಕ ಅರಿವು ಮೂಡಿಸುವುದು, ಅಳಿದುಳಿದಿರುವ ಅರಣ್ಯಪ್ರದೇಶವನ್ನು ಬೆಂಕಿಯಿಂದ ರಕ್ಷಿಸಲು ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಯಾವುದೇ ಸಂದರ್ಭದಲ್ಲಿ ಅರಣ್ಯ ಪ್ರದೇಶಗಳಿಗೆ ಹೋದಾಗ ಜವಾಬ್ದಾರಿಯಿಂದ ವರ್ತಿಸುವುದು ಈ ನಿಟ್ಟಿನಲ್ಲಿ ನಾವು ಮಾಡಬಹುದಾದ ಕೆಲಸಗಳಲ್ಲಿ ಮೊದಲನೆಯದು.

You Might Also Like

1 Responses

Popular Posts

Like us on Facebook