ಪ್ರಜಾವಾಣಿ ಸಮೀಕ್ಷೆ: ಕನ್ನಡದ ನಾಳೆಗಳು
10:22 AMದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಣೆಗೆಂದು "ವೃತ್ತಿ ಮತ್ತು ಪ್ರವೃತ್ತಿಯ ಕ್ಷೇತ್ರಗಳ ಹಿನ್ನೆಲೆಯಲ್ಲಿ ಕನ್ನಡದ ನಾಳೆಗಳನ್ನು ಹೇಗೆ ಊಹಿಸುತ್ತೀರಿ?" ಎಂಬ ಪ್ರಶ್ನೆಗೆ ಉತ್ತರಿಸುವಂತೆ ಪ್ರಜಾವಾಣಿಯಿಂದ ಆಹ್ವಾನ ಬಂದಿತ್ತು. ಆ ಪ್ರಶ್ನೆಗೆ ನಾನು ಬರೆದ ಉತ್ತರ ಇಲ್ಲಿದೆ."ಕನ್ನಡದ ಬಗ್ಗೆ ಯಾರಿಗೂ ಆಸಕ್ತಿಯೇ ಇಲ್ಲ, ಕನ್ನಡದಲ್ಲಿ ಓದುಗರೇ ಇಲ್ಲ, ಕನ್ನಡ ಭಾಷೆಯನ್ನು ನಾವೆಲ್ಲ ಕಷ್ಟಪಟ್ಟು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು" - ಇಂತಹ ಮಾತುಗಳನ್ನು ನಾವು ಪದೇಪದೇ ಕೇಳುತ್ತೇವೆ. ಮೇಲಿಂದ ಮೇಲೆ ಈ ರೀತಿಯ ಋಣಾತ್ಮಕ ಹೇಳಿಕೆಗಳನ್ನೇ ಕೇಳಿದವರಲ್ಲಿ ಕನ್ನಡವೂ ಅಳಿವಿನಂಚಿನಲ್ಲಿರುವ ಪ್ರಭೇದ ಇರಬೇಕೇನೋ ಎನ್ನುವ ಭಾವನೆ ಮೂಡಿದರೂ ತಪ್ಪಿಲ್ಲ. ಆದರೆ ಕನ್ನಡದ ಪರಿಸ್ಥಿತಿ ಅಷ್ಟೆಲ್ಲ ನಿರಾಶಾದಾಯಕವಾಗಿದೆ ಎಂದು ನಾನು ಭಾವಿಸುವುದಿಲ್ಲ.
ಇದಕ್ಕೆ ಕಾರಣಗಳು ಹಲವು. ಮೊದಲನೆಯದೆಂದರೆ ಹೊಸ ಮಾಧ್ಯಮಗಳಲ್ಲಿ ಕನ್ನಡದ ಬೆಳವಣಿಗೆ - ಕಂಪ್ಯೂಟರ್ ಮೊಬೈಲ್ ಇತ್ಯಾದಿಗಳಿಂದ ಇಂಗ್ಲಿಷ್ ಪ್ರಭಾವ ಜಾಸ್ತಿಯಾಗುತ್ತಿದೆ ಎನ್ನುವಷ್ಟರಲ್ಲೇ ಅಲ್ಲೆಲ್ಲ ಕನ್ನಡದ ಕಂಪು ಪಸರಿಸುತ್ತಿದೆ. ಕಂಪ್ಯೂಟರಿನಲ್ಲಿ ಕನ್ನಡವೆಂದರೆ ಅದು ಟೈಪಿಂಗ್ ಅಷ್ಟೇ ಎನ್ನುವ ಭಾವನೆ ಈಗ ಇರಬೇಕಿಲ್ಲ. ಬ್ಲಾಗು-ವೆಬ್‌ಸೈಟುಗಳಲ್ಲಿ ಸೋಶಿಯಲ್ ನೆಟ್‌ವರ್ಕುಗಳಲ್ಲಿ ಕನ್ನಡದ ಬಳಕೆ ಇಂದು ತೀರಾ ಸಹಜ ಎನ್ನಿಸುತ್ತಿದೆ. ಡೆಸ್ಕ್‌ಟಾಪ್-ಲ್ಯಾಪ್‌ಟಾಪುಗಳಷ್ಟೇ ಅಲ್ಲ, ಮೊಬೈಲ್-ಟ್ಯಾಬ್ಲೆಟ್ಟುಗಳಲ್ಲೂ ಕನ್ನಡಕ್ಕೆ ಮಹತ್ವದ ಸ್ಥಾನ ಸಿಕ್ಕಿದೆ. ಯೂಟ್ಯೂಬಿನಲ್ಲಿ, ಸಿಡಿ-ಡಿವಿಡಿಗಳಲ್ಲಿ ಟ್ವಿಂಕಲ್ ಟ್ವಿಂಕಲ್ ಕೇಳುವಷ್ಟೇ ಸುಲಭವಾಗಿ ಕನ್ನಡದ ಮಕ್ಕಳು 'ಆನೆ ಬಂತೊಂದಾನೆ'ಯನ್ನೂ 'ನಾಯಿಮರಿ ನಾಯಿಮರಿ'ಯನ್ನೂ ಕೇಳುತ್ತಿದ್ದಾರೆ. ಇಂಗ್ಲಿಷಿನ ಇ-ಪುಸ್ತಕದ ಜೊತೆಗೆ ಕನ್ನಡದ ಇ-ಪುಸ್ತಕವನ್ನು ಅಪೇಕ್ಷಿಸುವವರು, ಅವರಿಗೆ ಬೇಕಾದುದನ್ನು ಒದಗಿಸುವವರು ಇಬ್ಬರೂ ಇದೀಗ ಮಾರುಕಟ್ಟೆಯಲ್ಲಿದ್ದಾರೆ. ಇದಕ್ಕೆಲ್ಲ ಪೂರಕವಾಗಿ ಅಗತ್ಯ ತಂತ್ರಜ್ಞಾನಗಳೂ ಕನ್ನಡಕ್ಕೆ ಬರುತ್ತಿವೆ.
ಹೆಚ್ಚುಹೆಚ್ಚಾಗಿ ಆಗಬೇಕಾದ್ದೇನಾದರೂ ಇದ್ದರೆ ಅದು ಇಷ್ಟೇ: ಹೊಟ್ಟೆಪಾಡಿನಿಂದ ಹಿಡಿದು ಜ್ಞಾನಾರ್ಜನೆಯವರೆಗೆ ಯಾವುದೇ ಕಾರಣದಿಂದ ಹೊಸ ಭಾಷೆಗಳನ್ನು ಕಲಿಯುವವರು ಕನ್ನಡಾಭಿಮಾನವನ್ನೂ ಉಳಿಸಿಕೊಂಡರೆ, ಮನೆಯ ಮಕ್ಕಳಿಗೆ ಕನ್ನಡದ ವಾತಾವರಣ ದೊರಕುವುದು ಮುಂದುವರೆದರೆ, ಕನ್ನಡದ ಸಂಸ್ಕೃತಿ ಇತರ ಯಾವುದೇ ಸಂಸ್ಕೃತಿಗಿಂತ ಕಡಿಮೆಯಿಲ್ಲ ಎನ್ನುವ ಭಾವನೆ ಅವರ ಮನಸ್ಸಿನಲ್ಲಿ ಭದ್ರವಾದರೆ - ನಾಳೆ ಕನ್ನಡದ ನಾಳೆಗಳ ಬಗ್ಗೆ ಕಳವಳಪಡುವ ಅಗತ್ಯವೇ ಇರಲಾರದು!
೨೦೧೪ರ ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ
0 Responses