ಬದುಕು ರೂಪಿಸಿದ ಶಿಕ್ಷಕರು

11:29 AM

ಶಾಲೆಯ ಪಾಠ ಹೇಳಿಕೊಡುವುದಷ್ಟೇ ಶಿಕ್ಷಕರ ಕೆಲಸ ಆಗಿದ್ದರೆ ಬಹುಶಃ ನಾವು ಅವರನ್ನು ಇಷ್ಟೊಂದು ನೆನಪಿಸಿಕೊಳ್ಳುತ್ತಿರಲಿಲ್ಲವೇನೋ.

ನನ್ನ ಬಾಲ್ಯದ ದಿನಗಳಲ್ಲಿ ನಾವಿದ್ದದ್ದು ನಾಗರಹೊಳೆ ಕಾಡಂಚಿನ ಪುಟ್ಟ ಊರೊಂದರಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಒದಗಿಬಂದದ್ದು ಆ ಊರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದ್ದ ಅರೆಬರೆ ಸೌಲಭ್ಯಗಳನ್ನೇ ಬಳಸಿಕೊಂಡು ಆಸಕ್ತಿಯಿಂದ ಪಾಠಹೇಳುತ್ತಿದ್ದ ಅಲ್ಲಿನ ಶಿಕ್ಷಕವೃಂದವನ್ನು ಇಂದಿಗೂ ನೆನಪಿಸಿಕೊಳ್ಳಬೇಕು. ಬ್ಯಾಂಕು - ಪೋಸ್ಟ್ ಆಫೀಸುಗಳನ್ನೆಲ್ಲ ಪರಿಚಯಿಸುವ ಮೂಲಕ ಹೊರಗಿನ ಪ್ರಪಂಚದ ವ್ಯವಹಾರಜ್ಞಾನವನ್ನೂ ಬೆಳೆಸಿದ್ದು ಈ ಶಾಲೆ.

ಕನ್ನಡ ಮಾಧ್ಯಮದಲ್ಲಿ ಓದಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂಗೆ ಪಕ್ಷಾಂತರವಾಗುವ ವಿದ್ಯಾರ್ಥಿಗಳನ್ನು ಕೀಳರಿಮೆ ಬಹಳ ಸುಲಭವಾಗಿ ಕಾಡಬಲ್ಲದು. "ಅಯ್ಯೋ ಪಾಪ, ಇಂಗ್ಲಿಷ್ ಬರುವುದಿಲ್ಲ" ಎನ್ನುವ ಅನುಕಂಪ ಜಾಸ್ತಿಯಾದರೆ ಅದೂ ಕಷ್ಟವೇ - ಈ ಅನುಕಂಪದ ಭಾರ ಆತ್ಮವಿಶ್ವಾಸವನ್ನೇ ಉಡುಗಿಸಿಬಿಡುತ್ತದೆ.
ಇಂಗ್ಲಿಷ್ ಮಾಧ್ಯಮಕ್ಕೆ ಹೊರಗಿನವನೆಂಬ ಕೀಳರಿಮೆ ಕಾಡದಂತೆ ನೋಡಿಕೊಂಡ ಶಿಕ್ಷಕರು ಸಿಕ್ಕಿದ್ದು ನನ್ನ ಪ್ರೌಢಶಾಲಾ ವ್ಯಾಸಂಗದ ಸಂದರ್ಭದ ಅತಿಮುಖ್ಯ ಸಂಗತಿಗಳಲ್ಲೊಂದು. ಅಯ್ಯೋ ಪಾಪ ಎಂದು ಅನುಕಂಪ ತೋರುವ ಬದಲಿಗೆ ಉಳಿದವರಿಗೆ ಸರಿಸಮನಾಗಿ ನಿಲ್ಲುವ ಆತ್ಮವಿಶ್ವಾಸ ಬೆಳೆಸಿದವರು ನನ್ನ ಶಿಕ್ಷಕರು.

ಸ್ಪರ್ಧೆಯಲ್ಲಿ ಭಾಗವಹಿಸಿದ ತಕ್ಷಣ ನಾವೇ ಗೆಲ್ಲಬೇಕು ಎಂದು ಅಪೇಕ್ಷಿಸುವವರೇ ಹೆಚ್ಚು. ಕೇಳುವವರ ವಿಷಯ ಹಾಗಿರಲಿ, ಸ್ಪರ್ಧೆಯ ಫಲಿತಾಂಶಕ್ಕಿಂತ ಅದರಲ್ಲಿ ಭಾಗವಹಿಸಿ ಪಡೆಯುವ ಅನುಭವ ಮುಖ್ಯ ಎಂದು ಹೇಳಿಕೊಡುವವರೇ ಅಪರೂಪವಾಗಿಬಿಟ್ಟಿದ್ದಾರೆ. ಇದಕ್ಕೆ ಅಪವಾದ ಎಂಬಂತಿದ್ದವರು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನನ್ನ ಶಿಕ್ಷಕರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ ನನ್ನ ಆಸಕ್ತಿಯ ಕ್ಷೇತ್ರವನ್ನು ಕಂಡುಕೊಳ್ಳಲು ನೆರವಾದವರು ಅವರು. ಸೋತಾಗ ಹುರಿದುಂಬಿಸುವ ಮಾತುಗಳನ್ನಾಡಿ, ಸಣ್ಣಸಣ್ಣ ಗೆಲುವುಗಳಿಗೂ ಸಂಭ್ರಮಿಸಿ, ಮುಂದೆ ಇನ್ನೂ ಹೆಚ್ಚಿನದನ್ನು ಸಾಧಿಸಲು ಪ್ರಯತ್ನಿಸುವ ಧೈರ್ಯ ತಂದುಕೊಟ್ಟ ಶ್ರೇಯ ಖಂಡಿತಾ ಅವರಿಗೇ ಸೇರಬೇಕು.

ಕಾಲೇಜಿಗೆ ಸೇರುವ ವೇಳೆಗೆ ನಾನು ಮಹಾನಗರದ ನಿವಾಸಿಯಾಗಿದ್ದೆ. ಶಾಲೆಯಲ್ಲಿದ್ದಂತೆ ವಿದ್ಯಾರ್ಥಿಗಳ ಕುರಿತು ವೈಯಕ್ತಿಕ ಆಸಕ್ತಿ ವಹಿಸುವ ಶಿಕ್ಷಕರು ಕಾಲೇಜಿನಲ್ಲಿ ಸಿಗುವುದಿಲ್ಲ ಎನ್ನುವ ಮಾತಿಗೆ ವ್ಯತಿರಿಕ್ತವಾದ ಅನುಭವವಾದದ್ದು ಇಲ್ಲಿ. ಉತ್ತರಪತ್ರಿಕೆಗಳನ್ನು ಗಮನಿಸಿ "ನಿನ್ನ ಬರವಣಿಗೆ ಚೆನ್ನಾಗಿದೆ" ಎಂದು ಮೆಚ್ಚಿಕೊಂಡವರು, ಮುಂದೆ ಅದನ್ನೊಂದು ಹವ್ಯಾಸವಾಗಿ ಬೆಳೆಸಿಕೊಳ್ಳಲು ಕಾರಣರಾದವರು ಕಾಲೇಜಿನ ನನ್ನ ಶಿಕ್ಷಕರು. ಪಠ್ಯಸಂಬಂಧಿತ ಕೆಲಸಗಳೇ ಬೇಕಾದಷ್ಟಿರುವಾಗ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳನ್ನೂ ಗಮನಿಸಿ ಪ್ರೋತ್ಸಾಹಿಸಿದವರು ಅವರು. ಮುಂದೆ ಪದವಿ ವ್ಯಾಸಂಗದ ಸಂದರ್ಭದಲ್ಲೂ ಇಷ್ಟೇ ಸ್ನೇಹಪರರಾದ ಶಿಕ್ಷಕರು ದೊರೆತರು.

ಪದವಿ ವ್ಯಾಸಂಗದ ಸಂದರ್ಭದಲ್ಲಿ ಬರವಣಿಗೆಯ ಹವ್ಯಾಸಕ್ಕೆ ಹೆಚ್ಚಿನ ಸಮಯ ಕೊಡುವುದು, ಬರೆದದ್ದನ್ನು ಪತ್ರಿಕೆಗಳಿಗೆ ಕಳುಹಿಸುವುದೆಲ್ಲ ಸಾಧ್ಯವಾಗುತ್ತಿತ್ತು. ಶಾಲೆ ಕಾಲೇಜುಗಳಾಚೆಯಲ್ಲೂ ನನಗೆ ಮೇಷ್ಟರೊಬ್ಬರು ದೊರೆತದ್ದು ಆ ಸಂದರ್ಭದಲ್ಲಿ ನಡೆದ ಘಟನೆ.
ಒಂದು ದಿನ ನನ್ನ ಇಮೇಲಿನಲ್ಲಿ ಅಪರೂಪದ ಪತ್ರವೊಂದು ಕಾಣಿಸಿಕೊಂಡಿತು: "ಪ್ರಿಯ ಶ್ರೀನಿಧಿ, ವಿವಿಧ ಪತ್ರಿಕೆಗಳಲ್ಲಿ ನಿನ್ನ ಲೇಖನಗಳನ್ನು ಓದುತ್ತಿರುತ್ತೇನೆ. ಮಾಹಿತಿ ತಂತ್ರಜ್ಞಾನ ಕುರಿತ ಲೇಖನಗಳನ್ನು ನೀನು ನಮ್ಮ ಪತ್ರಿಕೆಗೂ ಯಾಕೆ ಬರೆಯಬಾರದು?" ಎನ್ನುವುದು ಆ ಪತ್ರದಲ್ಲಿದ್ದ ಸಂದೇಶ. ಯಾವ ರೀತಿಯ ಲೇಖನಗಳನ್ನು ಬರೆಯಬಹುದು ಎನ್ನುವ ಬಗ್ಗೆ ಮಾಹಿತಿಯೂ ಅದೇ ಪತ್ರದಲ್ಲಿತ್ತು.

ಆ ಪತ್ರ ಬರೆದವರು ಹಿರಿಯ ಪತ್ರಕರ್ತ-ಲೇಖಕರಾದ ಶ್ರೀ ನಾಗೇಶ ಹೆಗಡೆ. ಆಗಷ್ಟೆ ಬರೆಯಲು ಪ್ರಾರಂಭಿಸಿದವನಿಗೆ ಇಂತಹುದೊಂದು ಪತ್ರ ಕಳುಹಿಸಿ ಅವರು ನೀಡಿದ ಪ್ರೋತ್ಸಾಹವಿದೆಯಲ್ಲ, ಅಂತಹ ಪ್ರೋತ್ಸಾಹ ಕೊಡುವವರು ಎಲ್ಲೋ ಬೆರಳೆಣಿಕೆಯಷ್ಟು ಜನ ಇರಬಹುದಷ್ಟೆ. ಅಲ್ಲಿಂದ ಇಲ್ಲಿಯವರೆಗಿನ ಒಂದು ದಶಕಕ್ಕೂ ಮಿಕ್ಕ ಅವಧಿಯಲ್ಲೂ ಅಷ್ಟೆ - ನಾಗೇಶ ಹೆಗಡೆಯವರು ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ.

ಪ್ರಕಟಣೆಗೆಂದು ಲೇಖನವೊಂದನ್ನು ಕಳುಹಿಸಿದಾಗ ಅದನ್ನು ಅಚ್ಚುಕಟ್ಟಾಗಿ ಬದಲಿಸಿ ಹೊಸ ರೂಪಕೊಡುವುದರಿಂದ ಹಿಡಿದು ಲೇಖನ ಚೆನ್ನಾಗಿಲ್ಲದಾಗ 'Scrap and Rewrite!' ಎನ್ನುವವರೆಗೆ ಅವರು ನೀಡಿರುವ ಮಾರ್ಗದರ್ಶನ ಅಮೂಲ್ಯವಾದದ್ದು. ಇಜ್ಞಾನ ಡಾಟ್ ಕಾಮ್ ಮೂಲಕ ಮಾಡುತ್ತಿರುವ ಪ್ರಯೋಗಗಳಿಗೂ ಅವರ ಬೆಂಬಲ ಸದಾಕಾಲ ನನ್ನೊಡನೆ ಇದೆ. ಅಷ್ಟೇ ಏಕೆ, ಲೇಖನವೊಂದನ್ನು ಕಳುಹಿಸಿದಾಗ ಅದನ್ನು ಓದಿ, ಉತ್ತಮ ಅಂಶಗಳನ್ನು ಗುರುತಿಸಿ, ಇನ್ನೂ ಹೆಚ್ಚು ವಿವರ ಸೇರಿಸಬೇಕಾದ್ದನ್ನು ಹೇಳಿ, ನಿರೂಪಣೆಯ ಲೋಪದೋಷಗಳನ್ನು ವಿವರಿಸಿ, ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ ಅವರ ನೆನಪಿನ ಕೆಲವು ಸಂಗತಿಗಳನ್ನು ಉದಾಹರಿಸುವಷ್ಟು ವ್ಯವಧಾನ - ಪ್ರೀತಿ ಅದೆಷ್ಟು ಜನರಲ್ಲಿ ಇದ್ದೀತು? ಆ ಪ್ರೀತಿ ನನಗೆ ದೊರೆತಿರುವುದು ನಿಜಕ್ಕೂ ನನ್ನ ಅದೃಷ್ಟವೆಂದು ನಾನು ಭಾವಿಸುತ್ತೇನೆ.

ಸೆಪ್ಟೆಂಬರ್ ೨೦೧೫ರ 'ಶಿಕ್ಷಣ ವಾರ್ತೆ'ಗಾಗಿ ಬರೆದ ಲೇಖನ

You Might Also Like

0 Responses

Popular Posts

Like us on Facebook